ಪಶ್ಚಿಮ ದಂಡೆಯನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳಲು ಈಗಲೂ ಬದ್ಧ: ನೆತನ್ಯಾಹು

Update: 2020-08-14 15:23 GMT

ಜೆರುಸಲೇಮ್, ಆ. 14: ಫೆಲೆಸ್ತೀನ್‌ಗೆ ಸೇರಿರುವ ಪಶ್ಚಿಮ ದಂಡೆಯ ಕೆಲವು ಭಾಗಗಳನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವುದಕ್ಕೆ ನಾನು ಈಗಲೂ ಬದ್ಧವಾಗಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅವರು ಗುರುವಾರ ಇಸ್ರೇಲ್-ಯುಎಇ ಶಾಂತಿ ಒಪ್ಪಂದ ಘೋಷಣೆಯಾದ ಬಳಿಕ ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಆದರೆ, ಯುಎಇ ಜೊತೆಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರುವ ಒಪ್ಪಂದವನ್ನು ಏರ್ಪಡಿಸುವುದಕ್ಕಾಗಿ ಆ ಯೋಜನೆಯನ್ನು ‘‘ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು’’ ಒಪ್ಪಿದ್ದೇನೆ ಎಂದು ಹೇಳಿದರು.

ಪಶ್ಚಿಮ ದಂಡೆಯನ್ನು ಇಸ್ರೇಲ್‌ಗೆ ಸೇರ್ಪಡೆಗೊಳಿಸುವುದು ನೆತನ್ಯಾಹುರ ಚುನಾವಣಾ ಭರವಸೆಯಾಗಿತ್ತು. ಹಾಗಾಗಿ, ಅದರಿಂದ ಹಿಂದೆ ಸರಿದರೆ ಖಂಡಿತವಾಗಿಯೂ ಅವರ ಬಲಪಂಥೀಯ ಬೆಂಬಲ ನೆಲೆಯಲ್ಲಿ ಬಿರುಕು ಉಂಟಾಗುತ್ತದೆ.

ನಾನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮನವಿಯಂತೆ ತಾತ್ಕಾಲಿಕವಾಗಿ ಈ ಚುನಾವಣಾ ಭರವಸೆಯಿಂದ ಹಿಂದೆ ಸರಿದಿದ್ದೇನೆ ಎಂದು ಅವರು ನುಡಿದರು.

‘‘ಪಶ್ಚಿಮ ದಂಡೆಯ ಹಲವು ಭಾಗಗಳನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವುದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಆದರೆ, ಅದನ್ನು ಅಮೆರಿಕದೊಂದಿಗಿನ ಸಮನ್ವಯತೆಯಿಂದ ಮಾತ್ರ ಮಾಡಬಹುದು’’ ಎಂದರು.

ಯುಎಇಯಿಂದ ರಾಯಭಾರಿಯನ್ನು ವಾಪಸ್ ಕರೆಸಲು ಫೆಲೆಸ್ತೀನ್ ನಿರ್ಧಾರ

ತನ್ನ ಯುಎಇ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಫೆಲೆಸ್ತೀನ್ ನಿರ್ಧರಿಸಿದೆ ಎಂದು ಫೆಲೆಸ್ತೀನ್‌ನ ಅಧಿಕೃತ ಸುದ್ದಿಸಂಸ್ಥೆ ತಿಳಿಸಿದೆ.

ಇಸ್ರೇಲ್‌ನೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧವನ್ನು ಏರ್ಪಡಿಸುವ ಒಪ್ಪಂದಕ್ಕೆ ಯುಎಇ ಸಹಿ ಹಾಕಿದ ಬಳಿಕ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News