ಜಪಾನ್‌ನಲ್ಲಿ ಮಾನವ ಸಹಿತ ಹಾರುವ ಕಾರಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

Update: 2020-08-28 16:28 GMT
Photo: techxplore.com

ಟೋಕಿಯೊ,ಆ.25: ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಲು ಆಗಸದಲ್ಲೇ ನಿಶ್ಚಿಂತೆಯಿಂದ ಕಾರಿನಲ್ಲಿ ಪ್ರಯಾಣಿಸುವ ಮಾನವಕುಲದ ದಶಕಗಳ ಕಾಲದ ಕನಸು ಸದ್ಯದಲ್ಲೇ ನನಸಾಗಲಿದೆ.

   ಜಪಾನ್‌ನ ಸ್ಕೈಡ್ರೈವ್ ಇನ್‌ಕಾರ್ಪೊರೇಟೆಡ್ ಕಂಪೆನಿಯ ಇತ್ತೀಚೆಗೆ ಯಶಸ್ವಿಯಾಗಿ ಹಾರುವ ಕಾರಿನ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ಓರ್ವ ವ್ಯಕ್ತಿ ಪ್ರಯಾಣಿಸಿದ್ದನು.

ಶುಕ್ರವಾರ ಕಂಪೆನಿಯು ಹಾರಿನ ಕಾರಿನ ಯಶಸ್ವಿ ಪ್ರಾಯೋಗಿಕ ಪರೀಕ್ಷೆಯ ವಿಡಿಯೋವನ್ನು ಪ್ರಕಟಿಸಿದೆ. ನುಣುಪಾದ ಮೋಟಾರ್ ಸೈಕಲ್‌ನಂತೆ ಕಾಣುವ ಈ ಹಾರುವ ಕಾರು ಪ್ರೊಫೆಲ್ಲರ್‌ಗಳನ್ನು ಹೊಂದಿದೆ. ನೆಲದಿಂದ 1-2 ಮೀಟರ್ ಎತ್ತರಕ್ಕೆ ಈ ವಾಹನವು ಹಾರಾಟ ನಡೆಸಿದೆ. ಸುಮಾರು ನಾಲ್ಕು ನಿಮಿಷಗಳ ಅದು ವಿಶಾಲವಾದ ಬಲೆಯಿಂದ ಆವೃತವಾದ ಪ್ರದೇಶದ ಮೇಲೆ ಹಾರಾಡಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

 ಹಾರುವ ಕಾರಿನ ನೈಜ ಉತ್ಪಾದನೆಯನ್ನು 2023ರೊಳಗೆ ಆರಂಭಿಸುವ ಉದ್ದೇಶವನ್ನು ಈ ಯೋಜನೆಯ ನೇತೃತ್ವ ವಹಿಸಿರುವ ಸ್ಕೈಡೈವ್ ಕಂಪೆನಿಯ ಅಧಿಕಾರಿ ಟೊಮೊಹಿರೊ ಫುಕುಝಾವಾ ತಿಳಿಸಿದ್ದಾರೆ.

  ಜಗತ್ತಿನಲ್ಲಿ 100ಕ್ಕೂ ಅಧಿಕ ಹಾರುವ ಕಾರಿನ ಯೋಜನೆಗಳು ಚಾಲನೆಯಲ್ಲಿವೆಯಾದರೂ, ಅವುಗಳ ಪೈಕಿ ಕೈಬೆರಳೆಣಿಕೆಯಷ್ಟು ಮಾತ್ರವೇ ಮಾನವನ ಸಹಿತವಾಗಿ ಕಾರನ್ನು ನೆಲದಿಂದ ಮೇಲಕ್ಕೆ ಹಾರಾಡಿಸುವಲ್ಲಿ ಯಶಸ್ವಿಯಾಗಿವೆಯೆಂದು ಅವರು ಹೇಳಿದ್ದಾರೆ.

 ನೂತನ ಹಾರುವ ಕಾರು ಈವರೆಗೆ ಕೇವಲ 10 ನಿಮಿಷಗಳ ಕಾಲ ಮಾತ್ರವೇ ಹಾರಾಡುವಲ್ಲಿ ಸಫಲವಾಗಿದೆ. ಆದರೆ ಒಂದು ವೇಳೆ ಅದರ ಹಾರಾಟ ಸಾಮರ್ಥ್ಯವನ್ನು 30 ನಿಮಿಷಗಳವರೆಗೆ ವಿಸ್ತರಿಸಲು ಸಾಧ್ಯವಾದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಫುಕುಝಾವಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News