ಬಗೆಬಗೆಯ ಚಿತ್ರಾನ್ನಗಳು

Update: 2020-08-31 19:30 GMT

ಎಲ್ಲ ವರ್ಗ, ವಯೋಮಾನದವರಿಗೂ ಇಷ್ಟವಾಗುವ ಸರಳ ಸುಲಭ ಉಪಾಹಾರ ‘ಚಿತ್ರಾನ್ನ’. ತನ್ನ ಸರಳತೆ ಮತ್ತು ಬಣ್ಣದ ದೃಷ್ಟಿಯಿಂದ ಬಹಳಷ್ಟು ಮೂದಲಿಕೆಗೆ ಬಳಕೆಯಾಗುವ ರೂಪಕವೂ ಚಿತ್ರಾನ್ನವೇ ಆಗಿದೆ. ದಕ್ಷಿಣ ಕರ್ನಾಟಕದ ಬೆಳಗಿನ ತಿಂಡಿಗಳಲ್ಲಿ ವಾರದಲ್ಲಿ ಇಡ್ಲಿ ಮತ್ತು ಚಿತ್ರಾನ್ನಕ್ಕೆ ಹಾಜರಿ ಕಡ್ಡಾಯ. ಹಾಕಿದ ಒಗ್ಗರಣೆಯ ಚಟ್ -ಫಟ್ ಸದ್ದು ಮುಗಿಯುವುದರೊಳಗೆ ತಿಂಡಿ ಸಿದ್ಧ್ದವಾಗಿಬಿಡುತ್ತದೆ. ಹೆಚ್ಚು ಪರಿಶ್ರಮವಿಲ್ಲದ ಬಣ್ಣ, ರುಚಿ, ತೃಪ್ತಿ ಎಲ್ಲದರಲ್ಲೂ ಹೇಳಿ ಮಾಡಿಸಿದ ಅಡುಗೆ. ಮನೆಗಳಲ್ಲಿ ಮಾತ್ರವಲ್ಲ ಬೀದಿಬದಿಯ ಹೊಟೇಲ್‌ಗಳಲ್ಲಿ ಕೂಡ ಚಿತ್ರಾನ್ನ ಹೆಚ್ಚು ಬಿಕರಿಯಾಗುವ ತಿಂಡಿ.

ಚಿತ್ರಾನ್ನದ ಚರಿತ್ರೆ ಶತಮಾನಗಳ ಹಿಂದಿನದು. ಇದು ಓಗರಗಳ ಜಾತಿಗೆ ಸೇರಿದುದು. ಮೂಲ ಹೆಸರು ಹೀಗೆ ಇದ್ದುದರ ಕುರಿತು ನನಗೆ ಖಾತ್ರಿಯಿಲ್ಲ. ಆದರೆ ವಿಧಾನವು ಮಾತ್ರ ಹಳೆಯದೆ. ಇದಕ್ಕೆ ಮಂಗರಸದ ಸೂಪಶಾಸ್ತ್ರದ ಅನ್ನದ ಅಧ್ಯಾಯವನ್ನು ಪರಾಮರ್ಶಿಸಬಹುದು. ಆದರೆ ಹಳೆಯ ವಿಧಾನಗಳಲ್ಲಿ ಟೊಮ್ಯಾಟೊ ಹಣ್ಣು ಬಳಸುವ ಮಾಹಿತಿಯಿಲ್ಲ. ಈ ಹಣ್ಣು ನಮಗೆ ಬಂದಿದ್ದು ಈಚಿನ ಶತಮಾನದಲ್ಲಿ. ಇದರ ಬಳಕೆ ಹೆಚ್ಚಾಗಿದ್ದಂತೂ ಈಚಿನ ದಶಕಗಳಲ್ಲಿ ಅನ್ನಬಹುದು. ಅದಕ್ಕೂ ಮೊದಲು ಒಗ್ಗರಣೆ ಅನ್ನವಾಗಿದ್ದಿತು ಕೂಡ. ಆದರೆ ಇಲ್ಲಿ ನೆನೆಯಬೇಕಿರುವುದು ಅನ್ನ ಅನ್ನುವುದೇ ಬಹುಸಂಖ್ಯಾತ ಜನರ ಮನೆಗಳಲ್ಲಿ ಅಪರೂಪಕ್ಕೆ ಮತ್ತು ಹಬ್ಬಗಳಿಗೆ ಮಾಡುವ ಅಡುಗೆಯಾಗಿದ್ದನ್ನು. ಬಯಲು ಸೀಮೆಯಲ್ಲಿ ಹೆಚ್ಚು ರಾಗಿ ಮತ್ತು ಕೆಲವು ಸಿರಿಧಾನ್ಯಗಳ ಅಡುಗೆ ಮಾಡಲಾಗುತ್ತಿತ್ತು. ಕಾರಣ ಇವತ್ತಿನಷ್ಟು ನೀರಾವರಿ ಜಮೀನುಗಳು ಹಿಂದೆ ಇರಲಿಲ್ಲ. ಇದ್ದ ಕಡೆಗೆ ಬೆಳೆದ ಭತ್ತವನ್ನು ಕೊಂಡು ತಿನ್ನುವ ಸಿರಿವಂತಿಕೆ ಅಥವಾ ಆಸಕ್ತಿ ಎರಡೂ ಜನಕ್ಕೆ ಇರಲಿಲ್ಲ. ಮಳೆ ಆಶ್ರಿತವಾದ ಜಮೀನುಗಳಲ್ಲಿ ರಾಗಿ, ಬರ್ಕ, ಸಾಮೆ, ಮುಂಡುಗದ ಭತ್ತದ ತಳಿಗಳನ್ನು ಬೆಳೆದು ಆಹಾರಕ್ಕೆ ಬಳಸುತ್ತಿದ್ದರು. ಹಾಗಾಗಿ ಅನ್ನದ ಅಡುಗೆಗಳು ಜಮೀನುದಾರರು, ಸಿರಿವಂತ ವ್ಯಾಪಾರಿಗಳು, ಆಸ್ಥಾನಿಕರಲ್ಲಿಯೇ ಹೆಚ್ಚಾಗಿದ್ದವು. ಭಾರತ ಉಪಖಂಡದಲ್ಲಿ ರುಚಿ ಮತ್ತು ಪದಾರ್ಥ ವೈವಿಧ್ಯವು ಕೂಡ ಇಲ್ಲಿನ ಕರಾಳ ಜಾತಿಪದ್ಧತಿಯ ಮತ್ತು ವರ್ಣವ್ಯವಸ್ಥೆಯ ನೆರಳುಗಳಲ್ಲಿ ಮೂಡಿ ಬಂದಿರುವುದನ್ನು ಹೇಳದೆಯೇ ಮಾತನಾಡುವುದು ತಪ್ಪಾಗುತ್ತದೆ.

ಅರಸೊತ್ತಿಗೆಗಳು ಬಿದ್ದು ಬ್ರಿಟಿಷ್ ಆಧಿಪತ್ಯ ಜಾರಿಗೊಂಡ ಕಾಲದಲ್ಲಿ ನೀರಾವರಿ ವ್ಯವಸ್ಥೆಗಳು ಹೆಚ್ಚು ಹೆಚ್ಚು ಚಾಲ್ತಿಗೆ ಬರಲಾಗಿ ಭತ್ತ ಬೆಳೆಯುವ ಪ್ರಮಾಣ ಎಲ್ಲ ಭೌಗೋಳಿಕ ಪ್ರದೇಶಗಳಲ್ಲೂ ಸಾಮಾನ್ಯವಾಯಿತು. ಹೆಚ್ಚು ಹೆಚ್ಚು ಭತ್ತವನ್ನು ಬೆಳೆಯುತ್ತಿದ್ದರಿಂದ ರಾಯಚೂರು ಬಳಿಯ ‘ದೋ ಅಬ್’ ಪ್ರದೇಶಕ್ಕೆ ಮೊಘಲರ ಆಡಳಿತವು ದುಪ್ಪಟ್ಟು ತೆರಿಗೆಯನ್ನು ವಿಧಿಸುತ್ತಿತ್ತಂತೆ. ಕ್ರಮೇಣ ಪ್ರಜಾಪ್ರಭುತ್ವ, ಅಧುನಿಕತೆಗಳು ಸಮಾಜವನ್ನು ಪ್ರವೇಶ ಮಾಡಲಾಗಿ ದಾಖಲೀಕರಣಗೊಳ್ಳದ ನಮ್ಮ ಪೂರ್ವಜರ ಆಹಾರಕ್ರಮಗಳು ಮರೆತುಹೋಗಿವೆ. ಇವತ್ತು ಚಾಲ್ತಿಯಲ್ಲಿ ಇರುವ ಅಥವಾ ದಾಖಲಾಗಿರುವ ಅಡುಗೆಗಳು ಸಿರಿವಂತ ಜಾತಿಗರ ಮನೆಯವು. ಬಹುಪಾಲು ಬಡವರ ಅಡುಗೆಗಳು ಕಾಲದ ಕಾಲ್ತುಳಿತದಲ್ಲಿ ಮುಚ್ಚಿ ಹೋಗಿವೆ. ಇವತ್ತು ಬಡಜನರ ಬಿರಿಯಾನಿಯಂತೆ ಕಾಣಲ್ಪಡುವ ಚಿತ್ರಾನ್ನ ಒಂದು ಕಾಲದ ಸಿರಿವಂತರ ಪಾಲಿನ ನೆಲ್ಲಿನ ಅನ್ನವಾಗಿತ್ತು. ಅನ್ನಕ್ಕೆ ಬೀಳುವ ಒಗ್ಗರಣೆಯಿಂದ ಶುರುವಾಗಿ ಅದಕ್ಕೆ ಸೇರಿಸುವ ಹುಳಿ, ಖಾರ ಮತ್ತು ಬೇರೆ ಬೇರೆ ತರಕಾರಿ ಪದಾರ್ಥಗಳಿಂದ ಅದು ಇನ್ನಷ್ಟು ಸಮೃದ್ಧವಾಗುತ್ತಾ ಬಂದಿದೆ. ಇವತ್ತು ಚಿತ್ರಾನ್ನ ಬರೀ ಒಗ್ಗರಣೆ ಅನ್ನವಾಗಿ ಉಳಿದಿಲ್ಲ.

ನನ್ನ ಬಾಲ್ಯದಲ್ಲಿ ಅನ್ನ ಮತ್ತು ರಾಗಿ ಮುದ್ದೆ ಎರಡೂ ಸಮಾನವಾಗಿ ಬಳಸಲ್ಪಡುತ್ತಿದ್ದವು. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ರಾಗಿಯ ಬಳಕೆಯೇ ಜಾಸ್ತಿ ಇದ್ದಿತು. ಬೆಳಗಿನ ತಿಂಡಿಯ ಪರಿಕಲ್ಪನೆಗಳೇ ಇಲ್ಲದ ಹಳ್ಳಿಯ ಬದುಕಿನಲ್ಲಿ ಅನ್ನವು ಐಷಾರಾಮಿ ಎನಿಸಿಕೊಂಡಿತ್ತು. ಭತ್ತವನ್ನು ದಂಡಿಯಾಗಿ ಬೆಳೆಯುವ ರೈತರು ಕೂಡ ಹೆಚ್ಚು ರಾಗಿಯನ್ನೇ ಬಳಸುತ್ತಿದ್ದರು. ಅಗತ್ಯಕ್ಕೆ ಮಿಗಿಲಾದ ಭತ್ತವನ್ನು ಮಾರಿಬಿಡುತ್ತಿದ್ದರು. ರಾತ್ರಿ ವೇಳೆ ಮಾಡಿದ ಅನ್ನವು ಹೆಚ್ಚು ಉಳಿದರೆ ಗ್ಯಾರಂಟಿ ಅದು ಚಿತ್ರಾನ್ನವಾಗುತ್ತಿತ್ತು. ಅದರ ಜೊತೆಗೆ ಚೂರು ಉಪ್ಪಿನಕಾಯಿ ಅಥವಾ ಉಪ್ಸಾರು ಖಾರ ಸಿಕ್ಕರೆ ಆನಂದಕ್ಕೆ ಪಾರವೇ ಇಲ್ಲ. ಎರಡು ಕೈ ಅನ್ನ ಜಾಸ್ತಿಯೇ ಹೊಟ್ಟೆ ಸೇರುತ್ತಿತ್ತು. ದಶಕದಷ್ಟು ಕಾಲ ‘ಚಿತ್ರಾನ್ನ’ ಎಂದರೆ ತಂಗಳು ಅನ್ನಕ್ಕೆ ಮಾಡುವ ಒಗ್ಗರಣೆ ಎಂದೇ ಭಾವಿಸಿ ಬಿಟ್ಟಿದ್ದೆ. ಅಕಸ್ಮಾತ್ ಏನಾದರೂ ಬಿಸಿ ಅನ್ನದಲ್ಲಿ ಮಾಡಿದರೆ ಅದರ ರುಚಿ ಸಪ್ಪೆ ಮತ್ತು ಮುದ್ದೆ ಮುದ್ದೆ ಅನಿಸೋದು, ಅದು ಇಷ್ಟವಾಗುತ್ತಲೇ ಇರಲಿಲ್ಲ. ತಂಗಳಿಗೆ ಮಾಡಿದ ಒಗ್ಗರಣೆಯೇ ಬೆಸ್ಟು ಎಂಬುದು ನನ್ನ ಅಂಬೋಣವಾಗಿತ್ತು. ಈಗಲೂ ವಾರಕ್ಕೆರಡು ಬಾರಿಯಾದರೂ ಚಿತ್ರಾನ್ನ ತಿನ್ನದೆ ಇದ್ದರೆ ಸಮಾಧಾನವಾಗುವುದಿಲ್ಲ. ಆದರೆ ಈಗ ವಿವಿಧ ಬಗೆಯ ಚಿತ್ರಾನ್ನಗಳನ್ನು ಮಾಡಬಹುದು.

