ಸುರೇಶ್ ರೈನಾಗೆ ಚೆನ್ನೈ ಸೂಪರ್ ಕಿಂಗ್ಸ್ ಬಾಗಿಲು ಬಂದ್?

Update: 2020-08-31 18:44 GMT

ಹೊಸದಿಲ್ಲಿ: ವೈಯಕ್ತಿಕ ಕಾರಣದಿಂದಾಗಿ ಈ ಋತುವಿನ ಐಪಿಎಲ್ ಟೂರ್ನಿಯಿಂದ ಹೊರ ನಡೆದಿರುವ ಆಲ್‌ರೌಂಡರ್ ಸುರೇಶ್ ರೈನಾ ಅವರ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ನೊಂದಿಗಿನ ದೀರ್ಘ ಬಾಂಧವ್ಯ ಅಂತ್ಯದತ್ತ ಸಾಗಿದ್ದು, 2021ರ ಆವೃತ್ತಿಯ ಮೊದಲೇ ಚೆನ್ನೈ ಫ್ರಾಂಚೈಸಿಯು ರೈನಾರಿಂದ ಪ್ರತ್ಯೇಕವಾಗುವ ನಿರೀಕ್ಷೆಯಿದೆ.

ದುಬೈನಲ್ಲಿರುವ ಚೆನ್ನೈ ಫ್ರಾಂಚೈಸಿಯ ದೀಪಕ್ ಚಹಾರ್ ಹಾಗೂ ಋತುರಾಜ್ ಗಾಯಕ್ವಾಡ್ ಸಹಿತ 13 ಮಂದಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಕ್ವಾರಂಟೈನ್ ಅವಧಿಯಲ್ಲಿ 32ರ ಹರೆಯದ ರೈನಾ ಅವರ ನಡವಳಿಕೆಯು ಟೀಮ್ ಮ್ಯಾನೇಜ್‌ಮೆಂಟ್‌ನ ಅಸಮಾಧಾನಕ್ಕೆ ಕಾರಣವಾಗಿದೆ.

 ಸಿಎಸ್‌ಕೆ ನಿಯಮಗಳ ಪ್ರಕಾರ ಕೋಚ್, ನಾಯಕ ಹಾಗೂ ಮ್ಯಾನೇಜರ್ ಕೊಠಡಿಗಳನ್ನು ಪಡೆಯುತ್ತಾರೆ. ಆದಾಗ್ಯೂ, ರೈನಾ ಅವರು ಫ್ರಾಂಚೈಸಿ ನೆಲೆಸುವ ಎಲ್ಲ ಹೊಟೇಲ್‌ಗಳಲ್ಲೂ ಕೊಠಡಿ ಪಡೆದಿದ್ದರು. ಅವರ ರೂಮ್‌ನಲ್ಲಿ ಬಾಲ್ಕನಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿತ್ತು. ಇದೊಂದು ಸಮಸ್ಯೆಯಾಗಿದ್ದರೂ ಭಾರತಕ್ಕೆ ವಾಪಸ್ ಆಗುವಷ್ಟು ದೊಡ್ಡದಲ್ಲ ಎಂದು ಐಪಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ.

ರೈನಾ ಈ ಋತುವಿನಲ್ಲಿ ಲಭ್ಯವಿರುವುದಿಲ್ಲ ಎನ್ನುವುದು ಸಿಎಸ್‌ಕೆ ಪ್ರಕಟಿಸಿರುವ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಈಗ ಕೆಲವು ವಿಚಾರಗಳು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಿಗೆ ಹಿಡಿಸುತ್ತಿಲ್ಲ. ನಿವೃತ್ತಿಯಾಗಿರುವ ಹಾಗೂ ಯಾವುದೇ ಕ್ರಿಕೆಟ್ ಆಡದಿರುವ ಆಟಗಾರ ಚೆನ್ನೈ ತಂಡಕ್ಕೆ ಮತ್ತೆ ವಾಪಸಾಗುವ ಸಾಧ್ಯತೆ ಇಲ್ಲ. ಬಹುಶಃ ಅವರು ಹರಾಜಿನಲ್ಲಿ ಹಿಂತಿರುಗುತ್ತಾರೆ ಅಥವಾ ಬೇರೆ ಫ್ರಾಂಚೈಸಿ ಅವರನ್ನು ಆಯ್ಕೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ರೈನಾರಿಂದ ತೆರವಾಗಿರುವ ಸ್ಥಾನಕ್ಕೆ ಅಧಿಕೃತ ಬದಲಿ ಆಟಗಾರರನ್ನು ಸಿಎಸ್‌ಕೆ ಇನ್ನೂ ಕೇಳಿಲ್ಲ. ಆ ಕುರಿತು ಇನ್ನೂ ನಿರ್ಧರಿಸಿಲ್ಲ. ಸಿಎಸ್‌ಕೆ ಯುವ ಆಟಗಾರ ಋತುರಾಜ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಅವರು ಕ್ವಾರಂಟೈನ್ ಅವಧಿ ಮುಗಿಸಿದ ಬಳಿಕ ಎರಡು ನೆಗೆಟಿವ್ ಪರೀಕ್ಷೆಯ ನಂತರ ತರಬೇತಿ ಶಿಬಿರಕ್ಕೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 164 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ರೈನಾ 4,527 ರನ್ ಕಲೆ ಹಾಕಿ ಚೆನ್ನೈ ತಂಡದ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಉತ್ತರಪ್ರದೇಶದ ಎಡಗೈ ಬ್ಯಾಟ್ಸ್‌ಮನ್ ರೈನಾ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರರ್(5,368 ರನ್)ಆಗಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ(5,412)ಐಪಿಎಲ್‌ನಲ್ಲಿ ಹೆಚ್ಚು ರನ್ ಗಳಿಸಿರುವ ದಾಖಲೆ ನಿರ್ಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News