ಬಹರೈನ್, ಒಮನ್ ಜೊತೆಗೂ ಬಾಂಧವ್ಯ ವೃದ್ಧಿಗೆ ಇಸ್ರೇಲ್ ಇಂಗಿತ

Update: 2020-08-16 17:18 GMT
ಬೆಂಜಮಿನ್ ನೆತನ್ಯಾಹು

ಜೆರುಸಲೇಂ,   ಆ.16: ಇಸ್ರೇಲ್ ಜೊತೆಗೆ ಔಪಚಾರಿಕ ಬಾಂಧವ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ದಾರಿಯನ್ನು ಇನ್ನೆರಡು ಗಲ್ಫ್ ರಾಷ್ಟ್ರಗಳಾದ ಬಹರೈನ್ ಹಾಗೂ ಒಮನ್ ಕೂಡಾ ಶೀಘ್ರವೇ ಅನುಸರಿಸಲಿವೆ ಎಂದು ಇಸ್ರೇಲ್‌ನ ಬೇಹುಗಾರಿಕಾ ಸಚಿವ ಎಲಿ ಕೊಹೆನ್ ಭರವಸೆ ವ್ಯಕ್ತಪಡಿಸಿದ್ದಾರೆ.

‘‘ಯುಎಇ ಜೊತೆಗಿನ ಶಾಂತಿ ಒಪ್ಪಂದದ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಗಲ್ಫ್ ರಾಷ್ಟ್ರಗಳು ಹಾಗೂ ಆಫ್ರಿಕದ ಕೆಲವು ಮುಸ್ಲಿಂ ರಾಷ್ಟಗಳು ಕೂಡಾ ಇಸ್ರೇಲ್ ಜೊತೆಗೆ ಒಡಂಬಡಿಕೆಯನ್ನು ಏರ್ಪಡಿಸಿಕೊಳ್ಳಲಿವೆ’’ ಎಂದು ಕೊಹೆನ್ ಅವರು ರವಿವಾರ ಸೇನಾ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬಹರೈನ್ ಹಾಗೂ ಒಮನ್ ಜೊತೆ ಬಾಂಧವ್ಯವನ್ನು ಬೆಳೆಸುವುದು ಖಂಡಿತವಾಗಿಯೂ ಇಸ್ರೇಲ್‌ನ ಕಾರ್ಯಸೂಚಿಯಲ್ಲಿವೆ. ಇದರ ಜೊತೆಗೆ, ಮುಂಬರುವ ವರ್ಷದಲ್ಲಿ ಸುಡಾನ್ ಸೇರಿದಂತೆ ಆಫ್ರಿಕದ ದೇಶಗಳು ಕೂಡಾ ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಏರ್ಪಡಿಸಿಕೊಳ್ಳುವ ಸಾಧ್ಯತೆಯಿದೆ’’ ಎಂದವರು ತಿಳಿಸಿದರು.

ಯುಎಇ ಹಾಗೂ ಇಸ್ರೇಲ್ ಜೊತೆ ಗುರುವಾರ ಏರ್ಪಟ್ಟ ಶಾಂತಿ ಒಪ್ಪಂದವನ್ನು ಬಹರೈನ್ ಹಾಗೂ ಒಮನ್ ದೇಶಗಳೆರಡೂ ಪ್ರಶಂಸಿಸಿವೆ. ಆದಾಗ್ಯೂ, ತಾವು ಇಸ್ರೇಲ್ ಜೊತೆಗಿನ ಬಾಂಧವ್ಯವನ್ನು ಸಹಜಗೊಳಿಸುವ ಸಾಧ್ಯತೆಯ ಬಗ್ಗೆ ಅವು ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಒಮನ್ ಹಾಗೂ ಸುಡಾನ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಈ ಮಧ್ಯೆ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ಹೇಳಿಕೆಯೊಂದನ್ನು ನೀಡಿ, ಇಸ್ರೇಲ್ ಜೊತೆಗಿನ ನಂಟನ್ನು ಸಹಜಗೊಳಿಸುವ ಕುರಿತು ಗಲ್ಫ್ ಪ್ರದೇಶದ ಇತರ ಹಲವಾರು ದೇಶಗಳ ಜೊತೆಗೂ ವಾಶಿಂಗ್ಟನ್ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಯುಎಇ ಹಾಗೂ ಇಸ್ರೇಲ್ ಗುರುವಾರ ನೀಡಿದ ಹೇಳಿಕೆಯಲ್ಲಿ , ಉಭಯ ದೇಶಗಳ ನಡುವಿ ರಾಜತಾಂತ್ರಿಕ ಬಾಂಧವ್ಯಳನ್ನು ಸಹಜಗೊಳಿಸಲಾಗುವುದು ಹಾಗೂ ಉಭಯದೇಶಗಳ ನಡುವೆ ವಿಸ್ತೃತವಾದ ನೂತನ ಬಾಂಧವ್ಯವನ್ನು ರೂಪಿಸಲಾಗುವುದೆಂದು ಘೋಷಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News