ರಾಜಸ್ಥಾನ: ಬಿಎಸ್ಪಿ ಶಾಸಕರ ವಿಲೀನಕ್ಕೆ ತಡೆ ನೀಡುವಂತೆ ಸಲ್ಲಿಸಿದ ಮನವಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

Update: 2020-08-24 14:11 GMT

ಹೊಸದಿಲ್ಲಿ, ಆ. 24: ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಬಿಎಸ್ಪಿಯ 6 ಶಾಸಕರಿಗೆ ಅವಕಾಶ ನೀಡಿದ ರಾಜಸ್ಥಾನ ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡುವಂತೆ ಕೋರಿ ಬಿಜೆಪಿ ಶಾಸಕರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿ ಹಾಕಿದೆ.

ಬಿಜೆಪಿ ಶಾಸಕ ಮದನ್ ದಿಲ್ವಾರ್ ಸಲ್ಲಿಸಿದ ಮನವಿಯ ಕುರಿತು ರಾಜಸ್ಥಾನ ಉಚ್ಚ ನ್ಯಾಯಾಲಯ ಈ ಹಿಂದೆ ಆದೇಶ ನೀಡಿದೆ ಎಂದು ಸ್ಪೀಕರ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ವಿನೀತ್ ಸರಣ್ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ಪೀಠಕ್ಕೆ ಮಾಹಿತಿ ನೀಡಿದರು. ಆಡಳಿತಾರೂಢ ಕಾಂಗ್ರೆಸ್‌ನೊಂದಿಗೆ ಬಿಎಸ್ಪಿಯ 6 ಶಾಸಕರು ವಿಲೀನಗೊಳ್ಳುವ ವಿರುದ್ಧ ಸಲ್ಲಿಸಲಾದ ಮನವಿಯನ್ನು ಸ್ಪೀಕರ್ ಅವರು ಅರ್ಹತೆ ಆಧಾರದಲ್ಲಿ ನಿರ್ಧರಿಸುವಂತೆ ಉಚ್ಚ ನ್ಯಾಯಾಲಯ ಸೂಚಿಸಿತ್ತು ಎಂದು ಅವರು ತಿಳಿಸಿದರು.

ಅಲ್ಲದೆ, ಮೂರು ತಿಂಗಳ ಒಳಗೆ ಈ ವಿಷಯದ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಉಚ್ಚ ನ್ಯಾಯಾಲಯ ಸ್ಪೀಕರ್ ಅವರಿಗೆ ನಿರ್ದೇಶನ ನೀಡಿತ್ತು ಎಂದು ಸಿಬಲ್ ಹೇಳಿದರು. ತನ್ನ ಮುಂದಿರುವ ಈ ಮನವಿ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶಕ್ಕೆ ವಿರುದ್ಧವಾಗಿದೆ. ಅಲ್ಲದೆ, ಈ ಮನವಿ ಫಲಪ್ರದವಲ್ಲ ಎಂದು ಸುಪ್ರೀಂ ಕೋರ್ಟ್‌ನ ಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News