ಹಂತಕನನ್ನು ತನ್ನ ಜೈಲಿನಲ್ಲಿ ಇರಿಸುವ ಕೊಡುಗೆ ನೀಡಿ: ಆಸ್ಟ್ರೇಲಿಯ

Update: 2020-08-28 16:36 GMT

ಕ್ಯಾನ್‌ಬೆರ್ರಾ,ಆ.28: ನ್ಯೂಝಿಲ್ಯಾಂಡ್‌ನ ಎರಡು ಮಸೀದಿಗಳಲ್ಲಿ ಹತ್ಯಾಕಾಂಡ ನಡೆಸಿದ ಆಸ್ಟ್ರೇಲಿಯ ಮೂಲದ ಶ್ವೇತಜನಾಂಗೀಯ ಶ್ರೇಷ್ಠತಾವಾದಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಆತನ ತಾಯ್ನಾಡಿನಲ್ಲೇ ಅನುಭವಿಸುವುದಕ್ಕೆ ಅವಕಾಶ ನೀಡುವುದಕ್ಕೆ ತಾನು ಮುಕ್ತ ಮನಸ್ಸನ್ನು ಹೊಂದಿರುವುದಾಗಿ ಆಸ್ಟ್ರೇಲಿಯನ್ ಪ್ರಧಾನಿ ಸ್ಕಾಟ್ ಮಾರಿಸನ್ ಶುಕ್ರವಾರ ತಿಳಿಸಿದ್ದಾರೆ. ಆದಾಗ್ಯೂ ಈ ವಿಷಯದಲ್ಲಿ ಹತ್ಯಾಕಾಂಡದ ಸಂತ್ರಸ್ತ ಕುಟುಂಬಗಳ ನಿರ್ಣಯವೇ ಅಂತಿಮವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

   ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ 2019ರ ಮಾರ್ಚ್‌ನಲ್ಲಿ ಗುಂಡಿನ ದಾಳಿ ನಡೆಸಿದ ಬ್ರೆಂಟನ್ ಹ್ಯಾರಿಸನ್ ಟ್ಯಾರಾಂಟ್‌ಗೆ ನ್ಯೂಝಿಲ್ಯಾಂಡ್ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಗುರುವಾರ ಘೋಷಿಸಿತ್ತು ಮತ್ತು ಯಾವುದೇ ಸಂದರ್ಭದಲ್ಲಿ ಆತನಿಗೆ ಪೇರೋಲ್ ನೀಡಕೂಡದೆಂದು ಆದೇಶಿಸಿತ್ತು. ಪೇರೋಲ್ ನಿರಾಕರಿಸಲ್ಪಟ್ಟ ನ್ಯೂಝಿಲ್ಯಾಂಡ್‌ನ ಪ್ರಥಮ ವ್ಯಕ್ತಿ ಈತನಾಗಿದ್ದಾನೆ. ಬ್ರೆಂಟನ್‌ನ ಸುರಕ್ಷತೆಗಾಗಿಯೇ ನ್ಯೂಝಿಲ್ಯಾಂಡ್ ಸರಕಾರವು ಆತನನ್ನು ಇರಿಸಲಾಗಿರುವ ಕಾರಾಗೃಹದ ಭದ್ರತೆಯನ್ನು ಹೆಚ್ಚಿಸಿದೆ.

 ಆತನ ಜೈಲುವಾಸಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಆಸ್ಟ್ರೇಲಿಯ ಸರಕಾರ ವಹಿಸಿಕೊಳ್ಳಬೇಕೆಂದು ನ್ಯೂಝಿಲ್ಯಾಂಡ್‌ನ ಕೆಲವು ಗಣ್ಯರು ಹಾಗೂ ಚಿಂತಕರು ಆಗ್ರಹಿಸಿದ್ದರು. ಆದಾಗ್ಯೂ, ಬ್ರೆಂಟನ್ ಹ್ಯಾರಿಸನ್‌ನನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಆಸ್ಟ್ರೇಲಿಯ ಸರಕಾರಕ್ಕೆ ನ್ಯೂಜಿಲಾಂಡ್ ಈವರೆಗೆ ಯಾವುದೇ ಅಧಿಕೃತ ಮನವಿಯನ್ನು ಸಲ್ಲಿಸಿಲ್ಲವೆಂದು ತಿಳಿದುಬಂದಿದೆ. ಈ ಮಧ್ಯೆ ಆಸ್ಟ್ರೇಲಿಯದ ಉಪಪ್ರಧಾನಿ ವಿನ್‌ಸ್ಟನ್ ಪೀಟರ್ಸ್‌ ಕೂಡಾ ಟ್ಯಾರಾಂಟ್‌ನನ್ನು ಆಸ್ಟ್ರೇಲಿಯದ ಜೈಲಿನಲ್ಲಿರಿಸಬೇಕೆಂದು ಪ್ರತಿಪಾದಿಸಿದ್ದಾರೆ.

ಆದರೆ ಹತ್ಯಾಕಾಂಡ ನಡೆಸಿದ ಸಮಯದಲ್ಲಿ ಟ್ಯಾರಾಂಟ್ ನ್ಯೂಝಿಲ್ಯಾಂಡ್‌ನ ನಿವಾಸಿಯಾಗಿದ್ದನು. ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಅಪರಾಧಿಗಳ ತಾವು ಅಪರಾಧ ಎಸಗಿದ ಪ್ರದೇಶದಲ್ಲೇ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News