ಜನಾಂಗೀಯ ತಾರತಮ್ಯಕ್ಕೆ ಲಸಿಕೆ ಇಲ್ಲ: ಕಮಲಾ ಹ್ಯಾರಿಸ್

Update: 2020-08-20 16:47 GMT

ಮಿಲ್ವಾಕೀ (ಅಮೆರಿಕ), ಆ. 20: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಡೆಮಾಕ್ರಟಿಕ್ ಪಕ್ಷವು ತನಗೆ ನೀಡಿರುವ ಆಹ್ವಾನವನ್ನು ಕ್ಯಾಲಿಫೋರ್ನಿಯ ಸೆನೆಟರ್ ಕಮಲಾ ಹ್ಯಾರಿಸ್ ಬುಧವಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಅವರು ಪ್ರಮುಖ ಪಕ್ಷವೊಂದರಿಂದ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಮೊದಲ ಕರಿಯ ಮಹಿಳೆಯಾಗಿದ್ದಾರೆ.

ವೈರಸ್ ಸಾಂಕ್ರಾಮಿಕ ಮತ್ತು ಜನಾಂಗೀಯ ತಾರತಮ್ಯದ ವೈರಸ್‌ನಿಂದ ಜರ್ಝರಿತವಾಗಿರುವ ದೇಶಕ್ಕೆ ನಾನು ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಪುನಶ್ಚೇತನ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ.

ವಿಸ್ಕಾನ್ಸಿನ್ ರಾಜ್ಯದ ಮಿಲ್ವಾಕೀ ನಗರದಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಶರೀರ ರಾಷ್ಟ್ರೀಯ ಸಮಾವೇಶದ ಮೂರನೇ ದಿನದಂದು ಮಾತನಾಡಿದ ಕಮಲಾ, ತನ್ನ ದಿವಂಗತ ತಾಯಿ ಶ್ಯಾಮಲಾ ಗೋಪಾಲನ್ ತನಗೆ ಕಲಿಸಿದ ಪಾಠಗಳನ್ನು ಸ್ಮರಿಸಿಕೊಂಡರು. ‘‘ನಮ್ಮ ದೇಶವೊಂದು ಪ್ರೀತಿಯ ಸಮುದಾಯವಾಗಿದೆ. ನಾವು ಹೇಗೆ ಕಂಡರೂ, ನಾವು ಎಲ್ಲಿಂದ ಬಂದರೂ, ನಾವು ಯಾರನ್ನು ಪ್ರೀತಿಸಿದರೂ, ಇಲ್ಲಿ ಎಲ್ಲರೂ ಸ್ವಾಗತಾರ್ಹರು’’ ಎಂಬ ಕಲ್ಪನೆಯನ್ನು ನನ್ನ ತಾಯಿ ನನ್ನಲ್ಲಿ ಮೂಡಿಸಿದರು’’ ಎಂದು ಕಮಲಾ ಹೇಳಿದರು.

‘‘ಈ ಚುನಾವಣೆಯಲ್ಲಿ, ಇತಿಹಾಸದ ಹರಿವನ್ನು ಬದಲಾಯಿಸುವ ಅವಕಾಶವೊಂದು ನಮಗೆ ಲಭಿಸಿದೆ. ಈ ಹೋರಾಟದಲ್ಲಿ ನಾವೆಲ್ಲರೂ ಇದ್ದೇವೆ’’ ಎಂದರು.

ತನ್ನ ಜಮೈಕಾ ಮೂಲದ ತಂದೆಯ ಬಗ್ಗೆ ಮಾತನಾಡಿದ ಅವರು, ನಾಗರಿಕ ಹಕ್ಕುಗಳ ಚಳವಳಿಯನ್ನು ಹತ್ತಿರದಿಂದ ನೋಡಿದ ಅನುಭವವಿದೆ ಎಂದರು. ನನ್ನ ಹೆತ್ತವರು 1960ರ ದಶಕದಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ರಸ್ತೆಗಿಳಿದು ಹೋರಾಟ ನಡೆಸಿದ್ದರು ಎಂದರು.

‘‘ಜನಾಂಗೀಯ ತಾರತಮ್ಯಕ್ಕೆ ಲಸಿಕೆಯಿಲ್ಲ. ಲಸಿಕೆಯ ಕೆಲಸವನ್ನು ನಾವೇ ಮಾಡಬೇಕಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News