ಭಾರತೀಯ ಮೂಲದ ಗೂಢಚಾರಿಣಿ ನೂರ್ ಇನಾಯತ್ ಖಾನ್‌ಗೆ ಬ್ರಿಟನ್ ಗೌರವ

Update: 2020-08-28 04:36 GMT

ಲಂಡನ್: ಭಾರತೀಯ ಮೂಲದ ಬ್ರಿಟಿಷ್ ಗೂಢಚಾರಿಣಿ ನೂರ್ ಇನಾಯತ್ ಖಾನ್ ಬ್ರಿಟಿಷ್ ಸರ್ಕಾರದಿಂದ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಬ್ರಿಟಿಷ್ ಸ್ಮಾರಕಗಳನ್ನು ನಿರ್ವಹಿಸುವ ’ಇಂಗ್ಲಿಷ್ ಹೆರಿಟೇಜ್’ ಎಂಬ ದತ್ತಿ ಸಂಸ್ಥೆ, ಖಾನ್ ನಿವಾಸವನ್ನು ’ಬ್ಲೂ ಪ್ಲೇಕ್’ ವರ್ಗಕ್ಕೆ ಸೇರಿಸಿದೆ.

1943ರಲ್ಲಿ ನಾಝಿ ಆಕ್ರಮಿತ ಫ್ರಾನ್ಸ್‌ನಲ್ಲಿ ಭೂಗತ ರೇಡಿಯೊ ಆಪರೇಟರ್ ಆಗಿ ನೂರ್ ಇನಾಯತ್ ಖಾನ್ ಕಾರ್ಯ ನಿರ್ವಹಿಸಿದ್ದರು. ಬಳಿಕ 30ನೇ ವಯಸ್ಸಿನಲ್ಲೇ ಡಚ್ ಕಾನ್ಸನ್‌ಟ್ರೇಷನ್ ಕ್ಯಾಂಪ್‌ನಲ್ಲಿ 1944ರಲ್ಲಿ ಅವರನ್ನು ಸೆರೆ ಹಿಡಿದು ಹತ್ಯೆ ಮಾಡಲಾಗಿತ್ತು. ಅವರು ವಾಸವಿದ್ದ ಬ್ಲೂಮ್ಸ್‌ಬರಿ ಮನೆ (4, ಟವಿಟಾನ್ ಸ್ಟ್ರೀಟ್)ಯನ್ನು ಇಂಗ್ಲಿಷ್ ಹೆರಿಟೇಜ್ ಸಂಸ್ಥೆ ಬ್ಲೂ ಪ್ಲೇಕ್ ಎಂದು ಘೋಷಿಸಿದೆ. ಇಂಗ್ಲಿಷ್ ಹೆರಿಟೇಜ್ ದೇಶಾದ್ಯಂತ 400ಕ್ಕೂ ಅಧಿಕ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುತ್ತಿದೆ.

1866ರಲ್ಲಿ ಆರಂಭವಾದ ಬ್ಲೂ ಪ್ಲೇಕ್ ಯೋಜನೆ, ಇತಿಹಾಸದ ಗಣ್ಯ ವ್ಯಕ್ತಿಗಳು ಮತ್ತು ಅವರು ವಾಸಿಸಿದ, ಕಾರ್ಯ ನಿರ್ವಹಿಸಿದ ಕಟ್ಟಡಗಳ ನಡುವಿನ ಸಂಬಂಧವನ್ನು ಸಂಭ್ರಮಿಸುವ ವಿಶಿಷ್ಟ ಯೋಜನೆಯಾಗಿದೆ. ಖಾನ್ ಅವರಿಗೆ ಮರಣೋತ್ತರವಾಗಿ ಜಾರ್ಜ್ ಕ್ರಾಸ್ ಪ್ರಶಸ್ತಿ ಮತ್ತು ಫ್ರೆಂಚ್ ಕ್ರೋಯಿಕ್ಸ್ ಡೆಗ್ಯುರ್ರೆ ಪ್ರಶಸ್ತಿಯನ್ನು ನೀಡಲಾಗಿತ್ತು. 2012ರಲ್ಲಿ ರಾಜಕುಮಾರಿ ಆ್ಯನ್ ಅವರು ಗೋರ್ಡನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನೂರ್ ಪುತ್ಥಳಿ ಅನಾವರಣಗೊಳಿಸಿದ್ದರು.

ಸೂಫಿ ಶಿಕ್ಷಕ ಹಾಗೂ ಅಮೆರಿಕನ್ ತಾಯಿಯ ಪುತ್ರಿಯಾಗಿ 1914ರಲ್ಲಿ ಜನಿಸಿದ ಖಾನ್, ಲಂಡನ್ ಹಾಗೂ ಪ್ಯಾರೀಸ್‌ನಲ್ಲಿ ಶಿಕ್ಷಣ ಪಡೆದಿದ್ದರು. ಎರಡನೇ ಮಹಾಯುದ್ಧದ ಅವಧಿಯಲ್ಲಿ 1943ರಲ್ಲಿ ವಿಶೇಷ ಕಾರ್ಯಾಚರಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರನ್ನು ಎರಡನೇ ಮಹಾಯುದ್ಧದ ಸೈಲೆಂಟ್ ಹೀರೊ ಎಂದು ಬಣ್ಣಿಸಲಾಗಿತ್ತು.

ಖಾನ್ ಅವರ ಜೀವನಚರಿತ್ರೆ ಬರೆದ ಲೇಖಕ, ಪತ್ರಕರ್ತ ಶರಬಾನಿ ಬಸು ಶುಕ್ರವಾರ ಬ್ಲೂಪ್ಲೇಕ್ ಅನಾವರಣಗೊಳಿಸುವರು. ಬ್ರಿಟನ್ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಫೇಸ್‌ಬುಕ್‌ನಲ್ಲಿ ಇದರ ವೆಬ್‌ಕಾಸ್ಟ್ ಇರುತ್ತದೆ ಎಂದು ಇಂಗ್ಲಿಷ್ ಹೆರಿಟೇಜ್ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News