ಆ್ಯಂಟಿಬಯಾಟಿಕ್‌ಗಳು ಸುರಕ್ಷಿತವೆಂದು ಭಾವಿಸಿದ್ದೀರಾ?: ಇಲ್ಲ,ಅವು ಈ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ

Update: 2020-08-24 14:28 GMT

ಆ್ಯಂಟಿಬಯಾಟಿಕ್‌ಗಳು ಸಮಸ್ಯೆಗಳನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ,ನಿಜ. ಆದರೆ ಇದು ನಾಣ್ಯದ ಒಂದು ಮುಖ ಮಾತ್ರವಾಗಿದೆ. ಹೆಚ್ಚಿನ ಜನರಿಗೆ ಆ್ಯಂಟಿಬಯಾಟಿಕ್‌ಗಳ ಪ್ರತಿಕೂಲ ಪರಿಣಾಮಗಳಿರುವ ನಾಣ್ಯದ ಇನ್ನೊಂದು ಮುಖದ ಬಗ್ಗೆ ಗೊತ್ತಿಲ್ಲ. ಹೌದು,ಈ ಉಪಯೋಗಿ ಮಾತ್ರೆಗಳು ಹಾನಿಕಾರಕವೂ ಆಗಬಲ್ಲವು. ಅವು ಕರುಳಿನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುವ ಮೂಲಕ ತೊಂದರೆಗಳನ್ನು ಸೃಷ್ಟಿಸುತ್ತವೆ. ಹೀಗಾಗಿ ಆ್ಯಂಟಿಬಯಾಟಿಕ್ ಮಾತ್ರೆಯನ್ನು ನುಂಗುವ ಮುನ್ನ ಈ ಲೇಖನವನ್ನೊಮ್ಮೆ ಓದಿ....

 ಯಾವುದೇ ಆದರೂ ಒಂದು ಮಿತಿಯಲ್ಲಿದ್ದರೆ ಸುರಕ್ಷಿತವಾಗಿರುತ್ತದೆ. ವೈದ್ಯರು ಶಿಫಾರಸು ಮಾಡಿದಾಗ ಮಾತ್ರ ಆ್ಯಂಟಿಬಯಾಟಿಕ್‌ಗಳು ಒಳ್ಳೆಯವು. ಈ ಮಾತ್ರೆಗಳನ್ನು ನೆಚ್ಚಿಕೊಳ್ಳುವುದರ ಬದಲು ಪೌಷ್ಟಿಕ ಆಹಾರ ಸೇವನೆಯ ಮೂಲಕ ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿಕೊಳ್ಳುವುದು ಒಳ್ಳೆಯದು. ನಮ್ಮ ನಿರೋಧಕ ಶಕ್ತಿಯು ಸದೃಢವಾಗಿದ್ದರೆ ನಾವು ಆಗಾಗ್ಗೆ ಅನಾರೋಗ್ಯಕ್ಕೆ ಗುರಿಯಾಗುವುದಿಲ್ಲ ಮತ್ತು ಔಷಧಿಗಳೂ ಅಗತ್ಯವಾಗುವುದಿಲ್ಲ. ಆ್ಯಂಟಿಬಯಾಟಿಕ್‌ಗಳು ನಿರೋಧಕ ಶಕ್ತಿಗೆ ಮಾತ್ರವಲ್ಲ,ಮೂತ್ರಪಿಂಡಗಳಿಗೂ ಹಾನಿಯನ್ನುಂಟು ಮಾಡುತ್ತವೆ. ಹೌದು,ಅತಿಯಾಗಿ ಆ್ಯಂಟಿಬಯಾಟಿಕ್‌ಗಳ ಸೇವನೆಯು ಆರೋಗ್ಯಕ್ಕೆ ಮಾರಕವಾಗುತ್ತದೆ.

