ಇಸ್ರೇಲ್-ಯುಎಇ ಒಪ್ಪಂದ ಫೆಲೆಸ್ತೀನ್ ಜನರಿಗೆ ಮಾಡಿದ ‘ವಿಶ್ವಾಸದ್ರೋಹ’

Update: 2020-08-14 15:49 GMT

ರಮಲ್ಲಾ (ಫೆಲೆಸ್ತೀನ್), ಆ. 14: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಯುಎಇ ನಡುವೆ ಗುರುವಾರ ಏರ್ಪಟ್ಟಿರುವ ಶಾಂತಿ ಒಪ್ಪಂದಕ್ಕೆ ಫೆಲೆಸ್ತೀನ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಒಪ್ಪಂದವನ್ನು ತಕ್ಷಣ ರದ್ದುಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.

ಗುರುವಾರ ತಡರಾತ್ರಿ ಸಚಿವ ಸಂಪುಟದ ಸದಸ್ಯರ ತುರ್ತು ಸಭೆ ನಡೆಸಿದ ಬಳಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್, ಯುಎಇಯು ಫೆಲೆಸ್ತೀನ್ ಜನರಿಗೆ ವಿಶ್ವಾಸದ್ರೋಹ ಮಾಡಿದೆ ಎಂದು ಹೇಳಿದ್ದಾರೆ.

ಫೆಲೆಸ್ತೀನ್ ಭೂಭಾಗಗಳ ಮೇಲಿನ ಆಕ್ರಮಣವನ್ನು ಇಸ್ರೇಲ್ ಕೊನೆಗೊಳಿಸಿದ ಬಳಿಕ ಹಾಗೂ ಸ್ವತಂತ್ರ ಫೆಲೆಸ್ತೀನ್ ದೇಶ ಸ್ಥಾಪನೆಯಾದ ಬಳಿಕ ಇಸ್ರೇಲ್ ಜೊತೆಗಿನ ಅರಬ್ ಜಗತ್ತಿನ ಸಂಬಂಧ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂಬ ಶರತ್ತನ್ನು ಅರಬ್ ದೇಶಗಳು ಇಸ್ರೇಲ್‌ಗೆ ಒಡ್ಡುವಂತೆ ಮಾಡುವಲ್ಲಿ ಫೆಲೆಸ್ತೀನೀಯರು ದಶಕಗಳಿಂದ ಯಶಸ್ವಿಯಾಗಿದ್ದರು.

ಆದರೆ, ಈಗ ಯುಎಇಯ ಮಾದರಿಯನ್ನು ಇತರ ಅರಬ್ ದೇಶಗಳೂ ಅನುಸರಿಸಿದರೆ, ಇಸ್ರೇಲ್ ಮೇಲೆ ತಾವು ಹೊಂದಿದ್ದ ರಾಜತಾಂತ್ರಿಕ ಮೇಲುಗೈ ಕಳೆದುಹೋಗಬಹುದು ಎಂಬ ಆತಂಕವನ್ನು ಫೆಲೆಸ್ತೀನೀಯರು ಹೊಂದಿದ್ದಾರೆ.

ಯುಎಇ ಜೊತೆಗೆ ಏರ್ಪಟ್ಟ ಒಪ್ಪಂದದ ಭಾಗವಾಗಿ, ಫೆಲೆಸ್ತೀನ್‌ಗೆ ಸೇರಿದ ಪಶ್ಚಿಮ ದಂಡೆಯನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವ ತನ್ನ ಯೋಜನೆಯನ್ನು ಕೈಬಿಡಲು ಇಸ್ರೇಲ್ ಒಪ್ಪಿಕೊಂಡಿದೆ.

ಈ ಪ್ರದೇಶವನ್ನು ತನ್ನೊಳಗೆ ಸೇರಿಸಿಕೊಳ್ಳುವ ಪ್ರಯತ್ನಗಳನ್ನು ಇಸ್ರೇಲ್ ನಿಲ್ಲಿಸಬೇಕು ಎನ್ನುವುದು ಫೆಲೆಸ್ತೀನ್‌ನ ಬೇಡಿಕೆಯಾಗಿದ್ದರೂ, ಇದಕ್ಕಾಗಿ ಯುಎಇ ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾದ ಅಗತ್ಯವಿರಲಿಲ್ಲ ಎಂದು ಫೆಲೆಸ್ತೀನೀಯರು ವಾದಿಸುತ್ತಾರೆ. ಯಾಕೆಂದರೆ, ಮೊದಲಿಗೆ, ಫೆಲೆಸ್ತೀನ್‌ಗೆ ಸೇರಿದ ಭೂಭಾಗಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿದ್ದೇ ತಪ್ಪು ಹಾಗೂ ಅದಕ್ಕಾಗಿ ಇಸ್ರೇಲ್‌ಗೆ ಯುಎಇ ‘ತಪ್ಪು ಕಾಣಿಕೆ’ ನೀಡುವ ಅಗತ್ಯವಿರಲಿಲ್ಲ ಎಂದು ಅವರು ಹೇಳುತ್ತಾರೆ.

ಯುಎಇ ಮತ್ತು ಫೆಲೆಸ್ತೀನ್ ನಾಯಕರ ನಡುವಿನ ಸಂಬಂಧವು ಹಲವಾರು ವರ್ಷಗಳಿಂದ ಹಳಸಿತ್ತು. ಫೆಲೆಸ್ತೀನ್ ಅಧ್ಯಕ್ಷ ಅಬ್ಬಾಸ್‌ರ ಪ್ರಧಾನ ರಾಜಕೀಯ ಎದುರಾಳಿ ಹಾಗೂ ಫೆಲೆಸ್ತೀನ್‌ನ ಮಾಜಿ ಸಚಿವ ಮುಹಮ್ಮದ್ ದಹ್ಲಾನ್‌ರಿಗೆ ಯುಎಇ ಬೆಂಬಲ ನೀಡುತ್ತಿದೆ. ಅವರು ಈಗ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಯುಎಇ ಯುವರಾಜ ಮುಹಮ್ಮದ್ ಬಿನ್ ಝಯೀದ್‌ರ ಹಿರಿಯ ಸಹಾಯಕರಾಗಿದ್ದಾರೆ.

ಈಜಿಪ್ಟ್ ಮತ್ತು ಜೋರ್ಡಾನ್ ಬಳಿಕ, ಇಸ್ರೇಲ್‌ನೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ ಮೂರನೇ ಅರಬ್ ದೇಶ ಯುಎಇ ಆಗಿದೆ.

ಇರಾನ್, ಟರ್ಕಿ ಖಂಡನೆ

ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಶಾಂತಿ ಒಪ್ಪಂದವನ್ನು ಇರಾನ್ ಮತ್ತು ಟರ್ಕಿ ಶುಕ್ರವಾರ ತೀವ್ರವಾಗಿ ಖಂಡಿಸಿವೆ.

ಈ ಒಪ್ಪಂದವು ಎಲ್ಲ ಮುಸ್ಲಿಮರ ಬೆನ್ನಿಗೆ ಹಾಕಿದ ಚೂರಿಯಾಗಿದೆ ಎಂದು ಇರಾನ್ ಬಣ್ಣಿಸಿದೆ. ಈ ಒಪ್ಪಂದವು ಯುಎಇಯ ‘ರಕ್ಷಣಾ ತಂತ್ರಗಾರಿಕೆಯಲ್ಲಿನ ಮೂರ್ಖತನ’ವನ್ನು ಬಹಿರಂಗಪಡಿಸಿದೆ ಎಂದು ಅದು ಹೇಳಿದೆ. ಇದು ವಲಯದ ಪ್ರತಿರೋಧವನ್ನು ನಿಸ್ಸಂಶಯವಾಗಿ ಮತ್ತಷ್ಟು ಬಲಪಡಿಸುತ್ತದೆ ಎಂದಿದೆ.

ಫೆಲೆಸ್ತೀನ್ ಆಡಳಿತಕ್ಕೆ ಬೆಂಬಲ ನೀಡಿ ಟರ್ಕಿ ವಿದೇಶ ಸಚಿವಾಲಯವು ಹೇಳಿಕೆಯೊಂದನ್ನು ಹೊರಡಿಸಿದೆ. ವಲಯದ ಜನರ ಇತಿಹಾಸ ಮತ್ತು ಆತ್ಮಸಾಕ್ಷಿಯು, ಯುನೈಟೆಡ್ ಅರಬ್ ಎಮಿರೇಟ್ಸ್‌ನ ‘ಆಷಾಢಭೂತಿತನದ ವರ್ತನೆ’ಯನ್ನು ಎಂದೂ ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲ ಎಂದು ಅದು ಹೇಳಿದೆ.

‘‘ತನ್ನ ಕ್ಷುಲ್ಲಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಫೆಲೆಸ್ತೀನ್ ಹೋರಾಟಕ್ಕೆ ಹೊಡೆತ ನೀಡಿರುವ ಯುಎಇ, ಇದನ್ನು ಫೆಲೆಸ್ತೀನೀಯರಿಗಾಗಿ ತಾನು ಮಾಡಿರುವ ತ್ಯಾಗ ಎಂಬುದಾಗಿ ಬಿಂಬಿಸಿಕೊಳ್ಳುತ್ತಿದೆ’’ ಎಂದು ಟರ್ಕಿ ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News