×
Ad

ರಶ್ಯ ಪ್ರತಿಪಕ್ಷ ನಾಯಕನಿಗೆ ವಿಷಪ್ರಾಶನ ಆಗಿರುವುದು ಪರೀಕ್ಷೆಗಳಿಂದ ಸಾಬೀತು: ಜರ್ಮನಿ ಆಸ್ಪತ್ರೆ

Update: 2020-08-25 22:15 IST

ಬರ್ಲಿನ್ (ಜರ್ಮನಿ), ಆ. 25: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನವಾಗಿರುವುದು ಪರೀಕ್ಷೆಗಳಲ್ಲಿ ಸಾಬೀತಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಜರ್ಮನಿಯ ರಾಜಧಾನಿ ಬರ್ಲಿನ್‌ನ ಆಸ್ಪತ್ರೆ ಸೋಮವಾರ ಹೇಳಿದೆ. ಇದು ರಶ್ಯದ ವೈದ್ಯರ ಪರೀಕ್ಷಾ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿದೆ.

ಗುರುವಾರ ರಶ್ಯದ ಸೈಬೀರಿಯದಲ್ಲಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ 44 ವರ್ಷದ ನವಾಲ್ನಿಯನ್ನು ಆರಂಭದಲ್ಲಿ ಸೈಬೀರಿಯದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಬಳಿಕ ಅವರನ್ನು ಶನಿವಾರ ಮುಂಜಾನೆ ಆಸ್ಪತ್ರೆಯ ವೈದ್ಯರ ವಿರೋಧದ ನಡುವೆಯೇ ವಿಮಾನ ಆ್ಯಂಬುಲೆನ್ಸ್ ಮೂಲಕ ಬರ್ಲಿನ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು.

‘‘ಕೋಲಿನ್‌ಸ್ಟರೇಸ್ ಇನ್‌ಹಿಬಿಟರ್ಸ್ ಎಂಬ ಗುಂಪಿಗೆ ಸೇರಿದ ಪದಾರ್ಥದ ಮೂಲಕ ಅವರಿಗೆ ವಿಷಪ್ರಾಶನವಾಗಿರುವುದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ’’ ಎಂದು ಬರ್ಲಿನ್‌ನ ಖ್ಯಾತ ಆಸ್ಪತ್ರೆ ಚಾರಿಟಿ ಹಾಸ್ಪಿಟಲ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಕೋಲಿನ್‌ಸ್ಟರೇಸ್ ಎನ್ನುವುದು ಒಂದು ಕಿಣ್ವವಾಗಿದ್ದು, ಕೇಂದ್ರೀಯ ನರಮಂಡಲವು ಸುಗಮವಾಗಿ ಕಾರ್ಯನಿರ್ವಹಿಸಲು ಅದು ಅಗತ್ಯವಾಗಿದೆ. ಕೋಲಿನ್‌ಸ್ಟರೇಸ್ ಇನ್‌ಹಿಬಿಟರ್ಸ್ ಎನ್ನುವುದು ಈ ಕಿಣ್ವದ ಕಾರ್ಯವನ್ನು ತಡೆಯುವ ರಾಸಾಯನಿಕವಾಗಿದೆ.

‘‘ಅಲೆಕ್ಸೀ ನವಾಲ್ನಿಯ ಚೇತರಿಕೆಯ ಸಾಧ್ಯತೆ ಅಸ್ಪಷ್ಟವಾಗಿದೆ. ಅವರು ದೀರ್ಘಾವಧಿಯ ಪರಿಣಾಮಗಳು, ಮುಖ್ಯವಾಗಿ ನರಮಂಡಲವನ್ನು ಬಾಧಿಸುವ ಪರಿಣಾಮಗಳಿಂದ ಬಳಲುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ’’ ಎಂದು ಆಸ್ಪತ್ರೆ ತಿಳಿಸಿದೆ.

ಅಪಾಯವಿಲ್ಲದೆ ಪಾರಾಗುತ್ತಾರೆಯೇ ಎನ್ನುವುದು ಪ್ರಶ್ನೆ: ಎನ್‌ಜಿಒ

‘‘ನವಾಲ್ನಿ ಬದುಕುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ಇಲ್ಲಿರುವ ಮುಖ್ಯವಾದ ಪ್ರಶ್ನೆಯೆಂದರೆ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿ ತನ್ನ ಚಟುವಟಿಕೆಗಳನ್ನು ಮುಂದುವರಿಸಲು ಶಕ್ತರಾಗುತ್ತಾರೆಯೇ ಎನ್ನುವುದು’’ ಎಂಬುದಾಗಿ ನವಾಲ್ನಿಯನ್ನು ಜರ್ಮನಿಗೆ ಕರೆದೊಯ್ಯಲು ವಿಮಾನ ಆ್ಯಂಬುಲೆನ್ಸನ್ನು ಕಳುಹಿಸಿದ್ದ ಸರಕಾರೇತರ ಸಂಘಟನೆ (ಎನ್‌ಜಿಒ) ‘ಸಿನೇಮಾ ಫಾರ್ ಪೀಸ್’ನ ಮುಖ್ಯಸ್ಥ ಜಾಕ ಬಿಝಿಲ್ಝ್ ಜರ್ಮನಿಯ ‘ಬಿಲ್ಡ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿರಶ್ಯಕ್ಕೆ ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಒತ್ತಾಯ

ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನವಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ಇದಕ್ಕೆ ಕಾರಣರಾದವರನ್ನು ಗುರುತಿಸುವಂತೆ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಸೋಮವಾರ ರಶ್ಯಕ್ಕೆ ಕರೆ ನೀಡಿದ್ದಾರೆ.

ನವಾಲ್ನಿಯ ದೇಹದಲ್ಲಿ ವಿಷಯುಕ್ತ ಪದಾರ್ಥದ ತುಣುಕುಗಳು ಪತ್ತೆಯಾಗಿವೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಬರ್ಲಿನ್‌ನ ಆಸ್ಪತ್ರೆಯು ಪ್ರಕಟಿಸಿದ ಬಳಿಕ ಮರ್ಕೆಲ್ ಈ ಹೇಳಿಕೆ ನೀಡಿದ್ದಾರೆ.

‘‘ರಶ್ಯದ ರಾಜಕೀಯ ಪ್ರತಿಪಕ್ಷದಲ್ಲಿ ನವಾಲ್ನಿಯು ಮಹತ್ವದ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ, ಈ ಅಪರಾಧದ ಸಂಪೂರ್ಣ ವಿವರಗಳನ್ನು ಪತ್ತೆಹಚ್ಚಲು ತಕ್ಷಣ ತನಿಖೆ ನಡೆಸುವಂತೆ ನಾವು ರಶ್ಯದ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಹಾಗೂ ಈ ತನಿಖೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡುವಂತೆಯೂ ಕೋರುತ್ತೇವೆ’’ ಎಂದು ಜರ್ಮನಿಯ ವಿದೇಶ ಸಚಿವ ಹೈಕೊ ಮಾಸ್ ಜೊತೆಗೆ ನೀಡಿದ ಜಂಟಿ ಹೇಳಿಕೆಯಲ್ಲಿ ಮರ್ಕಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News