×
Ad

‘ರಕ್ಷಣಾ ಮಟ್ಟ’ದ ಮಾತುಕತೆಗಳಿಗಾಗಿ ಪಾಕ್ ವಿದೇಶಾಂಗ ಸಚಿವ ಚೀನಾಕ್ಕೆ

Update: 2020-08-20 22:56 IST

ಇಸ್ಲಾಮಾಬಾದ್, ಆ. 20: ಚೀನಾದ ನಾಯಕರೊಂದಿಗೆ ‘ರಕ್ಷಣಾ ಮಟ್ಟದ’ ಮಾತುಕತೆಗಳನ್ನು ನಡೆಸುವುದಕ್ಕಾಗಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಮಖ್ದೂಮ್ ಶಾ ಮೆಹ್ಮೂದ್ ಖುರೇಶಿ ಗುರುವಾರ ಚೀನಾಕ್ಕೆ ತೆರಳಿದ್ದಾರೆ.

ಪಾಕಿಸ್ತಾನದ ಭವಿಷ್ಯವು ಅದರ ದೀರ್ಘಕಾಲೀನ ಮಿತ್ರಪಕ್ಷ ಚೀನಾದ ಭವಿಷ್ಯವನ್ನು ಅವಲಂಬಿಸಿದೆ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ ದಿನಗಳ ಬಳಿಕ ಆ ದೇಶದ ಉನ್ನತ ಮಟ್ಟದ ರಾಜತಾಂತ್ರಿಕರೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ.

ಖುರೇಶಿ ಜೊತೆಗೆ ವಿದೇಶ ಕಾರ್ಯದರ್ಶಿ ಸುಹೈಲ್ ಮಹ್ಮೂದ್ ಸೇರಿದಂತೆ ಹಲವು ರಾಜತಾಂತ್ರಿಕರ ತಂಡವೊಂದು ಚೀನಾಕ್ಕೆ ಪ್ರಯಾಣಿಸಲಿದೆ ಎಂದು ಈ ಬಗ್ಗೆ ಮಾಹಿತಿಯುಳ್ಳ ಮೂಲಗಳು ತಿಳಿಸಿವೆ.

ಚೀನಾದಲ್ಲಿ ಖುರೇಶಿ ಆ ದೇಶದ ವಿದೇಶ ಸಚಿವ ವಾಂಗ್ ಯಿಯನ್ನು ಭೇಟಿಯಾಗಲಿದ್ದಾರೆ. ಬೆಲ್ಟ್ ಮತ್ತು ರೋಡ್ ಯೋಜನೆಗಳು, ದ್ವಿಪಕ್ಷೀಯ ಸಂಬಂಧಗಳು ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ವರ್ಷದ ಕೊನೆಯಲ್ಲಿ ಪಾಕಿಸ್ತಾನಕ್ಕೆ ನೀಡಲಿರುವ ಭೇಟಿಗೆ ಮಾಡಬೇಕಾದ ಸಿದ್ಧತೆಗಳ ಬಗ್ಗೆ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯುವುದು ಎಂದು ನಿರೀಕ್ಷಿಸಲಾಗಿದೆ.

ಇದೇ ಸಂದರ್ಭದಲ್ಲಿ ಕಾಶ್ಮೀರ ಕುರಿತ ಪಾಕಿಸ್ತಾನದ ನಿಲುವಿಗೆ ಖುರೇಶಿ ಚೀನಾದ ಸಹಾಯವನ್ನು ಕೋರುವ ನಿರೀಕ್ಷೆಯಿದೆ ಹಾಗೂ ಪೂರ್ವ ಲಡಾಖ್‌ನಲ್ಲಿ ನಡೆಯುತ್ತಿರುವ ಭಾರತ-ಚೀನಾ ಸಂಘರ್ಷದ ಬಗ್ಗೆಯೂ ಅವರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಪಾಕ್‌ಗೆ ಬೆಂಬಲವಾಗಿ ನಿಂತ ಏಕೈಕ ಮಿತ್ರ ಚೀನಾ: ಇಮ್ರಾನ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ವಾರ ನೀಡಿದ ಟೆಲಿವಿಶನ್ ಸಂದರ್ಶನವೊಂದರಲ್ಲಿ, ಚೀನಾದೊಂದಿಗಿನ ತನ್ನ ದೇಶದ ಸಂಬಂಧಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ಅದೇ ವೇಳೆ, ಸೌದಿ ಅರೇಬಿಯದೊಂದಿಗಿನ ಪಾಕಿಸ್ತಾನದ ಸಂಬಂಧ ಹಳಸಿದೆ ಎನ್ನುವ ವರದಿಗಳನ್ನು ‘ನಿರಾಧಾರ’ ಎಂದು ತಳ್ಳಿ ಹಾಕಿದ್ದರು.

ಚೀನಾದೊಂದಿಗಿನ ತನ್ನ ಸಂಬಂಧವನ್ನು ಪಾಕಿಸ್ತಾನ ಬಲಪಡಿಸುತ್ತಿದೆ ಎಂದು ಹೇಳಿದ ಇಮ್ರಾನ್ ಖಾನ್, ‘‘ನಮ್ಮ ಭವಿಷ್ಯವು ಚೀನಾದೊಂದಿಗೆ ಬೆಸೆದುಕೊಂಡಿದೆ ಎನ್ನುವುದು ಸ್ಪಷ್ಟವಾಗಿದೆ. ಚೀನಾಕ್ಕೆ ಕೂಡ ಪಾಕಿಸ್ತಾನದ ಅವಶ್ಯಕತೆ ತುಂಬಾ ಇದೆ’’ ಎಂದಿದ್ದರು.

‘‘ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ಪಾಕಿಸ್ತಾನದೊಂದಿಗೆ ರಾಜಕೀಯವಾಗಿ ಗಟ್ಟಿಯಾಗಿ ನಿಂತ ಏಕೈಕ ಮಿತ್ರ ಚೀನಾವಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News