ಈರುಳ್ಳಿ, ಹಸಿಮೆಣಸಿನಕಾಯಿ, ಕಡ್ಲೆ ಬೀಜ, ಕಡ್ಲೆ ಬೇಳೆಗಳ ಜೊತೆಗೆ ಒಗ್ಗರಣೆಗೆ ಸಾಸಿವೆ, ಕರಿಬೇವು, (ಕೆಲವರು ಜೀರಿಗೆ ಬಳಸುವುದುಂಟು) ಹಾಕಿ ಹುರಿದು ಕರಿದು ಬಾಡಿಸಿ ಕಡೆಯಲ್ಲಿ ಅವರಿಗೆ ಬೇಕಾದ ಹುಳಿಯ ಪದಾರ್ಥವನ್ನು ಬೆರೆಸಿ ಅನ್ನದ ಜೊತೆಗೆ ಚೆನ್ನಾಗಿ ಕಲಸಿ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪುಉದುರಿಸಿದರೆ ಚಿತ್ರಾನ್ನ ತಿನ್ನಲು ಸಿದ್ಧ್ದ. ಇದಕ್ಕೆ ಈಗ ಅಕ್ಕಿಯ ಅನ್ನವೇ ಬೇಕಿಲ್ಲ. ಅವಲಕ್ಕಿಯಲ್ಲಿ ಮಾಡಬಹುದು, ಬರ್ಕ - ಸಾಮೆಯ ತರಹದ ಕಿರುಧಾನ್ಯಗಳನ್ನು ಕೂಡ ಬಳಸಬಹುದು. ಆದರೆ ಅನ್ನವು ಸ್ವಲ್ಪಹುಡಿಹುಡಿಯಾಗಿ ಬರುವಂತೆ ಬೇಯಿಸಿಕೊಳ್ಳಬೇಕಷ್ಟೇ! ಇಲ್ಲವಾದರೆ ಮುದ್ದೆಯಂತಾಗಿ ಚಿತ್ರಾನ್ನದ ಸ್ವರೂಪವೇ ಬದಲಾಗಿ ಬಿಡುತ್ತದೆ. ಯಾವ ಹಣ್ಣಿನ ಹುಳಿಯನ್ನು ಸೇರಿಸುತ್ತೇವೆಯೋ ಅದಕ್ಕೆ ತಕ್ಕ ಹಾಗೆ ಖಾರ ಮತ್ತು ಉಪ್ಪಿನ ಪ್ರಮಾಣವನ್ನು ನಿಗದಿ ಮಾಡಿಕೊಳ್ಳಬೇಕು. ಇವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು ನಿಂಬೆಹಣ್ಣಿನ ಚಿತ್ರಾನ್ನ.

