ತುಘಲಕ್ ನಿರ್ಧಾರಗಳಿಗೆ ಬಲಿಯಾದ ಮಂಗಳೂರಿನ ಕೇಂದ್ರ ಮಾರುಕಟ್ಟೆ !

Update: 2020-08-22 05:20 GMT

ತುಘಲಕ್‌ನ ಗೊಂದಲಕಾರಿ ನಿರ್ಧಾರಗಳು ದೇಶವನ್ನು ಹೇಗೆ ಕಂಗೆಡಿಸಿತ್ತು, ಜನಸಾಮಾನ್ಯರ ಬದುಕನ್ನು ಹೇಗೆ ತತ್ತರಗೊಳಿಸಿತ್ತು ಎನ್ನುವುದನ್ನು ಇತಿಹಾಸ ಪುಸ್ತಕದಲ್ಲಿ ಓದಿದ್ದೇವೆ. ದಿಲ್ಲಿಯ ರಾಜಧಾನಿಯನ್ನು ದೌಲತಾಬಾದ್‌ಗೆ ಬದಲಾಯಿಸಲು ನಿರ್ಧರಿಸಿ, ಅಲ್ಲಿನ ವರ್ತಕರ ಸಹಿತ ಎಲ್ಲ ವರ್ಗದ ಜನರನ್ನು ಗುಳೆ ಎಬ್ಬಿಸಿ ವಲಸೆ ಹೋಗಲು ತುಘಲಕ್ ಆದೇಶ ನೀಡುತ್ತಾನೆ. ದೌಲತಾ ಬಾದ್ ತಲುಪುವಷ್ಟರಲ್ಲಿ ದಾರಿಯಲ್ಲಿ ಹತ್ತು ಹಲವು ಸಂಕಷ್ಟಗಳಿಗೆ ಸಿಲುಕಿ ವರ್ತಕರು, ಜನಸಾಮಾನ್ಯರು ಸಾಯುತ್ತಾರೆ. ದೌಲತಾಬಾದ್‌ನ್ನು ದಿಲ್ಲಿಯಾಗಿ ಪರಿವರ್ತಿಸುವ ಆತನ ಕನಸು ವಿಫಲವಾಗುತ್ತದೆ. ಬಳಿಕ ಅನಿವಾರ್ಯವಾಗಿ ಮತ್ತೆ ದಿಲ್ಲಿಯನ್ನು ರಾಜಧಾನಿ ಮಾಡಿ ಮತ್ತೊಂದು ಆದೇಶ ನೀಡುತ್ತಾನೆ. ಈಗ ದೌಲತಾಬಾದ್‌ನಿಂದ ಜನರು ದಿಲ್ಲಿಯ ಕಡೆಗೆ ಸಾಗಬೇಕಾಗುತ್ತದೆ. ಹೀಗೆ ದಿಲ್ಲಿ-ದೌಲತಾಬಾದ್‌ನ ಅಡಕತ್ತರಿಯಲ್ಲಿ ಸಿಕ್ಕಿ ದೇಶದ ಆರ್ಥಿಕತೆ ಸರ್ವನಾಶವಾಗುತ್ತದೆ. ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಮಂಗಳೂರಿನಲ್ಲಿ ಇದೀಗ ಮತ್ತೆ ತುಘಲಕ್ ಆಡಳಿತ ಜಾರಿಗೊಂಡಿದೆಯೇ ಎಂದು ಇಲ್ಲಿನ ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನದಿಂದ ಆರ್ಥಿಕವಾಗಿ ಸಂಪೂರ್ಣ ತತ್ತರಿಸಿದ್ದ ಮಂಗಳೂರು ಕೇಂದ್ರ ಮಾರುಕಟ್ಟೆಯನ್ನು, ‘ಲಾಕ್‌ಡೌನ್’ನ ಬಂದ್ ಸಂದರ್ಭವನ್ನು ಬಳಸಿಕೊಂಡು ಜಿಲ್ಲಾಡಳಿತ ಏಕಾಏಕಿ ಬೈಕಂಪಾಡಿ ಎಪಿಎಂಸಿಗೆ ವರ್ಗಾಯಿಸಿತು. ‘ಕೊರೋನ ಸುರಕ್ಷತಾ ಕ್ರಮದ ಹಿನ್ನೆಲೆ’ ಎಂಬ ಕಾರಣವನ್ನೂ ನೀಡಿತು. ಮಂಗಳೂರು ನಗರದ ವ್ಯಾಪಾರ ಚಟುವಟಿಕೆಗಳಲ್ಲಿ ಕೇಂದ್ರ ಮಾರುಕಟ್ಟೆಯ ಪಾತ್ರ ಬಹುದೊಡ್ಡದು. ಯಾವಾಗ ಕೇಂದ್ರ ಮಾರುಕಟ್ಟೆ ಬೈಕಂಪಾಡಿಗೆ ವರ್ಗಾವಣೆಗೊಂಡಿತೋ ಅಲ್ಲಿಂದ ಮಂಗಳೂರು ನಗರದಲ್ಲಿ ಸೂತಕದ ವಾತಾವರಣ ನಿರ್ಮಾಣವಾಯಿತು. ಕೇಂದ್ರ ಮಾರುಕಟ್ಟೆ ಮುಚ್ಚಲ್ಪಟ್ಟಿರುವುದರಿಂದ, ಲಾಕ್‌ಡೌನ್ ಹಿಂದೆಗೆದುಕೊಂಡ ಬಳಿಕವೂ ನಗರದ ಆರ್ಥಿಕ ಚಟುವಟಿಕೆಗಳು ಚಿಗುರಲೇ ಇಲ್ಲ. ಸಾರಿಗೆ ವಾಹನಗಳೂ ಬಿಕೋ ಎನ್ನ ತೊಡಗಿದವು. ಎಲ್ಲಕ್ಕಿಂತ ಮುಖ್ಯವಾಗಿ, ಮಂಗಳೂರಿನಿಂದ 12 ಕಿ.ಮೀ. ದೂರದಲ್ಲಿರುವ ಬೈಕಂಪಾಡಿಗೆ ಬೆಳಗಿನ ಜಾವ ತರಕಾರಿ, ದಿನಸಿಗಳನ್ನು ಸಾಗಿಸುವುದೇ ಒಂದು ಸಾಹಸವಾಗಿತ್ತು. ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಪರ್ಕದ ಕೊರತೆಗಳು ಎದುರಾಗಿರುವುದರಿಂದ, ರೈತರು ತಮ್ಮ ಹಣ್ಣು, ತರಕಾರಿಗಳನ್ನು ಅಲ್ಲಿಗೆ ತಲುಪಿಸುವುದೂ ಕಷ್ಟ ಸಾಧ್ಯವಾಯಿತು.

ಈ ಹಿಂದೆಲ್ಲ, ನಗರಕ್ಕೆ ಆಗಮಿಸುವ ದೂರದೂರಿನ ಜನರಿಗೆ ಸೆಂಟ್ರಲ್ ಮಾರ್ಕೆಟ್‌ಗೂ ಭೇಟಿ ನೀಡಿ ಬೇಕಾದ ವಸ್ತು ಸಾಮಗ್ರಿಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡು ಕೊಳ್ಳುವ ಅವಕಾಶಗಳಿದ್ದವು. ಅಷ್ಟೇ ಅಲ್ಲ, ಮನೆಯಲ್ಲಿ ತರಕಾರಿ ಬೆಳೆಯುತ್ತಿದ್ದ ರೈತರು ನೇರವಾಗಿ ಈ ಮಾರುಕಟ್ಟೆಯ ಲಾಭಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದರು. ಬೀದಿ ವ್ಯಾಪಾರಿಗಳಿಗೂ ಬದುಕು ಕಟ್ಟಿಕೊಳ್ಳುವ ಅವಕಾಶವಿತ್ತು. ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಹಣ್ಣು ಹಂಪಲು, ತರಕಾರಿ ಇನ್ನಿತರ ವಸ್ತುಗಳು ದೊರಕುತ್ತಿದ್ದವು. ಆದರೆ ಯಾವಾಗ ಮಂಗಳೂರಿನಿಂದ, ದೂರದ ಬೈಕಂಪಾಡಿಗೆ ಕೇಂದ್ರ ಮಾರುಕಟ್ಟೆ ವರ್ಗಾವಣೆಗೊಂಡಿತೋ ಅಲ್ಲಿಂದ ವ್ಯಾಪಾರಿಗಳು, ಸಾಮಾನ್ಯ ರೈತರು, ಜನಸಾಮಾನ್ಯರು ಸಮಾನ ಸಂತ್ರಸ್ತರಾದರು. ಇದಾದ ಬಳಿಕ ಕೋರ್ಟ್ ಹೋರಾಟದ ಮೂಲಕ ಮತ್ತೆ ವ್ಯಾಪಾರಿಗಳು ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವ ಅವಕಾಶವನ್ನು ಪಡೆದರು. ಸುಮಾರು 100ಕ್ಕೂ ಅಧಿಕ ಮಂದಿ ಮತ್ತೆ ಬೈಕಂಪಾಡಿಯಿಂದ ಮಂಗಳೂರು ನಗರಕ್ಕೆ ಆಗಮಿಸಿದರು. ಆದರೆ ಕೆಲವು ಹಿತಾಸಕ್ತಿಗಳು ವ್ಯಾಪಾರಿಗಳನ್ನು ಮಂಗಳೂರು ನಗರದಿಂದ ಎತ್ತಂಗಡಿ ಮಾಡಿಯೇ ಸಿದ್ಧ ಎಂದು ಹಟ ಹಿಡಿದು ಕೂತಿದ್ದರು. ಇದೀಗ ಜಿಲ್ಲಾಧಿಕಾರಿಯ ಮೂಲಕ ‘ಕೊರೋನ ಮುಂಜಾಗೃತೆ’ಯ ಹೆಸರು ಹೇಳಿ ವ್ಯಾಪಾರ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ. ಅಷ್ಟೇ ಅಲ್ಲ, ಅತ್ತ ಎಪಿಎಂಸಿಯಿಂದಲೂ ಕಾನೂನು ಕ್ರಮದ ಬೆದರಿಕೆ ಬಂದಿದೆ. ಈ ‘ಅತ್ತ-ಇತ್ತ’ಗಳ ನಡುವೆ ಸುಮಾರು 14,000 ಜನರು ಸಂತ್ರಸ್ತರಾಗಿದ್ದಾರೆ.

ವ್ಯಾಪಾರಿಗಳು ಇದೀಗ ಜಿಲ್ಲಾಡಳಿತಕ್ಕೆ ‘ಆತ್ಮಹತ್ಯೆಯ ಬೆದರಿಕೆ’ಯನ್ನು ನೀಡಿದ್ದಾರೆ. ಮಂಗಳೂರು ಎಂದರೆ ಬೃಹತ್ ಮಾಲ್‌ಗಳು, ಎನ್‌ಎಂಪಿಟಿ, ಎಂಆರ್‌ಪಿಎಲ್ ಅಷ್ಟೇ ಅಲ್ಲ. ಮಂಗಳೂರು ನಗರವನ್ನು ನಿಜಕ್ಕೂ ಜೀವಂತವಾಗಿಟ್ಟಿರುವುದು ನಗರದ ಕೇಂದ್ರ ಮಾರುಕಟ್ಟೆ. ಜನರೊಂದಿಗೆ ನೇರ ಸಂಬಂಧವನ್ನು ಮಾರುಕಟ್ಟೆ ಹೊಂದಿರುವುದರಿಂದ, ಇದನ್ನು ಮಂಗಳೂರು ನಗರದ ಹೃದಯ ಎಂದೇ ಕರೆಯಲಾಗುತ್ತದೆ. ಇದು