ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ಸರಿಯಾಗಿ ತಪಾಸಣೆ ಮಾಡಿರಲಿಲ್ಲ: ಇಂಜಿನಿಯರ್ ಗಳಿಂದ ಬಹಿರಂಗ

Update: 2020-08-23 11:47 GMT

►Thequint.com ವರದಿ

ಹೊಸದಿಲ್ಲಿ, ಆ.23: ಚುನಾವಣಾ ಆಯೋಗವು ಎವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುತ್ತದೆ ಮತ್ತು ಅವರನ್ನು ನಂತರ ಕೆಲಸದಿಂದ ತೆಗೆದುಹಾಕುತ್ತದೆ ಎನ್ನುವುದನ್ನು ಸುದ್ದಿ ಜಾಲತಾಣ ‘Thequint.com’  ಈ ಹಿಂದೆಯೇ ಬಯಲುಗೊಳಿಸಿತ್ತು. ಇದೀಗ ಚುನಾವಣಾ ಆಯೋಗಕ್ಕಾಗಿ ಈ ಯಂತ್ರಗಳನ್ನು ತಯಾರಿಸುವ ಸರಕಾರಿ ಸ್ವಾಮ್ಯದ ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.(ಇಸಿಐಎಲ್) ಗುತ್ತಿಗೆ ಆಧಾರದಲ್ಲಿ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುತ್ತದೆ ಮತ್ತು ಕಂಪನಿಯ ಈ ಪರಿಪಾಠ ಇಡೀ ಚುನಾವಣಾ ಪ್ರಕ್ರಿಯೆಯನ್ನೇ ದುರ್ಬಲಗೊಳಿಸುತ್ತದೆ ಎಂಬ ಆತಂಕವನ್ನು ಮಾಜಿ ಗುತ್ತಿಗೆ ಇಂಜಿನಿಯರ್‌ಗಳು ವ್ಯಕ್ತಪಡಿಸಿದ್ದಾರೆ ಎಂದು Thequint.com ವರದಿ ಮಾಡಿದೆ.

 ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳು ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ವಿನ್ಯಾಸ ಕುರಿತು ಮಾಹಿತಿಗಳನ್ನು ಸೋರಿಕೆ ಮಾಡಲು ಸಾಧ್ಯವಿದೆ. ಅವರು ಚುನಾವಣಾ ಯೋಜನೆ ಮತ್ತು ಅದನ್ನು ನಡೆಸುವುದರ ಕುರಿತೂ ಮಾಹಿತಿಗಳನ್ನು ಸೋರಿಕೆ ಮಾಡಬಲ್ಲರು. ಇಂತಹ ಇಂಜಿನಿಯರ್‌ ಓರ್ವ ಸೂಕ್ತ ಜ್ಞಾನವನ್ನು ಹೊಂದಿದ್ದಾನೆ ಮತ್ತು ಇವಿಎಮ್‌ಗಳನ್ನು ತಾನೂ ತಯಾರಿಸಬಲ್ಲ ಎಂದು ಕಂಪನಿಯೊಂದು ಭಾವಿಸಿದರೆ ಅದು ಇಂತಹ ಇಂಜಿನಿಯರ್‌ಗಳನ್ನು ಹೆಚ್ಚೆಚ್ಚಾಗಿ ನೇಮಕ ಮಾಡಿಕೊಳ್ಳುತ್ತದೆ ಮತ್ತು ಇವಿಎಮ್‌ಗಳನ್ನು ತಯಾರಿಸಲು ಆರಂಭಿಸುತ್ತದೆ. ಇದು ಇಡೀ ಚುನಾವಣಾ ಪ್ರಕ್ರಿಯೆಯನ್ನೇ ದುರ್ಬಲಗೊಳಿಸುತ್ತದೆ ಎಂದು ಸುದ್ದಿ ಜಾಲತಾಣದೊಂದಿಗೆ ಮಾತನಾಡಿದ ಇಸಿಐಎಲ್ ಮಾಜಿ ಗುತ್ತಿಗೆ ಇಂಜಿನಿಯರ್ ಸುರೇಶ್ (ಹೆಸರು ಬದಲಿಸಲಾಗಿದೆ) ಬಹಿರಂಗಗೊಳಿಸಿದ್ದಾರೆ.