ಮನೆ, ಹೊಟೇಲ್, ಹಾಸ್ಟೆಲ್, ಬ್ಯಾಚುಲರ್ ರೂಮು ಎಲ್ಲ ಕಡೆಯೂ ವಿರಾಜಮಾನವಾಗಿ ಹಸಿದವರಿಗೆ ಬಹುಬೇಗ ಹೊಟ್ಟೆ ತುಂಬಿಸುವುದೇ ನಿಂಬೆ ಚಿತ್ರಾನ್ನ. ನಿಂಬೆಹಣ್ಣನ್ನು ಹುಡುಕಿ ತರಬೇಕಾದ ಅಥವಾ ಹಣ್ಣು ಬಿಡುವ ಋತುಮಾನಕ್ಕೆ ಕಾಯಬೇಕಾದ ಅಗತ್ಯ ಇಲ್ಲ. ಎಲ್ಲ ಕಾಲದಲ್ಲೂ ನಿಂಬೆ ಹಣ್ಣು ಸಿಗುತ್ತದೆ. ಒಗ್ಗರಣೆ ಪದಾರ್ಥ ಹಾಕಿ ಹುರಿದು ಈರುಳ್ಳಿ ಸೇರಿಸಿ ಬೇಯಿಸಿ ಕಡೆಯಲ್ಲಿ ಹುಳಿ ಹಿಂಡಿದರೆ ಮುಗಿಯಿತು. ನಿಂಬೆ ಹಣ್ಣಿನ ತಾಜಾ ವಾಸನೆ, ಕರಿಬೇವಿನ ಘಾಟು ಮತ್ತು ಹುಡಿಯಾದ ಅನ್ನವಿದ್ದರೆ ಮುಗಿಯಿತು ಮಾತಿಗೆ ಅವಕಾಶವೇ ಇರುವುದಿಲ್ಲ. ಹೆರಳೆಕಾಯಿ, ಕಿರಲೇ ಕಾಯಿ, ಕಂಚಿ ಕಾಯಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ದಪ್ಪಪದರದ ಕಾಡು ಜಾತಿಯ ನಿಂಬೆಯ ತರಹ ಕಾಣುವ ಈ ಹಣ್ಣು ಹುಳಿ ಮತ್ತು ಒಗರು ಮಿಶ್ರಿತವಾಗಿರುತ್ತದೆ. ತುಂಬಾ ಹಣ್ಣಾಗಿ ಬಿಟ್ಟಿದ್ದರೆ ಚೂರು ಸಿಹಿ ಮತ್ತು ಹುಳಿ ಅನಿಸುತ್ತದೆ. ಬಯಲು ಸೀಮೆಯ ತೋಟಗಳಲ್ಲಿ, ಬೇಲಿ, ಬದುಗಳಲ್ಲಿ ಈ ಹಣ್ಣಿನ ಮರಗಳು ಬೇಕಾದಷ್ಟು ಬೆಳೆಯುತ್ತವೆ. ಇದರಿಂದ ಮಾಡುವ ಉಪ್ಪಿನಕಾಯಿ ಕೂಡ ತುಂಬಾ ರುಚಿಯಾಗಿರುತ್ತದೆ ಮತ್ತು ಬಹಳ ಕಾಲ ಬಾಳಿಕೆ ಬರುತ್ತದೆ.

ಕಾಯಿ ಮತ್ತು ಹಣ್ಣು ಎರಡು ಸ್ಥಿತಿಯಲ್ಲಿ ಇದ್ದಾಗಲೂ ಇದರಿಂದ ಚಿತ್ರಾನ್ನ ಮಾಡುತ್ತಾರೆ. ಚೂರು ಒಗರಿನ ಸ್ಥಿತಿಯ ಈ ಚಿತ್ರಾನ್ನ ಮತ್ತು ಕಾಯಿಯ ವಾಸನೆ ವಿಶೇಷವಾದ ಆಸ್ವಾದವನ್ನು ಉಂಟು ಮಾಡುತ್ತದೆ. ಮಾವಿನ ಹಣ್ಣು ತಿನ್ನುವಷ್ಟು ಅದರ ಕಾಯನ್ನು ಹೆರೆದು ಕಾಯಿ ಚಿತ್ರಾನ್ನ ಮಾಡುವುದು ಜನಪ್ರಿಯವಲ್ಲ. ಆದಾಗ್ಯೂ ಈ ಮಾವಿನ ಕಾಯಿಯ ಚಿತ್ರಾನ್ನ ಒಂದು ವಿಶೇಷ ಅಡುಗೆ. ಬರಿಯ ಕಾಯಿ ಹೆರೆದು ಹಾಕಿ ಮಾಡುವುದು ಉಂಟು. ಹಾಗೆಯೆ ಅದಕ್ಕೆ ಚೂರು ಕಾಯಿ ಮಸಾಲೆಯನ್ನು ಸೇರಿಸಿ ರುಬ್ಬಿ ಕುದಿಸಿ ಬೇಯಿಸಿ ಗೊಜ್ಜು ಮಾಡಿ ಅದನ್ನು ಅನ್ನಕ್ಕೆ ಕಲಸಿ ಮಾಡುವುದೂ ಉಂಟು. ಇದೆಲ್ಲವೂ ಅವರವರ ರುಚಿ ಮತ್ತು ಸೌಕರ್ಯಗಳಿಗೆ ಬಿಟ್ಟದ್ದು. ಟೊಮ್ಯಾಟೊ ಚಿತ್ರಾನ್ನವು ನಿಂಬೆ ಚಿತ್ರಾನ್ನಕ್ಕೆ ಪರ್ಯಾಯವಾದ ಅಡುಗೆ. ತುರ್ತಿನ ಅಡುಗೆಗೆ ನಿಂಬೆಹಣ್ಣು ಸಿಗದೇ ಇದ್ದರೆ ಅದರ ಹುಳಿಗೆ ಬದಲಾಗಿ ಟೊಮ್ಯಾಟೊ ಹಣ್ಣನ್ನು ಬಳಸಿ ಮಾಡಲಾಗುತ್ತದೆ. ಇದೇ ಗೊಜ್ಜಿಗೆ ಚೂರು ಹೆಚ್ಚೇ ಟೊಮ್ಯಾಟೊ ಹಚ್ಚಿ ಹಾಕಿ ಅಚ್ಚ ಖಾರದ ಪುಡಿ ಬೆರೆಸಿ ಕುದಿಸಿದರೆ ಟೊಮ್ಯಾಟೊ ಗೊಜ್ಜಾಗುತ್ತದೆ.

