ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಚೇರಿ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ದೇಣಿಗೆ ಸಂಗ್ರಹ

Update: 2020-08-15 17:26 GMT

ಪಾಟ್ನಾ, ಆ. 15: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಚೇರಿ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ದೇಣಿಗೆ ಸಂಗ್ರಹಿಸಿದ ಆರೋಪದಲ್ಲಿ ಯುವಕನೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ತೀವ್ರವಾಗಿ ಬೆಳೆಯುತ್ತಿರುವ ರಾಜಕೀಯ ದ್ವೇಷದ ಪ್ರಯೋಜನ ಪಡೆಯಲು 22 ವರ್ಷದ ಯುವಕ ಸೋಮೇಶ್ವರ ಸಿಂಗ್ ಪ್ರಯತ್ನಿಸಿದ್ದಾನೆ. ಈತ ಡೆಹ್ರಾಡೂನ್‌ನ ಡನ್ ಬ್ಯುಸಿನೆಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾನೆ. ಈ ಪ್ರಕರಣದ ಬಗ್ಗೆ ಬೇಹುಗಾರಿಕೆ ಮೂಲದಿಂದ ಡಿಜಿಪಿ ಗುಪ್ತೇಶ್ವರ್ ಪಾಂಡೆಗೆ ವರದಿಯಾದ 24 ಗಂಟೆಗಳ ಒಳಗೆ ಶುಕ್ರವಾರ ಬಿಹಾರದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ನಕಲಿ ಇನ್‌ಸ್ಟಾಗ್ರಾಂ ಪ್ರೊಫೈಲ್ ಖಾತೆಗೆ ಲಿಂಕ್ ಹೊಂದಿರುವ ಪೇಟಿಎಂ ಮೂಲಕ ಡಿಜಿಟಲ್ ಪೇಮೆಂಟ್ ದೇಣಿಗೆ ನೀಡುವಂತೆ ಯುವಕ ಮನವಿ ಮಾಡಿದ್ದಾನೆ.

‘‘ನೀವು ನಮಗೆ ದೇಣಿಗೆ ನೀಡಬೇಕಾದ ಅಗತ್ಯ ಏನು ಎಂದು ನೀವು ತಿಳಿದುಕೊಳ್ಳುವ ಅಗತ್ಯ ಇದೆ. ನಮ್ಮ ಪ್ರಧಾನಿ ಅವರ ವರ್ಚಸ್ಸನ್ನು ಹಾಳು ಮಾಡಲು ಬಿಜೆಪಿ ಹಣ ಬಲವನ್ನು ಬಳಸುತ್ತಿದೆ. ಅದು ತಿರುಚಿದ ಚಿತ್ರ ಹಾಗೂ ಎಡಿಟ್ ಮಾಡಿದ ವೀಡಿಯೊ, ನಕಲಿ ವೀಡಿಯೊಗಳನ್ನು ಬಳಸುತ್ತಿದೆ’’ ಎಂದು ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾನೆ. ಆದುದರಿಂದ ಯುಟ್ಯೂಬ್‌ಗೆ ಕಂಟೆಂಟ್ ಕ್ರಿಯೇಟರ್, ವೆಬ್‌ಡಿಸೈನರ್, ವೀಡಿಯೊ ಎಡಿಟರ್, ವೀಡಿಯೊ ಎಡಿಟರ್‌ಗಳ ದೊಡ್ಡ ತಂಡವೊಂದರ ಅಗತ್ಯ ನಮಗಿದೆ. ಇದಕ್ಕಾಗಿ ನಮಗೆ ಹಣದ ಅವಶ್ಯಕತೆ ಇದೆ ಎಂದು ಆತ ಹೇಳಿದ್ದಾನೆ.

ಡಾ. ಸಿಂಗ್ ಕಚೇರಿ ಹೆಸರಲ್ಲಿ ರೂಪಿಸಲಾದ ಈ ನಕಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗೆ 90,000ಕ್ಕೂ ಅಧಿಕ ಬೆಂಬಲಿಗರು ಇದ್ದಾರೆ. ಇದನ್ನು ದೃಢಪಡಿಸಿರುವ ಬಿಹಾರ್ ಪೊಲೀಸ್ ಎಡಿಜಿ (ಕೇಂದ್ರ ಕಚೇರಿ) ಜಿತೇಂದ್ರ ಕುಮಾರ್ ಅವರು, ಡಾ. ಮನಮೋಹನ್ ಸಿಂಗ್ ಕಚೇರಿ ಹೆಸರಲ್ಲಿ ಇಂತಹ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿರುವ ಬಗ್ಗೆ ಮಾಹಿತಿಯನ್ನು ಡಿಜಿಪಿ ಗುಪ್ತೇಶ್ವರ ಪಾಂಡೆ ತಿಳಿದ ಬಳಿಕ ಬಿಹಾರ ಪೊಲೀಸ್‌ನ ಸೈಬರ್ ಸೆಲ್ ತನಿಖೆ ಆರಂಭಿಸಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News