ದ.ಕ.: ಡ್ರಗ್ಸ್ ಮೃತ್ಯುಜಾಲಕ್ಕೆ ಕಡಿವಾಣ ಎಂದು?

Update: 2020-09-01 04:48 GMT

ಮಂಗಳೂರು, ಆ.31: ಡ್ರಗ್ಸ್ ಎಂಬ ಮೃತ್ಯುಜಾಲ ಇದೀಗ ಭಾರೀ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿಯೂ ಡ್ರಗ್ಸ್ ದಂಧೆ ಆರೋಪ ಕೇಳಿ ಬಂದಿದ್ದು, ಸರಕಾರ ಎಚ್ಚೆತ್ತುಕೊಂಡಿದೆ. ಆದರೆ ಕಳೆದ ಹಲವು ವರ್ಷಗಳಿಂದ ಮಂಗಳೂರು ಕೇಂದ್ರವಾಗಿಸಿಕೊಂಡು ದ.ಕ. ಜಿಲ್ಲೆಯ ಯುವ ಪೀಳಿಗೆಯ ಭವಿಷ್ಯಕ್ಕೆ ಕೊಳ್ಳಿ ಇಟ್ಟಿರುವ ಡ್ರಗ್ಸ್ ಮಾಫಿಯಾದ ವಿರುದ್ಧ ಅಥವಾ ತಡೆಯುವ ನಿಟ್ಟಿನಲ್ಲಿ ಯಾವುದೇ ಗಂಭೀರ ಪ್ರಯತ್ನಗಳಾಗಿಲ್ಲ. ಪೊಲೀಸ್ ಇಲಾಖೆಯಿಂದ ಸಾಕಷ್ಟು ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಪತ್ತೆ ಹಚ್ಚಿ ಕೆಲ ಆರೋಪಿಗಳನ್ನು ಬಂಧಿಸುವ ಕೆಲಸ ಆಗಾಗ್ಗೆ ನಡೆಯುತ್ತಿದೆ. ಆದರೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವಂತೆ ರಾಜಕೀಯ ನಂಟನ್ನೂ ಹೊಂದಿದೆ ಎನ್ನಲಾದ ಈ ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್‌ಗಳು, ಅದರ ಮೂಲವನ್ನು ಪತೆ್ತ ಹಚ್ಚುವ ಪ್ರಯತ್ನ ಇನ್ನೂ ಆಗಿಲ್ಲ.

ಕಾರ್ಕೋಟಕ ವಿಷಕ್ಕಿಂತಲೂ ಅಪಾಯಕಾರಿ ಎಂದು ಬಣ್ಣಿಸಲಾಗುವ ಈ ಡ್ರಗ್ಸ್ ಜಾಲವು ಇಂದಿಗೂ ದ.ಕ. ಜಿಲ್ಲೆಯ ಹದಿಹರೆಯದ ಯುವಕರನ್ನು ತನ್ನ ಜಾಲದಲ್ಲಿ ಸಿಲುಕಿಸಿ ಅರಿವಿಲ್ಲದಂತೆಯೇ ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ. ಕುಟುಂಬವನ್ನು ಹತಾಶೆ, ನೋವಿಗೆ ಸಿಲುಕಿಸಿದೆ. ಜಿಲ್ಲಾದ್ಯಂತ ಸಾಕಷ್ಟು ಜಾಗೃತಿ, ಪೊಲೀಸ್ ಇಲಾಖೆಯಿಂದ ಈ ಡ್ರಗ್ಸ್ ಮಾಫಿಯಾದ ವಿರುದ್ಧದ ನಿಯಂತ್ರಣದ ಕ್ರಮಗಳ ಹೊರತಾಗಿಯೂ ಈ ಮಾಫಿಯಾ ಮಾತ್ರ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಪ್ರತಿನಿತ್ಯವೆಂಬಂತೆ ಪೊಲೀಸ್ ಇಲಾಖೆಯು ಡ್ರಗ್ಸ್ ಸೇವನೆ ಪತ್ತೆ, ಡ್ರಗ್ಸ್ ವಶ- ಆರೋಪಿಗಳ ಸೆರೆ ಎಂಬ ಪ್ರಕಟನೆಗಳನ್ನು ನೀಡುತ್ತಿರುವುದು ಈ ಜಾಲ ತನ್ನ ಜಾಲವನ್ನು ವಿಸ್ತರಿಸಿರುವುದಕ್ಕೆ ಸಾಕ್ಷಿ ಎಂಬಂತಿದೆ.

