ಶೋಪಿಯಾನ್ ಎನ್‌ಕೌಂಟರ್: ಸೇನೆಯ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ಆರಂಭ

Update: 2020-08-18 17:41 GMT
ಸಾಂದರ್ಭಿಕ ಚಿತ್ರ

ಶ್ರೀನಗರ,ಆ.18: ಕಳೆದ ತಿಂಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಆಶಿಮಪೋರಾದಲ್ಲಿ ನಡೆದಿದ್ದ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಸೇನೆಯು ತನಿಖೆಯನ್ನಾರಂಭಿಸಿದ್ದು, ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಸೇನೆಯು ಪ್ರಕಟಿಸಿತ್ತು. ಆದರೆ ಅದೇ ದಿನದಿಂದ ಆ ಪ್ರದೇಶದಿಂದ ಮೂವರು ಯುವಕರು ನಾಪತ್ತೆಯಾಗಿರುವ ಬಗ್ಗೆ ರಾಜೌರಿಯ ಧಾರ್ ಸಾಕ್ರಿ ಗ್ರಾಮದ ಅವರ ಕುಟುಂಬಗಳು ಪೊಲೀಸರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಸೇನೆಯು ಈ ವಿಚಾರಣೆಯನ್ನು ಆರಂಭಿಸಿದೆ.

ಆಶಿಮಪೋರಾ ಕಾರ್ಯಾಚರಣೆಯ ಬಗ್ಗೆ ಉನ್ನತ ಮಟ್ಟದ ವಿಚಾರಣಾ ನ್ಯಾಯಾಲಯದ ತನಿಖೆಯು ಪ್ರಗತಿಯಲ್ಲಿದೆ. ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಜಮ್ಮು -ಕಾಶ್ಮೀರ ಪೊಲೀಸರು ರಾಜೌರಿಯ ದೂರುದಾರ ಕುಟುಂಬಗಳಿಂದ ಡಿಎನ್‌ಎ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದು,ಅದನ್ನು ಜು.18ರಂದು ಕೊಲ್ಲಲ್ಪಟ್ಟಿರುವ ಭಯೋತ್ಪಾದಕರ ಡಿಎನ್‌ಎ ಜೊತೆ ತಾಳೆ ಹಾಕಲು ಕಳುಹಿಸಲಾಗಿದೆ ಎಂದು ಶ್ರೀನಗರದಲ್ಲಿ ಸೇನೆಯ ವಕ್ತಾರ ಆಗಿರುವ ಕ.ರಾಜೇಶ ಕಾಲಿಯಾ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯುವಕರು ಮುಖ್ಯವಾಗಿ ಸೇಬು ಮತ್ತು ಅಕ್ರೋಟ್ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಆಶಿಮಪುರಾದಲ್ಲಿ ತಮ್ಮ ವಸತಿಗೆ ಕೋಣೆಯೊಂದು ದೊರಕಿದೆ ಎಂದು ಅವರು ಜು.16ರಂದು ತಮ್ಮ ಕುಟುಂಬಗಳಿಗೆ ಕರೆ ಮಾಡಿ ತಿಳಿಸಿದ್ದರು. ಜು.17ರ ನಂತರ ಈ ಯುವಕರು ಸಂಪರ್ಕಕ್ಕೆ ಸಿಗದ್ದರಿಂದ ಕಳವಳಗೊಂಡ ಕುಟುಂಬಗಳು ಪೊಲೀಸ್ ದೂರುಗಳನ್ನು ದಾಖಲಿಸಿದ್ದವು.

ಜು.16ರಂದು ಇದೇ ಆಶಿಮಪೋರಾದಲ್ಲಿ ಎನ್‌ಕೌಂಟರ್ ನಡೆದಿದ್ದು,ಅಲ್ಲಿಂದೀಚಿಗೆ ಈ ಮೂವರು ಯುವಕರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News