ಆಸ್ತಿ ಮುಟ್ಟುಗೋಲು ಕಾನೂನು: ಜನಧ್ವನಿಯ ದಮನಕ್ಕೆ ಸಂಚು

Update: 2020-08-24 05:43 GMT

ಸಿಎಎ ಪ್ರತಿಭಟನೆಯನ್ನು ಉತ್ತರ ಪ್ರದೇಶದಲ್ಲಿ ಹೇಗೆ ಕ್ರೂರವಾಗಿ ದಮನಿಸಲಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. 11ಕ್ಕೂ ಅಧಿಕ ಅಮಾಯಕರನ್ನು ಪೊಲೀಸರು ಗುಂಡಿಟ್ಟುಕೊಂದರು. ಪ್ರತಿಭಟನಾಕಾರರ ಮನೆ ಮನೆಗೆ ನುಗ್ಗಿ ಪೊಲೀಸರು ದೌರ್ಜನ್ಯ ಎಸಗಿದರು. ಅಂತಿಮವಾಗಿ, ಪ್ರತಿಭಟನಾಕಾರರನ್ನು ಗಲಭೆಕೋರರು ಎಂದು ಕರೆದು, ಪ್ರತಿಭಟನೆಯ ಸಂದರ್ಭದಲ್ಲಾದ ನಾಶ ನಷ್ಟಗಳನ್ನು ಆರೋಪಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಮಾಡುವ ಮೂಲಕ ತುಂಬುವುದಕ್ಕೆ ಸರಕಾರ ಮುಂದಾಯಿತು. ಆ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿ ನಡೆದು ಕೊಂಡ ರೀತಿ, ಅವರಿಗೆ ದೇಶದ ಪ್ರಜಾಸತ್ತೆಯ ಮೇಲೆ ಯಾವ ಗೌರವವೂ ಇಲ್ಲ ಎನ್ನುವುದನ್ನು ಸಾಬೀತು ಪಡಿಸಿತು. ಪೊಲೀಸರು ಬಂಧಿಸಿದಾಕ್ಷಣ ಆರೋಪಿಗಳು ಅಪರಾಧಿಗಳಾಗುವುದಿಲ್ಲ. ಅದನ್ನು ತೀರ್ಮಾನಿಸಬೇಕಾದದ್ದು ನ್ಯಾಯಾಲಯ. ಒಂದು ವೇಳೆ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಮಾಡಬೇಕಾದರೂ, ನ್ಯಾಯಾಲಯ ಮೊದಲು ಆರೋಪಿಗಳನ್ನು ದುಷ್ಕರ್ಮಿಗಳು ಅಥವಾ ಅಪರಾಧಿಗಳು ಎಂದು ಘೋಷಿಸಬೇಕು. ಅದಕ್ಕೂ ಮೊದಲೇ ಆರೋಪಿಗಳನ್ನು ಗುರುತಿಸಿ ಅವರ ಭಾವಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸರಕಾರ ಪ್ರಕಟಿಸಿತು. ಹಾಗೆ ಪ್ರಕಟಿಸಿದ ಭಾವಚಿತ್ರಗಳಲ್ಲಿ ಸಾಮಾಜಿಕ ಹೋರಾಟಗಾರರು, ಚಿಂತಕರೂ ಇದ್ದರು. ವಿಪರ್ಯಾಸದ ಸಂಗತಿಯೆಂದರೆ, ಒಂದು ವೇಳೆ ಗಲಭೆಗೆ ಕಾರಣರಾದವರ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕುವ ಕಾನೂನು ಈ ಹಿಂದಿನ ಗಲಭೆಗಳಿಗೂ ಅನ್ವಯವಾಗುವುದಾದರೆ, ಮೊತ್ತ ಮೊದಲು ಆದಿತ್ಯನಾಥ್ ಅವರ ಆಸ್ತಿ ಪಾಸ್ತಿಗಳನ್ನೇ ಮುಟ್ಟುಗೋಲು ಹಾಕಬೇಕಾಗುತ್ತದೆ.