2 ತಿಂಗಳಲ್ಲೇ 38.60 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ವಶ!

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, 2020ರ ಜನವರಿಯಿಂದ ಆಗಸ್ಟ್‌ವರೆಗೆ ಮಾದಕ ದ್ರವ್ಯ ಮಾರಾಟ, ಸಾಗಾಟ ಹಾಗೂ ಸೇವನೆಗೆ ಸಂಬಂಧಿಸಿ ಒಟ್ಟು 18 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಒಟ್ಟು 33 ಮಂದಿಯ ಬಂಧನವಾಗಿದ್ದು, 40,30,150 ರೂ. ವೌಲ್ಯದ 146 ಕೆಜಿ 206 ಗ್ರಾಂ ಗಾಂಜಾ, 30.14 ಗ್ರಾಂ ಎಂಡಿಎಂಎ, 153 ಎಂಡಿಎಂ ಗುಳಿಗೆಗಳು, 14 ಗ್ರಾಂ ಗಾಂಜಾ ಹಾ ಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.

ವಿಶೇಷವೆಂದರೆ, ಜುಲೈ ಮತ್ತು ಆಗಸ್ಟ್‌ನಲ್ಲೇ ಒಟ್ಟು ಏಳು ಪ್ರಕರಣಗಳಲ್ಲಿ 18 ಮಂದಿಯ ಬಂಧನವಾಗಿದೆ ಮತ್ತು ಗಾಂಜಾ ಸೇರಿದಂತೆ ಈ ಅವಧಿಯಲ್ಲೇ ಒಟ್ಟು 38,60,300 ರೂ. ವೌಲ್ಯದ ಗಾಂಜಾ ಹಾಗೂ ಇತರ ಮಾದಕ ದ್ರವ್ಯಗಳು ಪತ್ತೆಯಾಗಿರುವುದು ಇಲ್ಲಿ ಮಾದಕ ದ್ರವ್ಯಗಳ ಮಾಯಾಜಾಲ ಅದೆಷ್ಟರ ಮಟಿ್ಟಗೆ ಸಕ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿ.

ಡ್ರಗ್ಸ್ ಸಮಸ್ಯೆ ಸಾರ್ವತ್ರಿಕವಾಗಿದೆ. ಹಾಗಿದ್ದರೂ ಮಂಗಳೂರು ನಗರ ಪಕ್ಕದ ರಾಜ್ಯಗಳ ಜತೆ ಗಡಿಭಾಗಗಳನ್ನು ಹೊಂದಿರುವುದರಿಂದ ವಿಶೇಷ ನಿಗಾ ವಹಿಸಬೇಕಾಗಿದೆ, ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದ.ಕ., ಮಂಗಳೂರು ಪೊಲೀಸ್ ವ್ಯಾಪ್ತಿಯ ಜತೆಗೆ ಉಡುಪಿ, ಹಾಸನ ಜಿಲ್ಲೆ ಸೆೀರಿ ಕಾರ್ಯಾಚರಣೆ ನಡೆಸಲಾಗುತ್ತಿದೆ.ಕಾರ್ಯಾಚರಣೆಯನ್ನು ಬಲಪಡಿಸಲು ನಮಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಜನರಿಗೆ ಡ್ರಗ್ಸ್ ಪೂರೈಕೆ ಅಥವಾ ಬಳಕೆದಾರರ ಬಗ್ಗೆ ಮಾಹಿತಿ ದೊರಕಿದಾಗ ಅವರು ನಮಗೆ ಮಾಹಿತಿ ನೀಡಿದ್ದಲ್ಲಿ ಸೂಕ್ತ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಯುವಕರು, ನಮ್ಮ ಸಮಾಜ ಈ ಜಾಲದಲ್ಲಿ ಸಿಲುಕುವುದನ್ನು ನಾವೆಂದೂ ಬಯಸುವುದಿಲ್ಲ. ಅದರ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ.