ಕೇವಲ ಮಂಗಳೂರಿನ ಜನರ ಬದುಕನ್ನಷ್ಟೇ ಅಲ್ಲ, ಇಡೀ ಜಿಲ್ಲೆಯ ಬದುಕನ್ನೇ ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಮಂಗಳೂರು ನಗರ ಚಟುವಟಿಕೆಯಲ್ಲಿರಬೇಕಾದರೆ, ದೂರದೂರುಗಳಿಂದ ನಗರದೆಡೆಗೆ ಜನರು ಆಗಮಿಸಬೇಕು. ಅವರು ಎಂಆರ್‌ಪಿಎಲ್ ಅಥವಾ ಎನ್‌ಎಂಪಿಟಿ ನೋಡುವುದಕ್ಕಾಗಿ ಬರುವುದಿಲ್ಲ. ತಮ್ಮ ದೈನಂದಿನ ಬದುಕಿನ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಕೇಂದ್ರ ಮಾರುಕಟ್ಟೆಯನ್ನು ಅರಸಿ ಬರುತ್ತಾರೆ. ಸಾವಿರಾರು ವ್ಯಾಪಾರಸ್ಥರು ಮಾತ್ರವಲ್ಲ, ಇದರ ಆವರಣದಲ್ಲಿ ನೂರಾರು ಬೀದಿ ವ್ಯಾಪಾರಿಗಳು ಕೂಡ ಬದುಕು ಕಟ್ಟಿಕೊಳ್ಳುತ್ತಾರೆ. ಈ ಮಾರುಕಟ್ಟೆಗೆ ಬಂದ ಜನರಿಂದಲೇ ಮಂಗಳೂರಿನ ಇನ್ನಿತರ ಅಂಗಡಿಗಳು, ಹೊಟೇಲ್‌ಗಳಲ್ಲಿ ವ್ಯಾಪಾರ ನಡೆಯುತ್ತವೆ. ಆಟೊ ರಿಕ್ಷಾ, ಬಸ್‌ಗಳು ತುಂಬಿ ತುಳುಕುವುದೂ ಈ ಮಾರುಕಟ್ಟೆಯ ಕಾರಣದಿಂದಲೇ ಆಗಿದೆ. ಕೇಂದ್ರ ಮಾರುಕಟ್ಟೆಯನ್ನು ವರ್ಗಾಯಿಸುವುದು ಎಂದರೆ ರೈತಾಪಿ ಜನರನ್ನು ಸಂಕಟಕ್ಕೆ ತಳ್ಳುವುದು ಮತ್ತು ಮಂಗಳೂರಿನ ಮಾರುಕಟ್ಟೆ ವ್ಯವಸ್ಥೆಯನ್ನೇ ನಾಶ ಮಾಡಿದಂತೆ. ಬೃಹತ್ ಕಾರ್ಪೊರೇಟ್ ಸಂಸ್ಥೆಗಳು, ಮಾಲ್‌ಗಳು ಮಂಗಳೂರನ್ನು ಆವರಿಸಿಕೊಳ್ಳಬೇಕಾದರೆ ಜನಸಾಮಾನ್ಯರೊಂದಿಗೆ ಕರುಳ ಸಂಬಂಧ ಹೊಂದಿರುವ ಈ ಮಾರುಕಟ್ಟೆ ನಾಶವಾಗುವುದು ಅತ್ಯಗತ್ಯ. ಈ ಕಾರಣದಿಂದಲೇ ಕೆಲವು ಶಕ್ತಿಗಳು ರಾಜಕೀಯ ಒತ್ತಡಗಳನ್ನು ಬಳಸಿ ವ್ಯಾಪಾರಸ್ಥರನ್ನು ಮಂಗಳೂರಿನಿಂದ ಎತ್ತಂಗಡಿ ಮಾಡಲು ಸಂಚು ರೂಪಿಸಿದ್ದಾರೆ. ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ.