ಆದಿತ್ಯನಾಥ್ ಅವರ ಈ ಹಿಂದಿನ ಇತಿಹಾಸವನ್ನು ಕೆದಕಿದರೆ, ತಮ್ಮ ಉದ್ವಿಗ್ನಕಾರಿ ಭಾಷಣಗಳ ಮೂಲಕ ಹಲವು ಗಲಭೆಗಳಿಗೆ ಅವರು ಕಾರಣರಾಗಿದ್ದಾರೆ. ಅವರ ಮೇಲೆ ಮುಖ್ಯಮಂತ್ರಿಯಾಗುವ ಮೊದಲು ಹಲವು ಕ್ರಿಮಿನಲ್ ಪ್ರಕರಣಗಳಿದ್ದವು. ಬಳಿಕ ಅವುಗಳನ್ನು ರದ್ದುಗೊಳಿಸಲಾಯಿತು. ಈ ಹಿಂದೆ ಉತ್ತರ ಪ್ರದೇಶದಲ್ಲಿ ಗಲಭೆಗಳನ್ನು ಬಿತ್ತಿ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾದ ಮನುಷ್ಯನೇ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಗಲಭೆಕೋರರ ಆಸ್ತಿಪಾಸ್ತಿ ಮುಟ್ಟುಗೋಲು ಕಾನೂನೊಂದನ್ನು ಜಾರಿಗೊಳಿಸಲು ಮುಂದಾಗುವುದು ಕಾಲದ ಕ್ರೂರ ವ್ಯಂಗ್ಯವಾಗಿದೆ. ಇದೀಗ ಕರ್ನಾಟಕವೂ ಉತ್ತರ ಪ್ರದೇಶವನ್ನು ಮಾದರಿಯಾಗಿಟ್ಟುಕೊಂಡು ಅಂತಹದೊಂದು ಕಾನೂನನ್ನು ಜಾರಿಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಲಭೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸರಕಾರ ಈ ನಿರ್ಧಾರಕ್ಕೆ ಬಂದಿದೆ. ವಿಪರ್ಯಾಸವೆಂದರೆ, ಈ ಸರಕಾರದೊಳಗಿರುವ ಹಲವು ನಾಯಕರು ಈ ಹಿಂದೆ ಹಲವು ಗಲಭೆಗಳಿಗೆ ಕಾರಣರಾದವರು. ಹಲವರ ಮೇಲೆ ಹಲವು ಕ್ರಿಮಿನಲ್ ಮೊಕದ್ದಮೆಗಳಿದ್ದವು. ಕೆಲವರ ಮೇಲಿನ ಪ್ರಕರಣಗಳು ಇನ್ನೂ ಜೀವಂತ ಇವೆ. ಸರಕಾರ ಪ್ರತಿನಿಧಿಸುವ ಪಕ್ಷದ ರಾಜ್ಯಾಧ್ಯಕ್ಷರು ಈ ಹಿಂದೆ ‘ಮಂಗಳೂರಿಗೆ ಬೆಂಕಿ ಹಚ್ಚುತ್ತೇವೆ’ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದವರು. ಇವರೆಲ್ಲ ಸೇರಿ, ಇದೀಗ ಗಲಭೆಕೋರರ ಖಾಸಗಿ ಸೊತ್ತುಗಳನ್ನು ಮಟ್ಟಹಾಕಬೇಕು ಎಂದು ಹೊರಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಕಾನೂನನ್ನು ಅಲ್ಲಿನ ಸರಕಾರ ಯಾವುದೇ ಚರ್ಚೆಗಳಿಲ್ಲದೆ ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಆದರೆ ನ್ಯಾಯಾಲಯದಲ್ಲಿ ಈ ಕಾನೂನು ಮಾನ್ಯತೆಯನ್ನು ಪಡೆಯುತ್ತದೆಯೇ ಎನ್ನುವುದನ್ನು ಭವಿಷ್ಯವೇ ಹೇಳಬೇಕು. ಯಾಕೆಂದರೆ, ಸದ್ಯಕ್ಕೆ ನ್ಯಾಯವ್ಯವಸ್ಥೆಯೂ ಗೊಂದಲಕಾರಿ ತೀರ್ಪುಗಳನ್ನು ನೀಡುವಲ್ಲಿ ಕುಖ್ಯಾತವಾಗಿದೆ.

ಈ ಕಾನೂನು ಎಷ್ಟರಮಟ್ಟಿಗೆ ಸಮಂಜಸ? ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಗಲಭೆಕೋರರು ನಷ್ಟ ಉಂಟು ಮಾಡಿದಾಗ ಅದಕ್ಕೆ ಪರಿಹಾರ ಒದಗಿಸುವ ಕಾಯ್ದೆ -Prevention of Damage To Public Property Act (PDPP)- ಯು 1984ರಲ್ಲೇ ಜಾರಿಗೆ ಬಂದಿದ್ದರೂ ಯಾವ ಸರಕಾರಗಳು ಅದನ್ನು ಜಾರಿ ಮಾಡಿರಲಿಲ್ಲ. ಆದರೆ 2007ರಲ್ಲಿ (In Re:Destruction Of Public&Pvt. ... vs State Of A.P. & Ors on 16 April, 2009) ಸುಪ್ರೀಂ ಕೋರ್ಟು ಹೆಚ್ಚುತ್ತಿರುವ ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟವನ್ನು ತಡೆಗಟ್ಟಲು ಕಾನೂನು ಕ್ರಮಗಳನ್ನು ಸೂಚಿಸಲು ಜಸ್ಟಿಸ್ ಕೆ. ಟಿ. ಥಾಮಸ್ ಹಾಗೂ ಹಿರಿಯ ವಕೀಲ ಫಾಲಿ ನಾರಿಮನ್ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ನೇಮಿಸಿತು. ಆ ಸಮಿತಿಗಳು ಕೊಟ್ಟ ವರದಿಯನ್ನು ಆಧರಿಸಿ 2009ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಗಳನ್ನು ಗಲಭೆಕೋರರಿಂದ ವಸೂಲಿ ಮಾಡಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು.