ಖಾಸಗಿ ಇಂಜಿನಿಯರ್‌ ಗಳನ್ನು ತೊಡಗಿಸಿಕೊಳ್ಳುವುದು ಹೇಗೆ ದೇಶದ ಚುನಾವಣಾ ಪ್ರಕ್ರಿಯೆಯನ್ನು ಗಂಭೀರ ಅಪಾಯಕ್ಕೆ ಸಿಲುಕಿಸುತ್ತದೆ ಎಂಬ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಚುನಾವಣಾ ಆಯೋಗವು ರಾಜ್ಯಗಳ ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಿಗಾಗಿ ಟಿ ಆ್ಯಂಡ್ ಎಂ ಸರ್ವಿಸಿಸ್ ಕನ್ಸ್‌ಲ್ಟಿಂಗ್ ಪ್ರೈ.ಲಿ.ಎಂಬ ಖಾಸಗಿ ಕಂಪನಿಯ ಮೂಲಕ ಗುತ್ತಿಗೆ ಆಧಾರದಲ್ಲಿ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿದೆ ಎನ್ನುವುದನ್ನು ‘ದಿ ಕ್ವಿಂಟ್’ ಈ ಹಿಂದೆ ಬಯಲಿಗೆಳೆದಿತ್ತು. ಟಿ ಆ್ಯಂಡ್ ಎಂ ಇಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಇಸಿಐಎಲ್ ಹೊಂದಿರುವ ಅಧಿಕೃತ ಸೇವಾ ಪೂರೈಕೆದಾರರ ಪಟ್ಟಿಯಲ್ಲೂ ಇಲ್ಲ ಎನ್ನುವುದನ್ನೂ ಅದು ಬೆಟ್ಟು ಮಾಡಿತ್ತು. ತಾನು ಯಾವುದೇ ಹೊರಗಿನ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿಲ್ಲ ಎಂದು ಇಸಿಐಎಲ್ ಮರುದೃಢೀಕರಿಸಿದೆ ಎಂದು ಚುನಾವಣಾ ಆಯೋಗವು ಆಗ ಹೇಳಿಕೊಂಡಿತ್ತು.

ಸುರೇಶ್ ಬಳಿಯಿರುವ ನೇಮಕಾತಿ ಪತ್ರದಂತೆ ಇಸಿಐಎಲ್ ಅವರನ್ನು ನವೆಂಬರ್ 2018ರಲ್ಲಿ ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಎಂದು ನೇಮಕ ಮಾಡಿಕೊಂಡಿತ್ತು.

“ನಾವು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು ಎನ್ನುವುದನ್ನು ಬಹಿರಂಗಪಡಿಸದಂತೆ ಇಸಿಐಎಲ್ ನಮ್ಮ ಮೇಲೆ ನಿರ್ಬಂಧ ಹೇರಿತ್ತು. ಡಿಪ್ಲೊಮಾ ಪದವೀಧರರಾಗಿದ್ದ ಟಿ ಆ್ಯಂಡ್ ಎಮ್‌ನ ನೌಕರರು ಇವಿಎಂ ಮತ್ತು ವಿವಿಪ್ಯಾಟ್‌ಗಳ ಕುರಿತು ನಮಗೆ ಅಲ್ಪಸ್ವಲ್ಪ ತರಬೇತಿ ನೀಡಿದ್ದರು. ವಾಸ್ತವದಲ್ಲಿ ತಾವು ತರಬೇತಾಗಿದ್ದು ಈ ಯಂತ್ರಗಳೊಂದಿಗೆ ಕೆಲಸ ಮಾಡತೊಡಗಿದ ನಂತರವೇ” ಎಂದು ಸುರೇಶ್ ತಿಳಿಸಿದ್ದಾರೆ.

ಇವಿಎಂ ಮತ್ತು ವಿವಿಪ್ಯಾಟ್‌ಗಳಲ್ಲಿಯ ದೋಷಗಳನ್ನು ಕಡೆಗಣಿಸಲಾಗಿತ್ತು ಎನ್ನುವುದನ್ನು ಇಸಿಐಎಲ್‌ನ ಇನ್ನೋರ್ವ ಮಾಜಿ ಗುತ್ತಿಗೆ ಇಂಜಿನಿಯರ್ ಅಶೋಕ (ಹೆಸರು ಬದಲಿಸಲಾಗಿದೆ) ಬಹಿರಂಗಗೊಳಿಸಿದ್ದಾರೆ. ಈ ಇಬ್ಬರೂ 2019ರ ಸಾರ್ವತ್ರಿಕ ಚುನಾವಣೆ ಹಾಗೂ ಜಾರ್ಖಂಡ್ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಇಸಿಐಎಲ್‌ನಲ್ಲಿ ಕೆಲಸ ಮಾಡಿದ್ದರು.

ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ಚುನಾವಣೆಗೆ ಆರು ತಿಂಗಳು ಮೊದಲು ಆರಂಭಗೊಳ್ಳುತ್ತದೆ. 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಗಣನೀಯ ಸಂಖ್ಯೆ ಪ್ರಕರಣಗಳಲ್ಲಿ ಎಫ್‌ಎಲ್‌ಸಿಯನ್ನು ಸೂಕ್ತವಾಗಿ ನಡೆಸಿರಲಿಲ್ಲ ಎಂಬ ಮಾಹಿತಿ ಇವರಿಗೆ ಲಭಿಸಿತ್ತು. ಎಫ್‌ಎಲ್‌ಸಿ ಸಂದರ್ಭ ಇಂಜಿನಿಯರ್‌ಗಳು ಇವಿಎಮ್‌ನಲ್ಲಿ 96 ಮತಗಳನ್ನು ಚಲಾಯಿಸುವುದು ಕಡ್ಡಾಯವಾಗಿದೆ. ಆದರೆ ಹೆಚ್ಚಿನ ಸಲ ಟಿ ಆ್ಯಂಡ್ ಎಂ ಇಂಜಿನಿಯರ್‌ಗಳು ಕೇವಲ 75 ಮತಗಳಿಗೆ ಓ.ಕೆ ಹೇಳಿದ್ದರು, ಅವರು ಯಂತ್ರಗಳ ಇತರ ದೋಷಗಳನ್ನು ಕಡೆಗಣಿಸಿದ್ದರು ಮತ್ತು ಅವುಗಳಿಗೆ ಹಸಿರು ನಿಶಾನೆ ನೀಡಿದ್ದರು ಎಂದು ಅಶೋಕ ಬೆಟ್ಟು ಮಾಡಿದ್ದಾರೆ.

ಮೇ 2020ರಲ್ಲಿ ಸುರೇಶ್ ಮತ್ತು ಅಶೋಕ್ ಸೇರಿದಂತೆ 189 ಗುತ್ತಿಗೆಯಾಧಾರಿತ ಇಂಜಿನಿಯರ್‌ಗಳನ್ನು ಇಸಿಐಎಲ್ ಸೇವೆಯಿಂದ ತೆಗೆದಿತ್ತು. ಇಸಿಐಲ್ ಬಳಿ ಈಗ ಯಾವುದೇ ಯೋಜನೆಗಳಿಲ್ಲ, ಹೀಗಾಗಿ ನಿಮ್ಮ ಅಗತ್ಯವಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಒಂದು ವಾರದ ಬಳಿಕ ಕಂಪನಿಯು ಮತ್ತೆ ಇಂಜಿನಿಯರ್‌ಗಳ ನೇಮಕಾತಿಗಾಗಿ ಜಾಹೀರಾತು ನೀಡಿತ್ತು.

ಅಧಿಕೃತ ಇಂಜಿನಿಯರ್‌ಗಳನ್ನು ಮಾತ್ರ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗುತ್ತದೆ ಎಂದು ಹೇಳುವ ಮೂಲಕ ಚುನಾವಣಾ ಆಯೋಗವೇಕೆ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಪ್ರತಿಯೊಬ್ಬರನ್ನೂ ಏಕೆ ದಾರಿ ತಪ್ಪಿಸುತ್ತಿದೆ?, ತಾನು ಇಂಜಿನಿಯರ್ ಗಳನ್ನು ಅಲ್ಪಾವಧಿಯ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದನ್ನು ಆಯೋಗವು ಏಕೆ ಒಪ್ಪಿಕೊಳ್ಳುತ್ತಿಲ್ಲ?, ಖುದ್ದು ಚುನಾವಣಾ ಆಯೋಗವೇ ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ವಿನ್ಯಾಸಗಳನ್ನು ಬಹಿರಂಗಗೊಳಿಸಲು ನಿರಾಕರಿಸುತ್ತಿರುವಾಗ ಗುತ್ತಿಗೆಯಾಧಾರದ ಇಂಜಿನಿಯರ್‌ಗಳಿಗೆ ಅವುಗಳ ನಿರ್ವಹಣೆಯನ್ನು ಒಪ್ಪಿಸಿದ್ದೇಕೆ? ಈ ಮೂರು ಪ್ರಶ್ನೆಗಳಿಗೆ ಈಗಲೂ ಉತ್ತರ ಲಭಿಸಿಲ್ಲ.

 ಆಯೋಗವು ಸುದ್ದಿ ಜಾಲತಾಣವು ಕೇಳಿದ್ದ ಪ್ರಶ್ನೆಗಳನ್ನು ಇಸಿಐಎಲ್ ಹೆಗಲಿಗೆ ಜಾರಿಸಿ ತಾನು ನುಣುಚಿಕೊಂಡಿದೆ. ಇಂಜಿನಿಯರ್‌ಗಳ ನೇಮಕಾತಿ,ಅವರನ್ನು ಉಳಿಸಿಕೊಳ್ಳುವಿಕೆ ಅಥವಾ ತೆಗೆಯುವುದು ಇಸಿಐಎಲ್ ಮತ್ತು ಬಿಐಎಲ್‌ಗಳ ವಿಶಿಷ್ಟಾಧಿಕಾರವಾಗಿದೆ. ಇವಿಎಂ ಯಂತ್ರಗಳು ಶೇ.100ರಷ್ಟು ಸುರಕ್ಷಿತವಾಗಿರಲು ಎರಡೂ ಕಂಪನಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿವೆ ಎಂದು ಅದು ಹೇಳಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News