ಲಡಾಖ್: ಪ್ಯಾಂಗೋಂಗ್ ಸಮೀಪ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ; ವರದಿ

Update: 2020-08-31 13:54 GMT

ಹೊಸದಿಲ್ಲಿ, ಆ.31: ಪೂರ್ವ ಲಡಾಖ್‌ನ ಪ್ಯಾಂಗೋಂಗ್ ತ್ಸೊ ಪ್ರದೇಶದಲ್ಲಿ ಮತ್ತೆ ಭಾರತ-ಚೀನಾ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ. ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡ ಚೀನೀ ಸೈನಿಕರು ಭಾರತೀಯ ಸೈನಿಕರೊಂದಿಗೆ ಜಟಾಪಟಿ ನಡೆಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಪ್ಯಾಂಗೋಂಗ್ ಸಮೀಪ ಚೀನಾದ ಸೈನಿಕರು ಅತಿಕ್ರಮಣಕ್ಕೆ ನಡೆಸಿದ ಪ್ರಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಉಭಯ ಸೇನೆಗಳ ಮಧ್ಯೆ ದೈಹಿಕ ಘರ್ಷಣೆ ನಡೆದಿಲ್ಲ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.

ಆಗಸ್ಟ್ 29 - 30ರ ಮಧ್ಯರಾತ್ರಿ ಪೂರ್ವ ಲಡಾಖ್‌ನ ಪ್ಯಾಂಗೋಂಗ್ ತ್ಸೊ ಸರೋವರದ ದಕ್ಷಿಣ ತೀರದಲ್ಲಿ ಏಕಪಕ್ಷೀಯವಾಗಿ ವಾಸ್ತವಿಕ ಸ್ಥಿತಿಯನ್ನು ಬದಲಿಸಲು ಚೀನಾದ ಪಡೆ ನಡೆಸಿದ ಪ್ರಚೋದನಕಾರಿ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆ ಸೋಮವಾರ ಹೇಳಿದೆ. ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಪಡೆಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಉಭಯ ದೇಶಗಳ ಮಧ್ಯೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ನಡೆದಿದ್ದ ಸಭೆಯಲ್ಲಿ ಮೂಡಿದ್ದ ಒಮ್ಮತಾಭಿಪ್ರಾಯವನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಉಲ್ಲಂಘಿಸಿದೆ ಎಂದು ಭಾರತದ ಸೇನಾಪಡೆ ವಕ್ತಾರ ಕ ಅಮನ್ ಆನಂದ್ ಹೇಳಿದ್ದಾರೆ.

ಮಾತುಕತೆ ಮೂಲಕ ಶಾಂತಿ, ನೆಮ್ಮದಿ ಉಳಿಸಿಕೊಂಡು ಬರಲು ಭಾರತದ ಸೇನೆ ಬದ್ಧವಾಗಿದೆ. ಇದೇ ವೇಳೆ, ತನ್ನ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲೂ ಬದ್ಧವಾಗಿದೆ. ಈಗ ಉದ್ಭವಿಸಿರುವ ಬಿಕ್ಕಟ್ಟನ್ನು ನಿವಾರಿಸಲು ಉಭಯ ಸೇನೆಗಳ ಬ್ರಿಗೇಡ್ ಕಮಾಂಡರ್ ಮಟ್ಟದ ಧ್ವಜ ಸಭೆ ಚುಷೂಲ್ ವಲಯದಲ್ಲಿ ನಡೆದಿದೆ ಎಂದವರು ಹೇಳಿದ್ದಾರೆ. ಚೀನಾದ ಸೈನಿಕರು ಭಾರೀ ಸಂಖ್ಯೆಯಲ್ಲಿ ಬಂದಿದ್ದರು. ಭಾರತದ ಸೇನೆಯೂ ಸಿದ್ಧವಾಗಿತ್ತು. ರಸ್ತೆಯಿಲ್ಲದ ಕಾರಣ ಪ್ಯಾಂಗೋಂಗ್ ಸರೋವರದ ತೀರದುದ್ದಕ್ಕೂ ಅವರು ಪಶ್ಚಿಮದತ್ತ ನಡೆದುಕೊಂಡು ಬಂದರು. ಈ ಪ್ರದೇಶವನ್ನು ಏಕಪಕ್ಷೀಯವಾಗಿ ಆಕ್ರಮಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಆದರೆ ಚೀನಾದ ನಡೆಯ ಬಗ್ಗೆ ಅರಿವಿದ್ದ ಭಾರತೀಯ ಸೇನೆ ಚೀನಾ ಸೇನೆಯ ಅತಿಕ್ರಮಣವನ್ನು ತಡೆಯಲು ಅಲ್ಲಿ ಸನ್ನದ್ಧ ಸ್ಥಿತಿಯಲ್ಲಿತ್ತು. ಯಾವುದೇ ದೈಹಿಕ ಘರ್ಷಣೆ ನಡೆದಿಲ್ಲ ಮತ್ತು ಈಗ ಅಲ್ಲಿ ಮುಖಾಮುಖಿ ಪರಿಸ್ಥಿತಿಯಿಲ್ಲ ಎಂದು ಭಾರತೀಯ ಸೇನೆಯ ಮೂಲಗಳು ಹೇಳಿವೆ.

ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಚೀನೀಯರಿಂದ ಅತಿಕ್ರಮಣ ಪ್ರಯತ್ನ ನಡೆದಿದೆ. ಭಾರತ ಭಾರೀ ಸಂಖ್ಯೆಯಲ್ಲಿ ಯೋಧರನ್ನು ಈ ಪ್ರದೇಶದಲ್ಲೇ ಉಳಿಸಿಕೊಂಡಿದೆ. ಚೀನಾದ ಕೆಲ ಸೈನಿಕರೂ ಇದೇ ಪ್ರದೇಶದಲ್ಲಿ ಉಳಿದಿದ್ದಾರೆ ಎಂದು ಮೂಲಗಳು ಹೇಳಿವೆ. ಜೂನ್ 15ರಂದು ಗಾಲ್ವನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯ ಬಳಿಕ ಎರಡು ದೇಶಗಳ ಸೇನೆಗಳ ಮಧ್ಯೆ ನಡೆದ ಪ್ರಥಮ ಪ್ರಮುಖ ಘಟನೆ ಇದಾಗಿದೆ. ಗಾಲ್ವನ್ ಕಣಿವೆ ಘರ್ಷಣೆಯ ಹಿನ್ನೆಲೆಯಲ್ಲಿ ಭಾರತ-ಚೀನಾಗಳ ಮಧ್ಯೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಗಲ್ವಾನ್ ಕಣಿವೆ ಹಾಗೂ ಇತರ ಘರ್ಷಣೆ ಸ್ಥಳಗಳಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಸಮ್ಮತಿಸಿದ್ದರೂ, ಪಾಂಗ್ಯೋಂಗ್ ತ್ಸೊ, ದೇಪ್ಸಂಗ್ ಸಹಿತ ಕೆಲವು ಪ್ರದೇಶಗಳಿಂದ ಹಿಂದಕ್ಕೆ ಸರಿಯಲು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News