ಶ್ರೀಲಂಕಾ ‘ಭಾರತ ಮೊದಲು ’ನೀತಿಯನ್ನು ತಳೆಯಲಿದೆ: ವಿದೇಶಾಂಗ ಕಾರ್ಯದರ್ಶಿ ಕೊಲಂಬೇಜ್

Update: 2020-08-26 17:25 GMT

ಕೊಲಂಬೋ,ಆ.27: ದ್ವೀಪರಾಷ್ಟ್ರದಲ್ಲಿ ಚೀನಾದ ಹೆಚ್ಚುತ್ತಿರುವ ಉಪಸ್ಥಿತಿಯ ಕುರಿತು ಕಳವಳಗಳನ್ನು ನಿವಾರಿಸುವ ಪ್ರಯತ್ನವಾಗಿ ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಜಯನಾಥ ಕೊಲಂಬೇಜ್ ಅವರು ತನ್ನ ರಾಷ್ಟ್ರವು ನೂತನ ವಿದೇಶ ನೀತಿ ಪ್ರಣಾಳಿಕೆಯಾಗಿ ‘ಭಾರತ ಮೊದಲು ’ನಿಲುವನ್ನು ತಳೆಯಲಿದೆ ಮತ್ತು ಭಾರತದ ವ್ಯೂಹಾತ್ಮಕ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲಿದೆ ಎಂದು ಹೇಳಿದ್ದಾರೆ.

 ತನ್ನ ನೂತನ ಪ್ರಾದೇಶಿಕ ನೀತಿಗನುಗುಣವಾಗಿ ಶ್ರೀಲಂಕಾ ಭಾರತದ ವ್ಯೂಹಾತ್ಮಕ ಭದ್ರತಾ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಅಧ್ಯಕ್ಷ ರಾಜಪಕ್ಸ ಗೊಟಾಬಯ ಅವರು ‘ಭಾರತ ಮೊದಲು ’ನೀತಿಯನ್ನು ಅಳವಡಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವ ಕೊಲಂಬೇಜ್,ಶ್ರೀಲಂಕಾವು ಚೀನಾ ಮತ್ತು ಭಾರತ ಹೀಗೆ ಎರಡು ಬಲಾಢ್ಯ ಆರ್ಥಿಕ ಶಕ್ತಿಗಳ ನಡುವಿನಲ್ಲಿದೆ. ಅದು ಯಾವುದೇ ದೇಶದ, ವಿಶೇಷವಾಗಿ ಭಾರತದ ವಿರುದ್ಧ ಏನನ್ನೇ ಮಾಡಲು ತನ್ನ ನೆಲವನ್ನು ಬಳಸಿಕೊಳ್ಳಲು ಯಾವುದೇ ನಿರ್ದಿಷ್ಟ ರಾಷ್ಟ್ರಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ದ್ವೀಪರಾಷ್ಟ್ರದ ಹಂಬನತೋಟ ಬಂದರಿನಲ್ಲಿ ಚೀನಿ ಹೂಡಿಕೆಯನ್ನು ಪ್ರಸ್ತಾಪಿಸಿದ ಅವರು,ಶ್ರೀಲಂಕಾ ಈ ಯೋಜನೆಯನ್ನು ಮೊದಲು ಭಾರತದ ಮುಂದಿರಿಸಿತ್ತು. ಆದರೆ ಯಾವ ಕಾರಣಕ್ಕೋ ಭಾರತ ಮುಂದುವರಿಯಲಿಲ್ಲ.ಹೀಗಾಗಿ ಅದು ಚೀನಾ ಕಂಪನಿಯ ಪಾಲಾಗಿತ್ತು ಎಂದಿದ್ದಾರೆ. ಹಂಬನತೋಟ ಬಂದರು ವಾಣಿಜ್ಯ ಚಟುವಟಿಕೆಗಳಿಗೆ ಸೀಮಿತವಾಗಿರುತ್ತದೆ. ಅದು ಮಿಲಿಟರಿ ಉದ್ದೇಶಕ್ಕಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಂದರು ಕಾರ್ಮಿಕರ ಒಕ್ಕೂಟಗಳ ವಿರೋಧವಿದ್ದರೂ ಕೊಲಂಬೋ ಬಂದರಿನ ಪೂರ್ವ ಟರ್ಮಿನಲ್‌ನ ಅಭಿವೃದ್ಧಿಗಾಗಿ ಹಿಂದಿನ ಸಿರಿಸೇನ ಸರಕಾರವು ಭಾರತದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಗೌರವಿಸುವುದಾಗಿ ಗೊಟಾಬಯ ತಿಳಿಸಿದ್ದಾರೆ ಎಂದೂ ಕೊಲಂಬೇಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News