ಬಿಜೆಪಿಯೊಂದಿಗೆ ಶಾಮೀಲಾಗಿರುವುದು ಸಾಬೀತಾದರೆ ರಾಜೀನಾಮೆ: ಗುಲಾಂ ನಬಿ ಆಝಾದ್

Update: 2020-08-24 08:05 GMT

  ಹೊಸದಿಲ್ಲಿ,ಆ.24:"ನಾನು ಬಿಜೆಪಿಗೆ ನೆರವಾಗಲು ಹಾಗೂ ಆ ಪಕ್ಷದ ಆಜ್ಞೆಯ ಮೇರೆಗೆ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿದ್ದೇನೆ ಎಂದು ಸಾಬೀತಾದರೆ ತಕ್ಷಣವೇ ರಾಜೀನಾಮೆ ನೀಡುವೆ'' ಎಂದು ಪತ್ರಕ್ಕೆ ಸಹಿ ಹಾಕಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಕಾಂಗ್ರೆಸ್‌ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ನೀವು ಈಗ ಹೇಳುತ್ತಿರುವುದು ನೀವು ಪತ್ರದಲ್ಲಿ ಬರೆದಿರುವುದಕ್ಕೆ ವಿರುದ್ಧವಾಗಿದೆ''ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಆಝಾದ್ ಹೇಳಿಕೆಗೆ ತಿರುಗೇಟು ನೀಡಿದರು.

 ಕಾಂಗ್ರೆಸ್ ನಾಯಕತ್ವದ ಕುರಿತು ಪತ್ರ ಬರೆದಿರುವ ಪಕ್ಷದ ಹಿರಿಯ ನಾಯಕರ ವಿರುದ್ಧ ಸಭೆಯ ಆರಂಭದಲ್ಲೇ ಆಕ್ರೋಶ ಹೊರಹಾಕಿದ್ದ ರಾಹುಲ್ ಗಾಂಧಿ, ಪತ್ರ ಬರೆದ ಸಮಯ ಸರಿಯಿರಲಿಲ್ಲ ಎಂದರಲ್ಲದೆ, ಇವರೆಲ್ಲರೂ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವುದಾಗಿ ಆರೋಪಿಸಿದರು.

ತನ್ನನ್ನು ಅಧ್ಯಕ್ಷೆ ಸ್ಥಾನದಿಂದ ಮುಕ್ತಿಗೊಳಿಸಿ ಬದಲಿ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆ ನಡೆಸಬೇಕೆಂದು ಸೋನಿಯಾ ಗಾಂಧಿ ಸಭೆ ಆರಂಭವಾದ ತಕ್ಷಣವೇ ವಿನಂತಿಸಿಕೊಂಡರು.

ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳು ಆಗಸ್ಟ್ 7ರಂದು ಕಾಂಗ್ರೆಸ್ ನಾಯಕತ್ವ ಪ್ರಶ್ನಿಸಿ ಪತ್ರ ಬರೆದಿದ್ದರು. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಮಾಜಿ ಕೇಂದ್ರ ಸಚಿವ ಎಕೆ ಆ್ಯಂಟನಿ ಪತ್ರ ಬರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News