ಉಯಿಘರ್ ಗ್ರಾಮದಲ್ಲಿ ಮಸೀದಿ ಕೆಡವಿ ಶೌಚಾಲಯ ನಿರ್ಮಿಸಿದ ಚೀನಾ: ‘ರೇಡಿಯೊ ಫ್ರೀ ಏಶ್ಯ’ ವರದಿ

Update: 2020-08-18 16:12 GMT

ಬೀಜಿಂಗ್, ಆ. 18: ಚೀನಾದ ಕ್ಸಿನ್‌ ಜಿಯಾಂಗ್ ಪ್ರಾಂತದಲ್ಲಿ ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ಅಧಿಕಾರಿಗಳು ಮಸೀದಿಯೊಂದನ್ನು ಕೆಡವಿ ಅದರ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವೊಂದನ್ನು ನಿರ್ಮಿಸಿದ್ದಾರೆ ಎಂದು ‘ರೇಡಿಯೊ ಫ್ರೀ ಏಶ್ಯ (ಆರ್‌ಎಫ್‌ಎ)’ದ ವರದಿಗಳು ತಿಳಿಸಿವೆ. ಅದೂ ಅಲ್ಲದೆ, ಈ ವಲಯದಲ್ಲಿ ವಾಸಿಸುತ್ತಿರುವ ಉಯಿಘರ್ ಮುಸ್ಲಿಮರ ವಿರುದ್ಧದ ದಮನ ಕಾರ್ಯಾಚರಣೆಯ ಭಾಗವಾಗಿ, ಗರ್ಭಪಾತ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮಹಿಳೆಯರಿಗೆ ಆದೇಶ ನೀಡಿದ್ದಾರೆ ಎಂಬುದಾಗಿಯೂ ಅದು ಆರೋಪಿಸಿದೆ.

ಆತುಶ್ ನಗರದ ಸುನ್‌ಟಾಗ್ ಗ್ರಾಮದಲ್ಲಿರುವ ಟೊಕುಲ್ ಮಸೀದಿಯನ್ನು ಕೆಡವಿ ಅದರ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವೊಂದನ್ನು ನಿರ್ಮಿಸಲಾಗಿದೆ ಎಂದು ರೇಡಿಯೊ ವರದಿ ಮಾಡಿದೆ. ಕುಟುಂಬ ಯೋಜನೆಯ ಮಿತಿಯನ್ನು ಮೀರಿ ಹುಟ್ಟಲಿರುವ ಹಾಗೂ ಹಿಂದಿನ ಹೆರಿಗೆಯ ಬಳಿಕ 3 ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಹುಟ್ಟಲಿರುವ ಶಿಶುಗಳನ್ನು ಸಾಯಿಸುವುದಕ್ಕಾಗಿ ಗರ್ಭಿಣಿ ಮಹಿಳೆಯರನ್ನು ಬಲವಂತವಾಗಿ ಗರ್ಭಪಾತಕ್ಕೊಳಪಡಿಸುವಂತೆ ಆಸ್ಪತ್ರೆಗಳನ್ನು ಬಲವಂತಪಡಿಸಲಾಗಿದೆ ಎಂದು ಅದು ತಿಳಿಸಿದೆ.

ಕ್ಸಿನ್‌ಜಿಯಾಂಗ್ ಸ್ವಾಯತ್ತ ವಲಯವನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) 1949ರಲ್ಲಿ ವಶಪಡಿಸಿಕೊಂಡಿತು ಹಾಗೂ 1955ರ ವೇಳೆಗೆ ಅದನ್ನು ಸಂಪೂರ್ಣವಾಗಿ ಚೀನಾದೊಂದಿಗೆ ವಿಲೀನಗೊಳಿಸಿತು.

ಅಂದಿನಿಂದ ಉಯಿಘರ್ ಜನಾಂಗೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಚೀನಾದ ಸರ್ವಾಧಿಕಾರಿ ಆಡಳಿತದ ವಿರುದ್ಧ ಕ್ಸಿನ್‌ಜಿಯಾಂಗ್ ಜನರ ಪ್ರತಿರೋಧ ಹೆಚ್ಚುತ್ತಿರುವಂತೆಯೇ, ಚೀನಾವು ಅಲ್ಲಿ ಸೇನೆಯನ್ನು ನಿಯೋಜಿಸಿದೆ. ಟೋಕುಲ್ ಮಸೀದಿಯನ್ನು 2018ರಲ್ಲಿ ಕೆಡವಿ ಅಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಯಿತು ಎಂದು ಗ್ರಾಮ ಸಮಿತಿಯ ಮುಖ್ಯಸ್ಥರನ್ನು ಉಲ್ಲೇಖಿಸಿ ರೇಡಿಯೊ ವರದಿ ಮಾಡಿದೆ. ಆದರೆ, ಆ ಗ್ರಾಮದ ಎಲ್ಲ ಮನೆಗಳಲ್ಲೂ ಶೌಚಾಲಯಗಳಿವೆ ಎಂದು ಅಲ್ಲಿನ ಜನರು ಹೇಳಿದ್ದಾರೆ.

ಕೆಡವಲಾಗಿರುವ ಮಸೀದಿಯ ಅವಶೇಷಗಳನ್ನು ಮುಚ್ಚಿಹಾಕುವುದಕ್ಕಾಗಿ ಹಾಗೂ ಅಲ್ಲಿಗೆ ಭೇಟಿ ನೀಡುವ ನಿಗಾ ತಂಡಗಳ ಸದಸ್ಯರಿಗಾಗಿ ಶೌಚಾಲಯವನ್ನು ನಿರ್ಮಿಸಿರುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

2019ರಲ್ಲಿ ಅಝ್ನ ಮಸೀದಿಯನ್ನು ಕೆಡವಿ ಅಂಗಡಿಯೊಂದನ್ನು ನಿರ್ಮಿಸಲಾಗಿದೆ ಹಾಗೂ ಈ ಅಂಗಡಿಯಲ್ಲಿ ಶರಾಬು ಮತ್ತು ಸಿಗರೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ರೇಡಿಯೊ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News