ವಿಕಾಸ್ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ

ಈ ಹಿನ್ನೆಲೆಯಲ್ಲಿ ಹಿಂದೆಯೂ ‘ವಾರ್ತಾಭಾರತಿ’ ಪತ್ರಿಕೆಯಿಂದ ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಮೂಡಿಸುವ, ಈ ಮಾಫಿಯಾದ ಕರಾಳ ಮುಖವನ್ನು ಸಮಾಜದ ಮುಂದಿಟ್ಟು ಎಚ್ಚರಿಸುವ ಕಾರ್ಯ ನಡೆಸಲಾಗಿತ್ತು. 2020ರ ಫೆಬ್ರವರಿಯಲ್ಲಿ ಮತ್ತೆ ಪತ್ರಿಕೆಯಿಂದ ಆರಂಭಗೊಂಡಿದ್ದ ಡ್ರಗ್ಸ್ ವಿರುದ್ಧದ ಅಭಿಯಾನ ಕೊರೋನದಿಂದಾಗಿ ಕೆಲವು ಸರಣಿಗಳ ಬಳಿಕ ಮುಂದೂಡಲ್ಪಟ್ಟಿತ್ತು.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯ ಡ್ರಗ್ಸ್ ಮಾಫಿಯಾದ ಟಾರ್ಗೆಟ್ ಏರಿಯಾ ಮಾತ್ರವಲ್ಲದೆ, ನೆರೆ ರಾಜ್ಯಗಳ ಮೂಲಕ ಕರಾವಳಿ ಜಿಲ್ಲೆಗಳಿಗೆ ನಾನಾ ರೀತಿಯ ಡ್ರಗ್ಸ್ ಪದಾರ್ಥಗಳು ಅವ್ಯಾಹತವಾಗಿ ಸರಬರಾಜಾಗುತ್ತವೆ. ನೆರೆಯ ಕೇರಳ, ಕಾಸರಗೋಡು, ಗೋವಾ, ಮಹಾರಾಷ್ಟ್ರದಿಂದ ರೈಲಿನಲ್ಲಿ ಮಂಗಳೂರಿಗೆ ಸರಬರಾಜಾಗುತ್ತಿದ್ದ ಡ್ರಗ್ಸ್, ಇದೀಗ ವೆಬ್‌ಸೈಟ್, ಇಮೇಲ್, ವಾಟ್ಸ್‌ಆ್ಯಪ್‌ನಲ್ಲೂ ಡ್ರಗ್ಸ್ ದಂಧೆ ಬುಕ್ಕಿಂಗ್ ನಡೆಯುತ್ತಿದೆ ಎನ್ನುವುದು ಕಳವಳಕಾರಿ ಅಂಶ.

ಕೊರೋನದಿಂದಾಗಿ ಕಳೆದ ಮಾರ್ಚ್‌ನಿಂದ ಶಾಲಾ ಕಾಲೇಜುಗಳು ಸ್ತಬ್ಧಗೊಂಡಿವೆ. ಹಾಗಿದ್ದರೂ ಈ ಅವಧಿಯಲ್ಲೂ ಬೃಹತ್ ಪ್ರಮಾಣದಲ್ಲಿ ಡ್ರಗ್ಸ್ ಪತ್ತೆಯಾಗುತ್ತಿದೆ. ಹಾಗಾಗಿ ಈ ಡ್ರಗ್ಸ್ ಮಾಫಿಯಾ ವಿರುದ್ಧ ಜಿಲ್ಲಾಡಳಿತ ಸ್ಪಷ್ಟ ಹಾಗೂ ಸಮಗ್ರ ಕ್ರಮಕೈಗೊಳ್ಳುವುದು ಅಗತ್ಯವಾಗಿದೆೆ.

