ಈ.ಡಿ. ಜಪ್ತಿ ಮಾಡಿರುವ ಆಸ್ತಿ ಪಾಸ್ತಿ ಬಿಡುಗಡೆಗೆ ಅರ್ಜಿ: ವಿವರಣೆ ಕೇಳಿದ ಹೈಕೋರ್ಟ್

Update: 2020-08-17 17:38 GMT

ಹೊಸದಿಲ್ಲಿ,ಆ.17: ಜಾರಿ ನಿರ್ದೇಶನಾಲಯ(ಇ.ಡಿ) ಜಪ್ತಿ ಮಾಡಿರುವ 22 ಕೋಟಿ ರೂ. ವೌಲ್ಯದ ತನ್ನ ಆಸ್ತಿಪಾಸ್ತಿಗಳನ್ನು ಬಿಡುಗಡೆಗೊಳಿಸುವಂತೆ ಕೋರಿ 2ಜಿ ಹಗರಣಲ್ಲಿ ದೋಷಮುಕ್ತಗೊಂಡಿರುವ ರಿಯಲ್‌ಎಸ್ಟೇಟ್ ಕಂಪೆನಿಯೊಂದು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ನಿರ್ದೇಶನಾಲಯದಿಂದ ಪ್ರತಿಕ್ರಿಯೆ ಕೇಳಿದೆ.

 2 ಜಿ ಹಗರಣಕ್ಕೆ ಸಂಬಂಧಿಸಿದ ಹಣಕಪ್ಪುಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಕೊನ್‌ವುಡ್ ಕನ್‌ಸ್ಟ್ರಕ್ಷನ್ ಆ್ಯಂಡ್ ಡೆವಲಪರ್ಸ್‌ನ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿತ್ತು. 2 ಜಿ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಎ. ರಾಜಾ ಮತ್ತಿತರ ಆರೋಪಿಗಳ ಜೊತೆ ಕೊನ್‌ವುಡ್ ಕನ್‌ಸ್ಟ್ರಕ್ಷನ್ ಆ್ಯಂಡ್ ಡೆವಲಪರ್ಸ್ ಕಂಪೆನಿಯನ್ನು ಕೂಡಾ ದಿಲ್ಲಿ ಹೈಕೋರ್ಟ್ ದೋಷಮುಕ್ತಗೊಳಿಸಿತ್ತು. ಆದಾಗ್ಯೂ ಮುಟ್ಟುಗೋಲು ಮಾಡಲಾದ ಕಂಪೆನಿಯ ಆಸ್ತಿಪಾಸ್ತಿಗಳನ್ನು ಕಂಪೆನಿಗೆ ಬಿಡುಗಡೆಗೊಳಿಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ದಿಲ್ಲಿ ಹೈಕೋರ್ಟ್‌ನ 2018, ಮಾರ್ಚ್ 21ರ ಆದೇಶ ತಿಳಿಸಿತ್ತು. ಇದೀಗ ಆ ಆದೇಶವನ್ನು ಬದಲಾಯಿಸುವಂತೆ ಕೋರಿ ಕಂಪೆನಿಯು ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಡೈನಾಮಿಕ್ಸ್ ರಿಯಾಲಿಟಿ ಕಂಪೆನಿಯಿಂದ ಕುಸೆಗಾಂವ್ ಫ್ರುಟ್ಸ್ ಆ್ಯಂಡ್ ವೆಜಿಟೇಬಲ್ ಪ್ರೈ. ಲಿಮಿಟೆಡ್ ಕಂಪೆನಿಗೆ 22.56 ಕೋಟಿ ರೂ. ಮೊತ್ತದ ಅಕ್ರಮ ಹಣವನ್ನು ವರ್ಗಾಯಿಸಿದ ಆರೋಪವನ್ನು ಎದುರಿಸಿತ್ತು.ಕುಸೆಗಾಂವ್ ಫ್ರುಟ್ಸ್ ಆ್ಯಂಡ್ ವೆಜಿಟೇಬಲ್ ಪ್ರೈ. ಲಿಮಿಟೆಡ್ ಕಂಪೆನಿಯ ಪ್ರವರ್ತಕರನ್ನು 2 ಜಿ ಹಗರಣದಲ್ಲಿ ಆರೋಪಿಗಳಾಗಿದ್ದು ಅವರನ್ನು ಆನಂತರ ದೋಷಮುಕ್ತ ಗೊಳಿಸಲಾಗಿತ್ತು.

ಕೊನ್‌ವುಡ್ ಕನ್‌ಸ್ಟ್ರಕ್ಷನ್ ಆ್ಯಂಡ್ ಡೆವಲಪರ್ಸ್ ಸಲ್ಲಿಸಿರುವ ಅರ್ಜಿಯ ಮುಂದಿನ ಆಲಿಕೆಯನ್ನು ನ್ಯಾಯಾಲಯ ಆಗಸ್ಟ್ 26ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News