ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ

Update: 2020-08-20 16:14 GMT

ಹೊಸದಿಲ್ಲಿ, ಆ.20: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸಮರ್ಪಕವಾದ ಮೀಸಲಾತಿ ದೊರೆಯಬೇಕೆಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಗುರುವಾರ ಪ್ರತಿಪಾದಿಸಿದ್ದಾರೆ ಹಾಗೂ ಈ ವಿಷಯವಾಗಿ ಎಲ್ಲಾ ರಾಜಕೀಯ ಪಕ್ಷಗಳು ಶೀಘ್ರವೇ ಸಹಮತಕ್ಕೆ ಬರಬೇಕೆಂದು ಅವರು ಕರೆ ನೀಡಿದ್ದಾರೆ.

ಹೊಸದಿಲ್ಲಿಯಲ್ಲಿ ಗುರುವಾರ ಜನಸಂಖ್ಯೆ ಹಾಗೂ ಅಭಿವೃದ್ಧಿಗಾಗಿನ ಭಾರತೀಯ ಸಂಸದರ ಸಂಘ (ಐಪಿಪಿಡಿ) ಸಭೆಯಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು, ಲಿಂಗಾನುಪಾತದ ಅಗಾಧವಾದ ಅಸಮತೋಲನವಿರುವ ರಾಜ್ಯಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಖ್ಯೆಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಪಕ್ಷಗಳು ಗಮನಹರಿಸಬೇಕಾಗಿದೆ ಎಂದವರು ಹೇಳಿದರು.

 ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ವಿಧೇಯಕವೊಂದನ್ನು ಅಂಗೀಕರಿಸಲಾಗಿತ್ತು. ಆದರೆ 2014ರಲ್ಲಿ 15ನೇ ಲೋಕಸಭೆಯ ವಿಸರ್ಜನೆಯ ಬಳಿಕ ಆ ವಿಧೇಯಕವನ್ನು ಕೈಬಿಡಲಾಗಿದೆ ಎಂದವರು ವಿಷಾದಿಸಿದರು.

ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕೆಂದು ಕರೆ ನೀಡಿದ ಉಪರಾಷ್ಟ್ರಪತಿ, ಹಾಗಾದಲ್ಲಿ ಲಿಂಗತಾರತಮ್ಯವು ಅನೀತಿಯುತವಾದುದೆಂದು ಭಾವಿಸುವ ಜವಾಬ್ದಾರಿಯುತ ಹಾಗೂ ಸೂಕ್ಷ್ಮಸಂವೇದನೆಯ ಪ್ರಜೆಗಳಾಗಿ ಮಕ್ಕಳು ಬೆಳೆಯುವರೆಂದು ಅಭಿಪ್ರಾಯಿಸಿದರು.

ಸ್ತ್ರೀ ಭ್ರೂಣ ಹತ್ಯೆ ಹಾಗೂ ವರದಕ್ಷಿಣೆಯನ್ನು ನಿಷೇಧಿಸಲು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸುವಂತೆಯೂ ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News