ಬ್ರೌನ್‌ಶುಗರ್, ಹೆರಾಯಿನ್, ಒಪಿಯಂ, ಚರಸ್, ಹಾಶೀಸ್, ಕೊಕೈನ್, ಎಪ್ರಿಡಿಮ್, ಎಂಡಿಎಂಎ, ಎಂಡಿಎಸ್, ಕೆಕಾಟಿನ್, ಯಾಬಾ, ಎಲ್‌ಎನ್‌ಡಿ ಪೇಪರ್, ಗಾಂಜಾ ಸೇರಿದಂತೆ ವಿಭಿನ್ನ ರೂಪದಲ್ಲಿ ಯುವಜನರ ಕೈ ಸೇರುವ ಈ ಡ್ರಗ್ಸ್‌ಗಳಲ್ಲಿ ಸದ್ಯ ಎಲ್‌ಎಸ್‌ಡಿ ಡ್ರಗ್ಸ್ ಭಾರೀ ಸದ್ದು ಮಾಡುತ್ತಿದೆ. ಭಾವನೆಗಳನ್ನೇ ಬದಲಿಸುವ ಶಕ್ತಿಯನ್ನು ಈ ಡ್ರಗ್ಸ್ ಹೊಂದಿದೆ ಎನ್ನುವುದು ತಜ್ಞರ ಅಭಿಪ್ರಾಯ. ಎಲ್‌ಎಸ್‌ಡಿ (ಲೈಸೆರ್ಜಿಕ್ ಆ್ಯಸಿಡ್ ಡೈಥಿಲಾಮೈಡ್) ಎಂಬ ಭಯಾನಕ ಮಾದಕ ವಸ್ತು ಗಡಿನಾಡು ಕರಾವಳಿಯನ್ನೂ ವ್ಯಾಪಿಸಿದೆ. ‘ಎಲ್‌ಎಸ್‌ಡಿ’ ಅತ್ಯಂತ ಅಪಾಯಕಾರಿ ಅಮಲು ಬರಿಸುವ ಮಾದಕಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು.

ಡ್ರಗ್ಸ್ ಜಗತ್ತಿನ 2ನೇ ಅತೀ ದೊಡ್ಡ ಬಿಝಿನೆಸ್!

ನನ್ನ ಅನುಭವದಲ್ಲಿ ಡ್ರಗ್ಸ್ ಎಂಬುದು ವಿಶ್ವದ ಎರಡನೇ ಅತೀ ದೊಡ್ಡ ಬಿಝಿನೆಸ್! ವಿಶ್ವದ ಮೊದಲ ಬಿಸ್ನೆಸ್ ಶಸ್ತ್ರಾಸ್ತ್ರಗಳಾಗಿದ್ದರೆ, ಎರಡನೆಯದ್ದು ಡ್ರಗ್ಸ್. ಮಾರ್ಕೆಟಿಂಗ್ ಸಲುವಾಗಿ ಇದರ ಕಿಂಗ್‌ಪಿನ್‌ಗಳು ಕಾಲೇಜುಗಳಲ್ಲಿ ತಮ್ಮವರನ್ನೇ ವಿದ್ಯಾರ್ಥಿಗಳಾಗಿ ದಾಖಲು ಮಾಡಿಸಿಕೊಂಡು ಜಾಲವನ್ನು ವಿಸ್ತರಿಸುವ ವ್ಯವಸ್ಥಿತ ಜಾಲ ಸಕ್ರಿಯವಾಗಿರುವುದು ನನ್ನ ಬಳಿಗೆ ಚಿಕಿತ್ಸೆಗೆ ಬಂದ ಪ್ರಕರಣಗಳಿಂದ ಬಯಲಾಗಿದೆ. ಹಾಗಾಗಿ ಈ ಜಾಲದ ಮೂಲವನ್ನು ಹುಡುಕುವುದು, ನಿಯಂತ್ರಿಸುವುದು ಪೊಲೀಸ್ ಇಲಾಖೆಗೂ ಸವಾಲಾಗಿದೆ. ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಡ್ರಗ್ಸ್ ವ್ಯಸನಕ್ಕೊಳಗಾದವರಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಇದೆ. ಅಲ್ಲಿ ಹಾಗೂ ಕ್ಲಿನಿಕ್ ಸೇರಿದಂತೆ ಕಳೆದ ಸುಮಾರು 12 ವರ್ಷಗಳಲ್ಲಿ 500ಕ್ಕೂ ಅಧಿಕ ಡ್ರಗ್ಸ್‌ಗೆ ಸಂಬಂಧಿಸಿ ರೋಗಿಗಳಿಗೆ ಚಿಕಿತ್ಸೆಯನ್ನು ನಾನು ನೀಡಿದ್ದೇನೆ. ನಾನು ನೋಡಿದ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಡ್ರಗ್ಸ್ ವ್ಯಸನಿಗಳು ಆರಂಭದಲ್ಲಿ ಧೂಮಪಾನ, ಅಲ್ಕೋಹಾಲ್ ಅಭ್ಯಾಸದಿಂದ ಈ ಚಟವನ್ನು ಅಂಟಿಸಿಕೊಂಡವರು. ಡ್ರಗ್ಸ್ ತೆಗೆದುಕೊಳ್ಳುವವರು ಹೆಚ್ಚಾಗಿ ಹೇಳುವ ಮಾತು, ಇದು ಒಂದು ರೀತಿಯ ಖುಷಿ ಕೊಡುತ್ತದೆ. ಅಮಲು ನೀಡುತ್ತದೆ, ಸುಮಾರು ಏಳೆಂಟು ಗಂಟೆಗಳ ಕಾಲ ಅಮಲಿನ ಗುಂಗಿನಲ್ಲಿ ಇರಬಹುದು. ಆ ಸಮಯದಲ್ಲಿ ಇಹಲೋಕದ ನೋವು, ಕಷ್ಟ ಒತ್ತಡಗಳಿರದೆ ಎಂಜಾಯ್ ಮಾಡಬಹುದು ಎಂಬುದಾಗಿದೆ.