‘ದಿ ಲ್ಯಾನ್ಸೆಟ್ ಗ್ಯಾಸ್ಟ್ರೊಎಂಟರಾಲಜಿ ಆ್ಯಂಡ್ ಹೆಪಾಟಾಲಜಿ ’ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಂತೆ ಆ್ಯಂಟಿಬಯಾಟಿಕ್‌ಗಳನ್ನೊಳಗೊಂಡ ಆ್ಯಂಟಿಮೈಕ್ರೋಬಿಯಲ್ ಚಿಕಿತ್ಸೆಗೂ ಇರ್ರಿಟೇಬಲ್ ಬೊವೆಲ್ ಡಿಸೀಸ್ (ಐಬಿಡಿ) ಅಥವಾ ಜೀರ್ಣಾಂಗ ಕ್ರಿಯೆಯಲ್ಲಿ ಅಸಮತೋಲನ ಅಥವಾ ಅಸಹಜ ಕರುಳಿನ ಕ್ರಿಯೆಯಿಂದ ಉಂಟಾಗುವ ಸಮಸ್ಯೆಗೂ ಬಲವಾದ ನಂಟು ಇದೆ. ಅಮೆರಿಕದ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮತ್ತು ಸ್ವೀಡನ್‌ನ ಕ್ಯಾರೊಲಿಂಸ್ಕಾ ವಿವಿಯ ಸಂಶೋಧಕರು ಆ್ಯಂಟಿಬಯಾಟಿಕ್‌ಗಳು ಕರುಳಿನ ಮೇಲೆ ಬೀರುವ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳಲು ಈ ಅಧ್ಯಯನವನ್ನು ಕೈಗೊಂಡಿದ್ದರು.

ಅತಿಯಾಗಿ ಆ್ಯಂಟಿಬಯಾಟಿಕ್‌ಗಳ ಸೇವನೆಯು ಕರುಳಿನ ಚಲನವಲನಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ ಮತ್ತು ಐಬಿಡಿ,ಕ್ರೋನ್ಸ್ ಡಿಸೀಸ್ ಹಾಗೂ ಅಲ್ಸರೇಟಿವ್ ಕೊಲೈಟಿಸ್‌ಗಳಿಗೆ ಕಾರಣವಾಗಬಲ್ಲದು ಎನ್ನುವುದು ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಆ್ಯಂಟಿಬಯಾಟಿಕ್‌ಗಳು ಕರುಳಿನಲ್ಲಿಯ ಸೂಕ್ಷ್ಮಜೀವಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಮತ್ತು ಐಬಿಡಿಯ ಅಪಾಯವನ್ನುಂಟು ಮಾಡುತ್ತವೆ ಎಂಬ ಶಂಕೆಯನ್ನು ಈ ಅಧ್ಯಯನವು ದೃಢಪಡಿಸಿದೆ. ಆದರೆ ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ಅಗತ್ಯವಾಗಿವೆ ಎಂದು ವರದಿಯ ಮುಖ್ಯಲೇಖಕ ಡಾ.ಲಾಂಗ್ ಗುಯೆನ್ ಹೇಳಿದ್ದಾರೆ.

ಆ್ಯಂಟಿ ಬಯಾಟಿಕ್‌ಗಳ ದುರುಪಯೋಗವನ್ನು ನಿಲ್ಲಿಸುವುದು ಮುಖ್ಯವಾಗಿದೆ. ನಿಜಕ್ಕೂ ಅಗತ್ಯವಿದ್ದರೆ ಮಾತ್ರ ಈ ಮಾತ್ರೆಯನ್ನು ತೆಗೆದುಕೊಳ್ಳಿ. ಮಾತ್ರೆಯನ್ನು ತೆಗೆದುಕೊಂಡರೂ ಅದು ಕರುಳಿನ ಮೇಲೆ ದುಷ್ಪರಿಣಾಮ ಬೀರದಂತೆ ಡೋಸೇಜ್ ಮೇಲೆ ನಿಯಂತ್ರಣವಿರಲಿ.

                                                                                                                     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News