×
Ad

ಕ್ಷಮೆಯಾಚಿಸುವುದು ನನ್ನ ಆತ್ಮಸಾಕ್ಷಿಯ ನಿಂದನೆಗೆ ಸಮ ಎಂದು ಹೇಳಿದ ಪ್ರಶಾಂತ್ ಭೂಷಣ್

Update: 2020-08-24 14:36 IST

 ಹೊಸದಿಲ್ಲಿ,ಆ.24: ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ಸರ್ವೋಚ್ಚ ನ್ಯಾಯಾಲಯದ ಕುರಿತು ತನ್ನ ಎರಡು ಟ್ವೀಟ್‌ಗಳಿಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಲ್ಪಟ್ಟಿರುವ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ್ ಅವರು ತನ್ನ ಟ್ವೀಟ್‌ಗಳನ್ನು ಹಿಂದೆಗೆದುಕೊಳ್ಳಲು ಅಥವಾ ಬೇಷರತ್ ಕ್ಷಮೆ ಯಾಚಿಸಲು ಸೋಮವಾರ ನಿರಾಕರಿಸಿದ್ದಾರೆ. ಈ ಟ್ವೀಟ್‌ಗಳು ತನ್ನ ಪ್ರಾಮಾಣಿಕ ನಂಬಿಕೆಯನ್ನು ಪ್ರತಿನಿಧಿಸುತ್ತವೆ ಮತ್ತು ಅವುಗಳನ್ನು ಹಿಂದೆಗೆದುಕೊಳ್ಳುವುದು ಅಪ್ರಾಮಾಣಿಕ ಕ್ಷಮೆಯಾಚನೆಯಾಗುತ್ತದೆ ಎಂದು ಭೂಷಣ್ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೇಷರತ್ ಕ್ಷಮೆಯಾಚಿಸಲು ನ್ಯಾಯಾಲಯವು ಭೂಷಣ್ ಅವರಿಗೆ ಸೋಮವಾರದವರೆಗೆ ಮೂರು ದಿನಗಳ ಗಡುವು ನೀಡಿತ್ತು.

 “ಕ್ಷಮೆಯಾಚನೆಯನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ನಾನು ನಿಜವೆಂದು ನಂಬಿರುವ ಹೇಳಿಕೆಯನ್ನು ನಾನು ಹಿಂದೆಗೆದುಕೊಂಡರೆ ಅಥವಾ ನನ್ನ ದೃಷ್ಟಿಯಲ್ಲಿ ಅಪ್ರಾಮಾಣಿಕವಾದ ಕ್ಷಮೆಯಾಚನೆಯನ್ನು ಸಲ್ಲಿಸಿದರೆ ಅದು ನನ್ನ ಆತ್ಮಸಾಕ್ಷಿಯ ಮತ್ತು ನಾನು ಅತ್ಯಂತ ಗೌರವವನ್ನು ಹೊಂದಿರುವ ಸಂಸ್ಥೆ (ಸರ್ವೋಚ್ಚ ನ್ಯಾಯಾಲಯ)ಯ ನಿಂದನೆಯಾಗುತ್ತದೆ” ಎಂದು ತಿಳಿಸಿರುವ ಭೂಷಣ್, “ನನ್ನ ಯಾವುದೇ ತಪ್ಪಿಗೆ ಕ್ಷಮೆ ಯಾಚಿಸುವುದನ್ನು ಪ್ರತಿಷ್ಠೆಯ ವಿಷಯ ಎಂದು ನಾನೆಂದೂ ಪರಿಗಣಿಸಿಲ್ಲ. ಈ ಸಂಸ್ಥೆಗೆ ಸೇವೆ ಸಲ್ಲಿಸಿರುವುದು ಮತ್ತು ಹಲವಾರು ಮಹತ್ವದ ಸಾರ್ವಜನಿಕ ಹಿತಾಸಕ್ತಿ ಹೋರಾಟಗಳನ್ನು ಅದರ ಮುಂದೆ ಮಂಡಿಸಿರುವುದು ನನಗೆ ಸಂದ ಗೌರವವಾಗಿದೆ. ಈ ಸಂಸ್ಥೆಗೆ ನಾನು ನೀಡಿರುವುದಕ್ಕಿಂತ ಹೆಚ್ಚಿನದನ್ನು ನಾನು ಅದರಿಂದ ಪಡೆದಿದ್ದೇನೆ. ಸರ್ವೋಚ್ಚ ನ್ಯಾಯಾಲಯದ ಬಗ್ಗೆ ನನಗೆ ಅತ್ಯಂತ ಗೌರವವಿದೆ” ಎಂದು ಹೇಳಿದ್ದಾರೆ.

“ಸರ್ವೋಚ್ಚ ನ್ಯಾಯಾಲಯವು ಮೂಲಭೂತ ಹಕ್ಕುಗಳು,ಕಾವಲು ಸಂಸ್ಥೆಗಳು ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆಶಯದ ಕೊನೆಯ ಭದ್ರಕೋಟೆಯಾಗಿದೆ ಎಂದು ನಾನು ನಂಬಿದ್ದೇನೆ. ಪ್ರಜಾಸತ್ತಾತ್ಮಕ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ನ್ಯಾಯಾಲಯ ಎಂದು ಅದನ್ನು ಬಣ್ಣಿಸಿರುವುದು ಸರಿಯಾಗಿಯೇ ಇದೆ ಮತ್ತು ಅದು ಜಗತ್ತಿನಾದ್ಯಂತ ನ್ಯಾಯಾಲಯಗಳಿಗೆ ಅನುಕರಣೀಯವಾಗಿದೆ. ಇಂದಿನ ಈ ಸಂಕಷ್ಟದ ದಿನಗಳಲ್ಲಿ ಭಾರತದ ಜನತೆಯು ಈ ನ್ಯಾಯಾಲಯದ ಬಗ್ಗೆ ಅಪಾರ ಭರವಸೆಗಳನ್ನಿಟ್ಟುಕೊಂಡಿದೆ” ಎಂದು ಹೇಳಿಕೆಯಲ್ಲಿ ತಿಳಿಸಿರುವ ಭೂಷಣ್ , “ನ್ಯಾಯಾಲಯ ಕುರಿತು ನನ್ನ ಹೇಳಿಕೆಯು ವಿಶ್ವಾಸಾರ್ಹವಾಗಿದೆ,ಆದ್ದರಿಂದ ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಸರ್ವೋಚ್ಚ ನ್ಯಾಯಾಲಯವು ತನ್ನ ಕಳಂಕರಹಿತ ಚರಿತ್ರೆಯಿಂದ ದೂರ ಸರಿಯುತ್ತಿದೆ ಎಂದು ನನಗೆ ಅನ್ನಿಸಿದಾಗ ಆ ಬಗ್ಗೆ ಧ್ವನಿಯೆತ್ತುವುದು ಈ ನ್ಯಾಯಾಲಯದ ಅಧಿಕಾರಿಯಾಗಿ ನನ್ನ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News