ಅನ್ನ, ರೊಟ್ಟಿ, ಚಪಾತಿ ಎಲ್ಲಕ್ಕೂ ಒಳ್ಳೆಯ ಜೋಡಿ. ಇನ್ನೊಂದು ತೆಂಗಿನ ಕಾಯಿ ಮತ್ತು ಸಾಸಿವೆಯನ್ನು ಸೇರಿಸಿ ರುಬ್ಬಿಕೊಂಡು ಅದನ್ನು ಈರುಳ್ಳಿ ಕರಿಬೇವು ಬೇಳೆಯ ಒಗ್ಗರಣೆಯ ಜೊತೆಗೆ ಹುರಿದು ಬೇಯಿಸಿ ಅನ್ನದ ಜೊತೆಗೆ ಕಲಸಿ ಬಡಿಸುವುದು. ತೆಂಗು, ಸಾಸಿವೆಯ ಘಮ, ಗೊಜ್ಜಿನ ತೇವ, ಹುಳಿ ಪದಾರ್ಥ ಬಳಸದೆ ಇರುವುದು ಉಳಿದ ಚಿತ್ರಾನ್ನಗಳಿಗೆ ಹೋಲಿಸಿದರೆ ವಿಭಿನ್ನ ಅನ್ನಿಸುತ್ತದೆ ಮತ್ತು ಸಾಸಿವೆಯ ಬಣ್ಣ ನೈಸರ್ಗಿಕವಾಗಿ ಬರುತ್ತದೆ. ಅರಿಶಿನ ಸೇರಿಸುವ ಅಗತ್ಯವಿಲ್ಲ. ಚಿತ್ರಾನ್ನದ ಅಸ್ಮಿತೆ ಇರುವುದೇ ಅದರ ಬಣ್ಣದಲ್ಲಿ. ಅರಿಶಿನವನ್ನು ಬಳಸದೆ ಮಾಡುವ ಚಿತ್ರಾನ್ನಕ್ಕೆ ಬೆಲೆಯೇ ಇಲ್ಲ. ಅದನ್ನು ಚಿತ್ರಾನ್ನ ಎಂದು ಒಪ್ಪಲು ಜನ ಸಿದ್ಧರಿಲ್ಲ. ಅಂದ ಹಾಗೆ ಇದಕ್ಕೆ ಮೊಟ್ಟೆ-ಮಾಂಸ ಬಳಸುವಂತಿಲ್ಲವೇ ಎಂದು ಪ್ರಶ್ನೆ ಕೇಳಿದರೆ ಅಗತ್ಯವಾಗಿ ಬಳಸಿ ಅಂತೀನಿ. ಈರುಳ್ಳಿ, ಸಾಸಿವೆಯ ಒಗ್ಗರಣೆಯ ಜೊತೆಗೆ ಮಧ್ಯಮ ಗಾತ್ರದಲ್ಲಿ ಹಚ್ಚಿದ ಚಿಕನ್ ತುಂಡುಗಳನ್ನು ಹಾಕಿ ಹುರಿದು ಬೇಯಿಸಿ ಅನ್ನದ ಜೊತೆಗೆ ಕಲಸಿ ತಿಂದು ಒಮ್ಮೆ ರುಚಿ ನೋಡಿ.. ಚಿತ್ರಾನ್ನದ ವೈವಿಧ್ಯಗಳಿಗೆ ಕೊನೆಯೇ ಇಲ್ಲ.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News