ಅತ್ಯಂತ ಅಮಾನವೀಯವೆಂದರೆ, ಕೋರ್ಟ್ ಆದೇಶದಂತೆ ಎಪಿಎಂಸಿಯಿಂದ ಮತ್ತೆ ತಮ್ಮ ಸಾಧನಗಳ ಜೊತೆಗೆ ಕೇಂದ್ರ ಮಾರುಕಟ್ಟೆಗೆ ವರ್ಗಾವಣೆಗೊಂಡ ವ್ಯಾಪಾರಸ್ಥರನ್ನು ‘ಕೊರೋನ’ ಹೆಸರಿನಲ್ಲಿ ಓಡಿಸಿರುವುದು. ತಮ್ಮ ರಾಜಕೀಯ ದುರುದ್ದೇಶಗಳನ್ನು ಸಾಧಿಸುವುದಕ್ಕಾಗಿ ವ್ಯಾಪಾರಸ್ಥರು ಮತ್ತು ಮಂಗಳೂರು ಜನತೆಯ ವಿರುದ್ಧ ಕೊರೋನವನ್ನು ದುರ್ಬಳಕೆ ಮಾಡಲಾಗುತ್ತಿದೆ. ಇದು ಕೊರೋನ ವಿರುದ್ಧದ ಹೋರಾಟಕ್ಕೂ ಮಾಡಿರುವ ಅಪಚಾರವಾಗಿದೆ. ಸೆಂಟ್ರಲ್ ಮಾರುಕಟ್ಟೆಯಿಂದ ಕೊರೋನ ಹರಡುತ್ತದೆ ಎನ್ನುವುದು ಜಿಲ್ಲಾಡಳಿತದ ಆತಂಕ. ಆದರೆ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಗೊಂಡ ಬಳಿಕ ಹಲವರಿಗೆ ಕೊರೋನ ಬಂದಿರುವ ವರದಿಗಳಿವೆ. ಹಾಗಾದರೆ ಎಪಿಎಂಸಿಗೆ ವ್ಯಾಪಾರಿಗಳನ್ನು ಮತ್ತೆ ವರ್ಗಾಯಿಸಿದರೆ ಕೊರೋನ ಬರುವುದಿಲ್ಲವೇ? ಎಂದು ಜನರು ಕೇಳುತ್ತಿದ್ದಾರೆ. ಒಂದಿಬ್ಬರಿಗೆ ಕೊರೋನ ಬಂದಿದೆ ಎಂದು ಆರೋಪಿಸಿ ಇಡೀ ಮಾರುಕಟ್ಟೆಯನ್ನು ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದ ಉದಾಹರಣೆ ದೇಶದಲ್ಲೇ ಇಲ್ಲ. ಹೀಗಿರುವಾಗ ಕೇಂದ್ರ ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳನ್ನು ಓಡಿಸಲೇ ಬೇಕು ಎನ್ನುವುದರ ಹಿಂದಿರುವ ಶಕ್ತಿಯಾವುದು ? ಎನ್ನುವ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ. ಕೇಂದ್ರ ಮಾರುಕಟ್ಟೆಯನ್ನು ಸಾಯಿಸುವ ಮೂಲಕ, ತಳಸ್ತರದ ಜನರೊಂದಿಗೆ ನೇರ ಸಂಬಂಧವನ್ನು ಹೊಂದಿದ ಮಂಗಳೂರು ನಗರವನ್ನು ಸಂಪೂರ್ಣ ಇಲ್ಲವಾಗಿಸುವ ಹುನ್ನಾರ ಇದರ ಹಿಂದಿದೆ. ಜೊತೆಗೆ ಇಡೀ ಮಂಗಳೂರನ್ನು ಕೆಲವು ಖಾಸಗಿ ಶಕ್ತಿಗಳು, ಕಾರ್ಪೊರೇಟ್ ದೊರೆಗಳು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಂಚು ನಡೆಸುತ್ತಿದ್ದಾರೆ. ಮಂಗಳೂರಿನ ವ್ಯಾಪಾರಸ್ಥರು ಮಾತ್ರವಲ್ಲ, ದ.ಕ. ಜಿಲ್ಲೆಯ ಜನರೆಲ್ಲ ಒಂದಾಗಿ ಈ ಸಂಚನ್ನು ವಿಫಲಗೊಳಿಸಬೇಕಾಗಿದೆ. ‘ಜನಸಾಮಾನ್ಯರ ಮಂಗಳೂರ’ನ್ನು ಉಳಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News