5 ವರ್ಷದೊಳಗೆ 23 ಎಕ್ಸ್‌ಪ್ರೆಸ್ ಹೆದ್ದಾರಿ ಪೂರ್ಣ: ಎನ್‌ಎಚ್‌ಎಐ

Update: 2020-08-13 18:17 GMT

ಹೊಸದಿಲ್ಲಿ, ಆ.13: ಮಾರ್ಚ್ 2025ರೊಳಗೆ ಎಕ್ಸ್‌ಪ್ರೆಸ್ ವೇ ಮತ್ತು ಆರ್ಥಿಕ ಕಾರಿಡಾರ್ ಜಾಲಬಂಧ ಹೊಂದಿರುವ 23 ಹೊಸ ಹೆದ್ದಾರಿಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ದ ಅಧಿಕಾರಿಗಳು ಹೇಳಿದ್ದಾರೆ.

 ದಿಲ್ಲಿ-ಮುಂಬೈ, ಅಹ್ಮದಾಬಾದ್-ಧೊಲೇರಾ, ಅಮೃತಸರ-ಜಾಮ್‌ನಗರ ಸಹಿತ ನಾಲ್ಕು ಎಕ್ಸ್‌ಪ್ರೆಸ್ ಮಾರ್ಗಗಳು ಮಾರ್ಚ್ 2023ರೊಳಗೆ ಸಿದ್ಧಗೊಳ್ಳಲಿವೆ. 2024ರ ಮಾರ್ಚ್‌ನೊಳಗೆ ಇನ್ನೂ 9 ಎಕ್ಸ್‌ಪ್ರೆಸ್ ಮಾರ್ಗಗಳು ಸಿದ್ಧವಾಗಲಿದೆ. ಒಟ್ಟು 7,800 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್ ಮಾರ್ಗಗಳ ಕಾಮಗಾರಿಗೆ ಮುಂದಿನ 5 ತಿಂಗಳಲ್ಲಿ ಸುಮಾರು 3.3 ಲಕ್ಷ ಕೋಟಿ ರೂ. ಹಣದ ಅಗತ್ಯವಿದೆ. ಈ ಹೆದ್ದಾರಿಗಳ ಜಾಲಬಂಧ ಸೂರತ್, ಸೋಲಾಪುರ, ಲಕ್ನೊ, ವಿಶಾಖಪಟ್ಟಣಂ, ಚೆನ್ನೈ, ಬೆಂಗಳೂರು, ವಿಜಯವಾಡ, ರಾಯ್‌ಪುರ, ಕೋಟ, ಖರಗ್‌ಪುರ ಮತ್ತು ಸಿಲಿಗುರಿಯನ್ನು ವ್ಯಾಪಿಸಿದೆ.

 ಹಾಲಿ ಹೆದ್ದಾರಿಗಳನ್ನು ವಿಸ್ತರಿಸುವ ಸಾಂಪ್ರದಾಯಿಕ ಪದ್ಧತಿಯನ್ನು ಕೈಬಿಟ್ಟು, ಹೊಸ ಹೆದ್ದಾರಿಗಳನ್ನು ನಿರ್ಮಿಸುವ ಈ ಯೋಜನೆಯಿಂದ ಘನವಾಹನ ಸೇರಿದಂತೆ ಸರಕು ಸಾಗಿಸುವ ವಾಹನಗಳ ತಡೆರಹಿತ ಪ್ರಯಾಣಕ್ಕೆ ಅನುಕೂಲವಾಗಲಿದೆ. ಈಗ ದೇಶದಲ್ಲಿ ಸರಕು ವಾಹನಗಳು ದಿನವೊಂದಕ್ಕೆ ಸುಮಾರು 400 ಕಿ.ಮೀ ಪ್ರಯಾಣಿಸುತ್ತಿದ್ದು, ಇದು ಜಾಗತಿಕ ಪ್ರಮಾಣಕ್ಕಿಂತ ಕನಿಷ್ಟ 50% ಕಡಿಮೆಯಾಗಿದೆ. ನೂತನ ಹೆದ್ದಾರಿ ನಿರ್ಮಾಣದಿಂದ ವೆಚ್ಚ ಮತ್ತು ಸಮಯವನ್ನು 50%ದಷ್ಟು ಕಡಿಮೆಗೊಳಿಸಬಹುದಾಗಿದೆ.

 ಈ ಯೋಜನೆಗೆ ನಿಧಿ ಒದಗಿಸಲು ಎನ್‌ಎಚ್‌ಎಐ, ವಿಶೇಷ ಸಂಸ್ಥೆಯೊಂದನ್ನು ಸ್ಥಾಪಿಸಲಿದ್ದು ಇದಕ್ಕೆ ಎನ್‌ಎಚ್‌ಎಐ ಆಡಳಿತ ಮಂಡಳಿ ಹಸಿರು ನಿಶಾನೆ ತೋರಿದೆ. ಇದರ ಮೂಲಕ ಹಣಕಾಸು ಸಂಸ್ಥೆಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು.

ಈ ಯೋಜನೆಗೆ ಮಾಡಿರುವ ಹೂಡಿಕೆಯನ್ನು ಟೋಲ್ ಸಂಗ್ರಹದಿಂದ ಮರಳಿ ಪಡೆಯಲಾಗುವುದು. ಟೋಲ್ ಹಕ್ಕನ್ನು 15ರಿಂದ 20 ವರ್ಷದವರೆಗೆ ಖಾಸಗಿಯವರಿಗೆ ಏಲಂ ಹಾಕಲು ನಿರ್ಧರಿಸಲಾಗಿದೆ. ಟೋಲ್ ಆಪರೇಟ್ ಆ್ಯಂಡ್ ಟ್ರಾನ್ಸ್‌ಪರ್ ಎಂಬ ಈ ಮಾದರಿ ಯಶಸ್ವಿಯಾದರೆ, ಉಳಿದ ಪ್ರಮುಖ ಯೋಜನೆಗಳಿಗೂ ಈ ಮಾದರಿ ಅನುಸರಿಸಲಾಗುವುದು ಎಂದು ಎನ್‌ಎಚ್‌ಎಐ ಅಧ್ಯಕ್ಷ ಎಸ್‌ಎಸ್ ಸಂಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News