​ಮಂದಿರ, ಮಸೀದಿಗೆ ಹಣ ಖರ್ಚು ಮಾಡುವ ಬದಲು ಆರೋಗ್ಯ ಮೂಲಸೌಕರ್ಯಕ್ಕೆ ಗಮನ ಹರಿಸಿ: ಕಿಶೋರಿ ಪೆಡ್ನೇಕರ್

Update: 2020-08-18 03:50 GMT

ಮುಂಬೈ: ದೇಶದಲ್ಲಿ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ನಿರ್ಮಾಣಕ್ಕೆ ಹಣ ಖರ್ಚು ಮಾಡುವ ಬದಲು ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ ಎಂದು ಮುಂಬೈನ 77ನೇ ಮೇಯರ್ ಕಿಶೋರಿ ಪೆಡ್ನೇಕರ್ ಸಲಹೆ ಮಾಡಿದ್ದಾರೆ.

ಲೋವರ್ ಪರೇಲ್‌ನಿಂದ ಮೂರು ಬಾರಿ ಪಾಲಿಕೆ ಸದಸ್ಯೆಯಾಗಿದ್ದ ಇವರು, ಬೃಹತ್ ಮುಂಬೈ ಮಹಾನಗರಪಾಲಿಕೆಯ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು.

ರಾಜಕೀಯ ಪ್ರವೇಶಕ್ಕೆ ಮುನ್ನ ಜೆಎನ್‌ಪಿಟಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಇವರು, ಕೋವಿಡ್-19 ಕರ್ತವ್ಯಕ್ಕೆ ಅರೆವೈದ್ಯಕೀಯ ಸಿಬ್ಬಂದಿಯನ್ನು ಉತ್ತೇಜಿಸುವ ಸಲುವಾಗಿ ಮತ್ತೆ ಬಿಳಿ ಸಮವಸ್ತ್ರ ಧರಿಸಿದ್ದರು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸೋಂಕಿತರ ಸಂಪರ್ಕ ಕಾರಣದಿಂದ ಎರಡು ಬಾರಿ ಸ್ವಯಂ ಕ್ವಾರಂಟೈನ್‌ಗೆ ಪೆಡ್ನೇಕರ್ (57) ಒಳಗಾಗಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ವಿಧಿಸಿದರೂ, ರೋಗ ಹರಡುವುದು ಕಡಿಮೆಯಾಗಲಿಲ್ಲ. ಮುಂಬೈನಂಥ 1.25 ಕೋಟಿ ಜನರಿರುವ ನಗರದಲ್ಲಿ, ಅತ್ಯಧಿಕ ಜನದಟ್ಟಣೆ ಇರುವ ಪ್ರದೇಶಗಳಲ್ಲಿ, ಕೊಳಗೇರಿಗಳಲ್ಲಿ ಕೋವಿಡ್-19 ನಿಯಂತ್ರಿಸುವುದು ಸವಾಲಿನ ಕೆಲಸ. ಆದರೆ 4ಟಿ (ಟ್ರೇಸಿಂಗ್, ಟೆಸ್ಟಿಂಗ್, ಟ್ರೀಟ್‌ಮೆಂಟ್, ಟ್ರ್ಯಾಕಿಂಗ್) ಸೂತ್ರ ಜಾರಿಯ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಎಪ್ರಿಲ್, ಮೇ ತಿಂಗಳಲ್ಲಿ ಕೋವಿಡ್-19 ನಿಯಂತ್ರಣದಲ್ಲಿ ಬಿಎಂಸಿ ವಿಫಲವಾಗಿತ್ತೇ ಎಂಬ ಪ್ರಶ್ನೆಗೆ, ಆಗ ಆಮ್ಲಜನಕ ಹಾಗೂ ಐಸಿಯು ಬೆಡ್ ಕೊರತೆ ಇತ್ತು. ಹಲವು ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಅಂಥ ಪರಿಸ್ಥಿತಿಯಲ್ಲಿ ಏನು ಮಾಡಲು ಸಾಧ್ಯ? ಬಳಿಕ ಅಗತ್ಯತೆಗೆ ಅನುಸಾರವಾಗಿ ದೊಡ್ಡ ಕೋವಿಡ್ ಚಿಕಿತ್ಸಾ ಸೌಲಭ್ಯವನ್ನು ಆರಂಭಿಸಿದೆವು. ಪರಿಸ್ಥಿತಿ ಸುಧಾರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ನಗರದ ಪ್ರಯತ್ನವನ್ನು ಶ್ಲಾಘಿಸಿದೆ ಎಂದು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News