  ಆ ನಂತರವೂ ಈ ಸೂತ್ರಗಳನ್ನು ಯಾವ ಸರಕಾರಗಳೂ ಪಾಲಿಸಲಿಲ್ಲ. ಯಾಕೆಂದರೆ ಈಗ ಸರಕಾರ ನಡೆಸುತ್ತಿರುವವರೇ ಆಗ ಗಲಭೆ ನಡೆಸುತ್ತಿದ್ದರು. 2018ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ (Kodungallur Film Society vs Union Of India on 1 October, 2018) ಮತ್ತೊಮ್ಮೆ 2009ರ ತನ್ನ ತೀರ್ಪನ್ನು ಉಲ್ಲೇಖಿಸಿ ಅದನ್ನು ಮತ್ತಷ್ಟು ಸಮಕಾಲೀನಗೊಳಿಸಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತು. ಈ ಸೂತ್ರದಂತೆ, ಮುಖ್ಯವಾಗಿ ಯಾವುದಾದರೂ ಸಾರ್ವಜನಿಕ ಪ್ರತಿರೋಧಗಳಿಂದ ಒಂದು ಸಮುದಾಯ, ವರ್ಗ, ವ್ಯಕ್ತಿ ಅಥವಾ ಸಂಸ್ಥೆಯ ಘನತೆ, ಭಾವನೆ, ಶ್ರದ್ಧೆ ಅಥವಾ ಪ್ರತಿಷ್ಠೆಗಳಿಗೆ ಧಕ್ಕೆಯುಂಟಾಗಿದ್ದರೆ ಅದಕ್ಕೆ ಉ್ಡಛಿಞಟ್ಝಚ್ಟ ಈಞಜಛಿ ಅನ್ನು ವಸೂಲಿ ಮಾಡಬಹುದೆಂದು ಮತ್ತು ಅದರ ಪ್ರಮಾಣ ಭೌತಿಕ ಡ್ಯಾಮೇಜಿನ ಪರಿಹಾರದ ಎರಡು ಪಟ್ಟಿರಬಹುದೆಂದು ಸುಪ್ರೀಂಕೋರ್ಟ್ ಆದೇಶ ತಿಳಿಸುತ್ತದೆ.

ಬಹಳಷ್ಟು ಸಾರಿ ಈ ಗಲಭೆಗಳಲ್ಲಿ ಭಾಗವಹಿಸುವ ಕಾಲಾಳುಗಳಿಗಿಂತ ಅವರ ಹಿಂದಿರುವ ನಾಯಕರೇ ಹೆಚ್ಚು ಅಪರಾಧಿಗಳಾಗಿದ್ದು ಅವರಿಂದಲೇ ಹೆಚ್ಚಿನ ಪರಿಹಾರವನ್ನು ವಸೂಲಿ ಮಾಡಬೇಕೆಂದು ಕೂಡಾ ನಿರ್ದೇಶಿಸುತ್ತದೆ. ಆದ್ದರಿಂದ, ಕಾವಲ್ ಬೈರಸಂದ್ರ ಪ್ರಕರಣದಲ್ಲಿ ಆಸ್ತಿಪಾಸ್ತಿ ನಷ್ಟಗಳಿಗೆ ಗಲಭೆಕೋರರನ್ನು ಹೊಣೆ ಮಾಡಲು ಹೊರಟಿರುವ ಬಿಜೆಪಿ ಸರಕಾರ ಅದಕ್ಕೂ ಮುಂಚೆ ಪ್ರವಾದಿ ನಿಂದನೆಯ ಫೇಸ್‌ಬುಕ್ ಪೋಸ್ಟ್ ಹಾಕಿ ಇಡೀ ಸಮುದಾಯದ ನಂಬಿಕೆ, ಶ್ರದ್ಧೆ ಹಾಗೂ ಪ್ರತಿಷ್ಠೆಗಳಿಗೆ ಹಾನಿಯುಂಟು ಮಾಡಿದ ನವೀನ್ ಕುಮಾರ್ ನಿಂದ Exemplary Damage ವಸೂಲಿ ಮಾಡಬೇಕಲ್ಲವೇ? ನವೀನ್ ಕುಮಾರನ ಫೇಸ್ಬುಕ್ ಪೋಸ್ಟ್ ಬೇರೆಯವರ ಪೋಸ್ಟಿನ ಪಾರ್ವರ್ಡ್ ಆಗಿದ್ದು...ಆ ಪೋಸ್ಟನ್ನು ಸೃಷ್ಟಿಸಿದವರಿಂದಲೂ Exemplary Damage ವಸೂಲಿ ಮಾಡಬೇಕಲ್ಲವೇ? ಅದನ್ನು ಮಾಡದೆ , ಅತ್ಯಂತ ಬಡತನದಲ್ಲಿ ಬದುಕುತ್ತಿರುವ ಹಾಗೂ ಆ ಬಡತನದಿಂದ ಉಂಟಾಗುವ ಅಭದ್ರತೆ ಹಾಗೂ ಅಸಹಾಯಕತೆಯಿಂದಾಗಿಯೇ ಹೆಚ್ಚು ಧರ್ಮಾವಲಂಬಿಗಳಾಗುವ ಹಾಗೂ ಅದರಿಂದಾಗಿಯೇ ಧರ್ಮನಿಂದನೆಯಾದರೆ ಘಾಸಿಗೊಂಡು ಆಕ್ರೋಶಕ್ಕೆ ಒಳಗಾಗುವ ಜನರಿಂದ ನಷ್ಟ ವಸೂಲಿ ಮಾಡುವುದು ತಪ್ಪಲ್ಲವೇ? ಮೇಲಾಗಿ , ಭಾರತದ ದಂಡ ಸಂಹಿತೆಯ ಪ್ರಕಾರ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ನೀಡಬೇಕು.

