ಲಡಾಕ್ ಸಂಘರ್ಷದಿಂದ ದೇಶದ ಗಮನ ಬೇರೆಡೆ ಸೆಳೆಯುವ ‘ಮನ್ ಕಿ ಬಾತ್’

Update: 2020-08-31 17:35 GMT
ಪೋಟೊ ಕೃಪೆ: @jaiveershergi twitter.com

 ಹೊಸದಿಲ್ಲಿ,ಆ.31: ಪೂರ್ವ ಲಡಾಕ್‌ನ ಪ್ಯಾಂಗಾಂಗ್‌ತ್ಸೊ ಸಮೀಪ ಶನಿವಾರ ಚೀನಿ ಪಡೆಗಳು ಪ್ರಚೋದನಕಾರಿ ಮಿಲಿಟರಿ ಚಟುವಟಿಕೆಗಳನ್ನು ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಸಮಸ್ಯೆಗಳಿಂದ ದೇಶದ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆಂದು ಟೀಕಿಸಿದೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ತನ್ನ ರೇಡಿಯೋ ಭಾಷಣ ಮನ್‌ಕಿಬಾತ್ ನ್ನು ಪ್ರಸ್ತಾವಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ, ನ್ಯಾಯವಾದಿ ಜೈವೀರ್ ಶೇರ್‌ಗಿಲ್ ‘‘ ವಾಸ್ತವ ಗಡಿನಿಯಂತ್ರಣ ರೇಖೆಯ ಯಥಾಸ್ಥಿತಿಯನ್ನು ಬದಲಾಯಿಸುವುದಕ್ಕಾಗಿ ಚೀನಾವು ಸ್ಥಿರವಾಗಿ ಹಾಗೂ ನಿರಂತರವಾಗಿ ದುಸ್ಸಾಹಸಗಳನ್ನು ನಡೆಸುತ್ತಾ ಇದ್ದಾರೆ.. ಆದರೆ ಬಿಜೆಪಿ ಸರಕಾರವು ಈ ವಾಸ್ತವತೆಯನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದೆ. ಆತ್ಮನಿರ್ಭರ, ಗೊಂಬೆಗಳು ಹಾಗೂ ಭಾರತೀಯ ನಾಯಿಗಳ ಮೇಲಿನ ಪ್ರೀತಿಯ ಬಗ್ಗೆ ಭಾಷಣ ಮಾಡುವ ಮೂಲಕ ಜನತೆಯ ಗಮನವನ್ನು ಬೇರೆಡೆ ಸೆಳೆಯಬಹುದಾಗಿದೆ. ಆದರೆ ಇವೆಲ್ಲವೂ ಚೀನಾವನ್ನು ಹೊರದಬ್ಬುವ ಕಾರ್ಯತಂತ್ರ ಹಾಗೂ ಯೋಜನೆಯ ಬಗ್ಗೆ ಗೊಂದಲ ಮೂಡಿಸಬಾರದು’’ ಎಂದು ಹೇಳಿದ್ದಾರೆ.

  ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ರೇಡಿಯೋ ಭಾಷಣದಲ್ಲಿ, ಭಾರತವು ಜಾಗತಿಕವಾಗಿ ಗೊಂಬೆ ತಯಾರಿಕಾ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದರು. ಭದ್ರತಾ ಕಾರ್ಯಾಚರಣೆಗಳಲ್ಲಿ ಶ್ವಾನಗಳ ಪಾತ್ರದ ಬಗ್ಗೆ ಮಾತನಾಡಿದ್ದ ಸಂದರ್ಭದಲ್ಲಿ ಅವರು ದೇಶಿ ತಳಿಯ ನಾಯಿಗಳ ಬಗ್ಗೆ ಆಸಕ್ತಿ ಪ್ರದರ್ಶಿಸುವಂತೆ ಜನರಿಗೆ ಕರೆ ನೀಡಿದ್ದರು.

ಕೇಂದ್ರ ಸರಕಾರವು ಇಂದು ನೀಡಿದ ಹೇಳಿಕೆಯೊಂದರಲ್ಲಿ, ಚೀನಿ ಪಡೆಗಳು ಪೂರ್ವ ಲಡಾಕ್‌ನ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಚೋದನಕಾರಿ ಮಿಲಿಟರಿ ಚಲನವಲನಗಳನ್ನು ನಡೆಸಿದೆ. ಆದರೆ, ಭಾರತೀಯ ಸೈನಿಕರು ಅದನ್ನು ತಡೆದಿದ್ದಾರೆ ಎಂದು ಸರಕಾರ ಹೇಳಿಕೆಯಲ್ಲಿ ತಿಳಿಸಿತ್ತು.

  ಅತಿಕ್ರಮಣ ಯತ್ನಗಳನ್ನು ನಡೆಸುತ್ತಿರುವ ಚೀನಾದ ವಿರುದ್ಧ ಪ್ರಧಾನಿ ಮೋದಿ ತನ್ನ ಕ್ರೋಧನೇತ್ರವನ್ನು ಯಾವಾಗ ಪ್ರದರ್ಶಿಸಲಿದ್ದಾರೆಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಟ್ವಿಟೀಸಿದ್ದಾರೆ.

 ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು,  “ಪ್ರಧಾನಿ ಮೋದಿ ದೇಶದ ಐಕ್ಯತೆಯ ಬಗ್ಗೆ ಯಾವುದೇ ರಾಜಿ ಮಾಡುವುದಿಲ್ಲ. ನಮಗೆ ಕ್ರೋಧದ ನೇತ್ರವಿದೆ. ಆದರೆ ಕಾಂಗ್ರೆಸ್ ಪಕ್ಷವು ಚೀನಾದ ಬಗ್ಗೆ ಯಾಕೆ ಮೃದುವಾಗಿದೆ” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News