ಫೇಸ್ ಬುಕ್-ಬಿಜೆಪಿ ನಂಟು ಆರೋಪ: ಮಾರ್ಕ್ ಝುಕರ್ ಬರ್ಗ್ ಗೆ ಮತ್ತೆ ಪತ್ರ ಬರೆದ ಕಾಂಗ್ರೆಸ್

Update: 2020-08-29 12:49 GMT

ಹೊಸದಿಲ್ಲಿ : ಫೇಸ್ ಬುಕ್ ಸಂಸ್ಥೆಯು ಆಡಳಿತ ಬಿಜೆಪಿ ಪರ ನಿಲುವು ಹೊಂದಿದೆ ಎಂಬ ಆರೋಪಗಳ ಕುರಿತಂತೆ ಸಂಸ್ಥೆ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಮತ್ತೆ ಫೇಸ್ ಬುಕ್ ಸಿಇಒ ಮಾರ್ಕ್ ಝರ್ಕೆಬರ್ಗ್ ಅವರಿಗೆ ಪತ್ರ ಬರೆದಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಪಕ್ಷ ಫೇಸ್ ಬುಕ್ ಸಿಇಒಗೆ ಬರೆದ ಎರಡನೇ ಪತ್ರ ಇದಾಗಿದೆ.

ಫೇಸ್ ಬುಕ್ ಉದ್ಯೋಗಿಗಳು ಹಾಗೂ ಆಡಳಿತ ವ್ಯವಸ್ಥೆಯ ಜತೆಗಿದೆಯೆನ್ನಲಾದ ನಂಟಿನ ಕುರಿತಂತೆ ಜಂಟಿ ಸಂಸದೀಯ ಸಮಿತಿ ಮುಖಾಂತರ ತನಿಖೆ ನಡೆಸಬೇಕೆಂದೂ ಪಕ್ಷ ಆಗ್ರಹಿಸಿದೆ.

‘Time’ ಮ್ಯಾಗಝೀನ್ ಲೇಖನವೊಂದರಲ್ಲಿ ಫೇಸ್ ಬುಕ್ ಇಂಡಿಯಾ ಮತ್ತು ಬಿಜೆಪಿ ನಡುವೆ ಇರುವ ಸಂಬಂಧಗಳ ಕುರಿತಂತೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿದೆ ಎಂದು ಹೇಳಿಕೊಂಡು ಕಾಂಗ್ರೆಸ್  ತನ್ನ ಎರಡನೇ ಪತ್ರ ಬರೆದಿದೆ. ಇದಕ್ಕೂ ಮುಂಚೆ ವಾಲ್ ಸ್ಟ್ರೀಟ್ ಜರ್ನಲ್ ಲೇಖನವೊಂದರಲ್ಲೂ ಇದೇ ರೀತಿಯ ಆರೋಪ ವ್ಯಕ್ತವಾಗಿಕೋಲಾಹಲವೇ ಸೃಷ್ಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ವಕ್ತಾರ ಪವನ್ ಖೇರಾ ಹಾಗೂ ಎಐಸಿಸಿ ಡಾಟಾ ಅನಾಲಿಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ, ಫೇಸ್ ಬುಕ್  ತನ್ನದೇ ನಿಯಮಗಳಿಗೆ ವಿರುದ್ಧವಾಗಿ ಮತದಾರರ ಭಾವನೆಗಳನ್ನು ಹೇಗೆ ಬದಲಿಸಿದೆ, ದ್ವೇಷಯುಕ್ತ ಪೋಸ್ಟ್ ಗಳನ್ನು ಹೇಗೆ ಅನುಮತಿಸಿದೆ ಹಾಗೂ ನಕಲಿ ಸುದ್ದಿಗಳ ಕುರಿತು ಕಂಡೂ ಕಾಣದಂತಿತ್ತು ಎಂಬ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಫೇಸ್ ಬುಕ್ ತನ್ನ ಭಾರತೀಯ  ಘಟಕದ  ನಡೆಯ ಕುರಿತಂತೆ ಆದೇಶಿಸಿದ ತನಿಖೆಯ ವಿವರಗಳನ್ನು ಬಹಿರಂಗಗೊಳಿಸಬೇಕೆಂದೂ ಕಾಂಗ್ರೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News