ಈ ಬಡಜನರ ಆಸ್ತಿಪಾಸ್ತಿಗಳಾಗಿರುವ ಗುಡಿಸಲನ್ನೋ, ತಳ್ಳುವ ಗಾಡಿಗಳನ್ನೋ, ಆಟೊಗಳನ್ನೋ ಮುಟ್ಟುಗೋಲು ಮಾಡಿಕೊಂಡರೆ, ಯಾವುದೇ ಅಪಾರಾಧಗಳಲ್ಲಿ ಭಾಗವಹಿಸದ ಆರೋಪಿಯ ಕುಟುಂಬಕ್ಕೂ ಶಿಕ್ಷೆ ವಿಧಿಸಿದಂತಾಗುವುದಿಲ್ಲವೇ?ಇದರಿಂದ ನಿರಪರಾಧಿಗಳಿಗೆ ಶಿಕ್ಷೆ ಕೊಟ್ಟಂತಾಗುವುದಿಲ್ಲವೇ? ಇದು ಭಾರತದ ನ್ಯಾಯ ಸಂಹಿತೆಗೆ ತದ್ವಿರುದ್ಧವಲ್ಲವೇ? ಆಸ್ತಿ ಮುಟ್ಟುಗೋಲು ಒಂದು ನೆಪ ಮಾತ್ರ. ಮುಂದಿನ ದಿನಗಳಲ್ಲಿ ಜನರು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಲು ಬೀದಿಗಿಳಿದರೆ, ಸರಕಾರ ತನ್ನ ಶಕ್ತಿಯನ್ನು ಬಳಸಿ ಸಮಾಜಕ್ಕೆ ಬೆಂಕಿ ಹಚ್ಚಿ ಅದನ್ನು ಜನಸಾಮಾನ್ಯರಿಂದ ವಸೂಲಿ ಮಾಡುವ ತಂತ್ರವಾಗಿದೆ. ಈ ಮೂಲಕ ಪ್ರಭುತ್ವದ ಯಾವುದೇ ಅತಿರೇಕಗಳನ್ನು ಜನರು ಪ್ರಶ್ನಿಸದಂತೆ ಮಾಡುವುದು ಸರಕಾರದ ಉದ್ದೇಶ. ಇದರ ಜೊತೆಗೆ, ಈ ದೇಶದ ದುರ್ಬಲ ವರ್ಗ, ಕಾರ್ಮಿಕ ವರ್ಗ, ಅಲ್ಪಸಂಖ್ಯಾತ ವರ್ಗಗಳನ್ನು ಇನ್ನಷ್ಟು ದಮನಿಸುವ ದುರುದ್ದೇಶವಿದೆ. ಭವಿಷ್ಯದಲ್ಲಿ ಇನ್ನಷ್ಟು ಜನವಿರೋಧಿ, ಅಲ್ಪಸಂಖ್ಯಾತ, ದಲಿತ ವಿರೋಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಕ್ಕಾಗಿ ಸರಕಾರ ಮಾಡಿಕೊಳ್ಳುತ್ತಿರುವ ಸಿದ್ಧತೆಗಳಲ್ಲಿ ಇದೂ ಒಂದು ಎಂದು ನಾವು ಭಾವಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News