ಶಿಕ್ಷಣ ಸಂಸ್ಥೆಗಳಲ್ಲಿ ಚೀನಿ ಪ್ರಭಾವ ಹತ್ತಿಕ್ಕಲು ಕೇಂದ್ರದ ಕಠಿಣ ಕ್ರಮ

Update: 2020-08-21 17:30 GMT

ಹೊಸದಿಲ್ಲಿ,ಆ.21: ಪೂರ್ವ ಲಡಾಕ್‌ ನಲ್ಲಿ ಚೀನಾದ ಅತಿಕ್ರಮಣದ ಬಳಿಕ ಉಭಯ ದೇಶಗಳ ಬಾಂಧವ್ಯ ಹಳಸಿರುವಂತೆಯೇ, ಭಾರತವು ದೇಶದಲ್ಲಿ ಚೀನಾದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದನ್ನು ತೀವ್ರಗೊಳಿಸಿದೆ. ಚೀನಾದ ಉದ್ಯಮಿಗಳು, ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು ಹಾಗೂ ಚೀನಿ ಸಂಘಟನೆಗಳ ವ್ಯಕ್ತಿಗಳಿಗೆ ವೀಸಾ ನೀಡಿಕೆಗೆ ಕಠಿಣ ನಿಬಂಧನೆಗಳನ್ನು ವಿಧಿಸಲಾಗಿದೆಯೆಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.

    ಭಾರತದ ವಿಶ್ವವಿದ್ಯಾನಿಲಯಗಳ ಜೊತೆ ಚೀನಿ ಸಂಸ್ಥೆಗಳ ಸಹಯೋಗವನ್ನು ಗಣನೀಯ ಮಟ್ಟದಲ್ಲಿ ಕಡಿಮೆಗೊಳಿಸಲಾಗುವುದೆಂದು ವಿದೇಶಾಂಗ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಹನ್‌ಬನ್ ಎಂದು ಕರೆಯಲಾಗುವ ಚೀನಿ ಭಾಷಾ ತರಬೇತಿ ಇಲಾಖೆಯ ಜತೆ ಸಹಿಹಾಕಿರುವ 54 ತಿಳುವಳಿಕಾ ಒಪ್ಪಂದಗಳನ್ನು ಕೂಡಾ ಕೇಂದ್ರ ಸರಕಾರ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.

 ಚೀನಾದ ಹನ್‌ಬನ್ ವಿವಿಯು ಜಗತ್ತಿನಾದ್ಯಂತ ಕನ್‌ಫ್ಯೂಶಿಯಸ್ ಇನ್ಸ್‌ಟಿಟ್ಯೂಟ್ ಎಂಬ ಹೆಸರಿನಲ್ಲಿ ವಿವಿಧ ಶಿಕ್ಷಣಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಜೊತೆ ಶೈಕ್ಷಣಿಕ ಪಾಲುದಾರಿಕೆಯನ್ನು ಹೊಂದಿದೆ.

  ಶಾಸನಸಭೆಗಳ ಸದಸ್ಯರು, ಚಿಂತನ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಕಾರ್ಪೊರೇಟ್ ಉದ್ಯಮಿಗಳು ಹಾಗೂ ಶಿಕ್ಷಣ ತಜ್ಞರ ಮೇಲೆ ಪ್ರಭಾವ ಬೀರಲು ಈ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆಯೆಂದು ವಿದೇಶಾಂಗ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News