×
Ad

ಇಸ್ರೇಲ್ ಸೈನಿಕರು-ಫೆಲೆಸ್ತೀನಿಯರ ನಡುವೆ ಭುಗಿಲೆದ್ದ ಸಂಘರ್ಷ

Update: 2020-08-16 23:04 IST
ಫೈಲ್ ಫೋಟೊ

ಜೆರುಸಲೇಂ, ಆ.16: ಫೆಲೆಸ್ತೀನ್ ಹೋರಾಟಗಾರರು ಹಾಗೂ ಇಸ್ರೇಲಿ ಸೈನಿಕರ ನಡುವೆ ಶನಿವಾರ ರಾತ್ರಿ ಭಾರೀ ಸಂಘರ್ಷ ನಡೆದ ಬೆನ್ನಲ್ಲೇ ರವಿವಾರ ಇಸ್ರೇಲ್ ಪಶ್ಚಿಮದಂಡೆಯ ಗಾಝಾಪಟ್ಟಿಯ ಸಾಗರಪ್ರದೇಶದ ಮೀನುಗಾರಿಕಾ ವಲಯವನ್ನು ಅನಿರ್ದಿಷ್ಟಾವಧಿಗೆ ಮುಚ್ಚುಗಡೆಗೊಳಿಸಿದೆ.

ಗಾಝಾಪಟ್ಟಿ ಪ್ರದೇಶದಲ್ಲಿರುವ ಹಮಾಸ್ ಸಂಘಟನೆಯ ನೆಲೆಗಳನ್ನು ಗುರಿಯಿರಿಸಿ ಇಸ್ರೇಲ್ ವಾಯುದಾಳಿ ನಡೆಸಿದ ಬೆನ್ನಲ್ಲೇ ಫೆಲೆಸ್ತೀನ್ ಹೋರಾಟಗಾರರು ಗಾಝಾ ಪಟ್ಟಿ ಪ್ರದೇಶದಿಂದ ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಸಿಡೆರೆಟ್ ಪಟ್ಟಣದಲ್ಲಿರುವ ಮನೆಯೊಂದಕ್ಕೆ ರಾಕೆಟ್ ಅಪ್ಪಳಿಸಿ ದ್ದು, 58 ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು.

ಗಡಿಯಲ್ಲಿ ಹಮಾಸ್ ಬೆಂಬಲಿತ ಫೆಲೆಸ್ತೀನಿಯರ ಗುಂಪೊಂದು ಸ್ಫೋಟಕ ಬಲೂನುಗಳ್ನು ಉಡಾಯಿಸಿದ್ದಕ್ಕೆ ಪ್ರತೀಕಾರವಾಗಿ ತಾನು ಈ ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ತಿಳಿಸಿದೆ. ಉದ್ರಿಕ್ತ ಫೆಲೆಸ್ತೀನ್ ಪ್ರತಿಭಟನಕಾರರು ಇಸ್ರೇಲ್-ಗಾಝಾ ಗಡಿ ಬೇಲಿಯಲ್ಲಿ ನಿಯೋಜಿತರಾಗಿದ್ದ ಇಸ್ರೇಲಿ ಯೋಧರ ಮೇಲೆ ಉರಿಯುವ ಟೈರ್‌ಗಳನ್ನು, ಗ್ರೇನೆಡ್‌ಗಳನ್ನು ಎಸೆದಿದ್ದಾರೆಂದು ಅದು ಹೇಳಿದೆ.

ಈ ಸಂದರ್ಭದಲ್ಲಿ ಇಸ್ರೇಲಿ ಸೈನಿಕರು ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರು ಫೆಲೆಸ್ತೀನ್ ಪ್ರತಿಭಟನಕಾರರು ಗಾಯಗೊಂಡಿದ್ದಾರೆಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಘಟನೆಗಳ ಬೆನ್ನಲ್ಲೇ ಇಸ್ರೇಲ್‌ನ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಝ್ ಅವರು ಗಾಝಾಪಟ್ಟಿ ಪ್ರದೇಶದ ಸಾಗರ ಪ್ರದೇಶದಲ್ಲಿ ಮೀನುಗಾರಿಕಾ ವಲಯನ್ನು ಮುಚ್ಚುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೊರೋನ ವೈರಸ್ ಹಾವಳಿ ಆರಂಭವಾದ ಬಳಿಕ ಇಸ್ರೇಲ್ ಸೇನೆ ಹಾಗೂ ಫೆಲೆಸ್ತೀನ್ ಹೋರಾಟಗಾರರ ನಡುನೆ ಅನೌಪಚಾರಿಕ ಕದನ ವಿರಾಮ ಏರ್ಪಟ್ಟಿತ್ತು ಹಾಗೂ ಯಾವುದೇ ಸಂಘರ್ಷದ ಘಟನೆಗಳು ವರದಿಯಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News