×
Ad

ವಿಮಾನ ನಿಲ್ದಾಣ ಅದಾನಿ ಸಂಸ್ಥೆಗೆ ವಹಿಸುವ ನಿರ್ಧಾರ ಖಂಡಿಸಿ ಕೇರಳ ವಿಧಾನಸಭೆಯಿಂದ ಸರ್ವಾನುಮತದ ನಿರ್ಣಯ

Update: 2020-08-24 14:19 IST

ತಿರುವನಂತಪುರಂ: ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಎಂಟರ್‍ ಪ್ರೈಸಸ್‍ ಗೆ ಲೀಸ್ ಗೆ ನೀಡುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.

ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿದರಲ್ಲದೆ ರಾಜ್ಯ ಸರಕಾರಕ್ಕೆ ಕೂಡ ಹಕ್ಕು ಇರುವ ವಿಶೇಷ ಉದ್ದೇಶ ವಾಹಕಕ್ಕೆ ವಿಮಾನ ನಿಲ್ದಾಣದ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು  ಹಸ್ತಾಂತರಿಸಬೇಕು ಎಂದು ಹೇಳಿದರು.

ವಿಮಾನ ನಿಲ್ದಾಣ ಲೀಸ್‍ ಗೆ ಪಡೆಯಲು ಅದಾನಿ ಸಂಸ್ಥೆ ಸೂಚಿಸಿದ ಮೊತ್ತದಷ್ಟೇ ಹಣವನ್ನು ನೀಡಲು ರಾಜ್ಯ ಸರಕಾರ ಒಪ್ಪಿದ್ದರೂ ಕೇಂದ್ರ ಸರಕಾರ ಈ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದು ಸಮರ್ಥನೀಯವಲ್ಲ ಎಂದು ವಿಜಯನ್ ಹೇಳಿದರು.

ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಬೆಂಬಲಿಸಿದರೂ ರಾಜ್ಯ ಸರಕಾರ ಈ ವಿಚಾರದಲ್ಲಿ ಇಬ್ಬಗೆಯ ನೀತಿ ಹೊಂದಿದೆ ಎಂದು ಆರೋಪಿಸಿದ್ದಾರೆ. “ರಾಜ್ಯ ಸರಕಾರ ಬಹಿರಂಗವಾಗಿ ಅದಾನಿ ಸಂಸ್ಥೆಯನ್ನು ಖಂಡಿಸುತ್ತಿದ್ದರೂ, ಆ ಸಂಸ್ಥೆಗೆ ನಿಕಟವಾಗಿರುವ ಕಾನೂನು ಸಂಸ್ಥೆಯನ್ನು ಸಂಪರ್ಕಿಸಿ ಅದಾನಿ ಎಂಟರ್‍ ಪ್ರೈಸಸ್‍ ಗೆ ಗೌಪ್ಯವಾಗಿ ಸಹಾಯ ಮಾಡಿದೆ, ಇದು ಕ್ರಿಮಿನಲ್ ಷಡ್ಯಂತ್ರ'' ಎಂದು ಚೆನ್ನಿತ್ತಲ ಆರೋಪಿಸಿದ್ದಾರೆ. ಕೊಚ್ಚಿನ್ ಇಂಟರ್‍ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಅನ್ನು ಸಲಹೆಗಾರನಾಗಿ ರಾಜ್ಯ ಸರಕಾರ ಏಕೆ ನೇಮಿಸಿಲ್ಲ ಎಂದೂ ಚೆನ್ನಿತ್ತಲ ಪ್ರಶ್ನಿಸಿದ್ದಾರೆ.

ವಿಮಾನ ನಿಲ್ದಾಣ ವಿಚಾರದಲ್ಲಿ ಸರಕಾರದ ನಿಲುವು `ತೆರೆದ ಪುಸ್ತಕ'ದಂತಿದೆ ಎಂದು ಆರೋಪಗಳಿಗೆ ಪ್ರತಿಕ್ರಿಯಿಸಿ ಸೀಎಂ ಪಿಣರಾಯಿ ವಿಜಯನ್ ಹೇಳಿದರು. ಕಾನೂನು ಸಂಸ್ಥೆ ಕೆಲವೊಂದು ಕಾನೂನಾತ್ಮಕ ಪ್ರಕ್ರಿಯೆ ಕುರಿತು ಪರಿಶೀಲಿಸಿತ್ತು, ರಾಜ್ಯ ಸರಕಾರ ಸೂಚಿಸಿದ ಮೊತ್ತದ ವಿಚಾರದಲ್ಲಿ ಅದರ ಪಾತ್ರವಿಲ್ಲ ಎಂದೂ ಅವರು ಹೇಳಿದರು.

ನಂತರ ಈ ವಿಚಾರದಲ್ಲಿ ಸ್ವಲ್ಪ ಚರ್ಚೆಯ ನಂತರ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News