ಡಾ. ಶ್ರೀನಿವಾಸ ಭಟ್ ಉಂಡಾರು,

ಖ್ಯಾತ ಮನೋರೋಗ ತಜ್ಞ ಹಾಗೂ ಮನೋವೈದ್ಯ ಶಾಸ್ತ್ರ ಪ್ರಾಧ್ಯಾಪಕ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿ, ದೇರಳಕಟ್ಟೆ.

ಸಾಮಾಜಿಕ ಆಂದೋಲನ ಬಹು ಅಗತ್ಯ

ಈ ಡ್ರಗ್ಸ್ ಮಾಫಿಯಾವನ್ನು ನಿಯಂತ್ರಿಸಲು ಸಾಮಾಜಿಕ ಆಂದೋಲನದ ಅಗತ್ಯವಿದೆ. ನಮ್ಮ ಆರೋಗ್ಯವನ್ನು ಹಾಳು ಮಾಡುವಂತಹ ವೈರಸ್ (ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ, ಪ್ರಸ್ತುತ ಕೊರೋನ) ಕಾಯಿಲೆಗಳ ವಿರುದ್ಧ ಯಾವ ರೀತಿಯಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತದೆಯೋ ಅದಕ್ಕಿಂತಲೂ ಬೃಹತ್ತಾದ ಸರ್ವ ಜನರೂ ಪಾಲ್ಗೊಳ್ಳುವ ಆಂದೋಲನ, ಅಭಿಯಾನ ಡ್ರಗ್ಸ್ ವಿರುದ್ಧ ನಡೆಯಬೇಕಾಗಿದೆ. ಮಾದಕ ವ್ಯಸನಗಳ ಕುರಿತಂತೆ ನಾನು ಸಾಕಷ್ಟು ಪೊಲೀಸರು, ವಕೀಲರನ್ನು ಭೇಟಿಯಾಗುವುದರಿಂದ ತಿಳಿದುಕೊಂಡ ಪ್ರಮುಖ ವಿಚಾರವೆಂದರೆ, ಬಹುತೇಕ ಅಪರಾಧ ಕೃತ್ಯಗಳ ಹಿಂದೆ ಈ ಡ್ರಗ್ಸ್‌ನ ಕೈವಾಡವಿರುವುದು. ಪೋಷಕರು ಮಕ್ಕಳಿಗೆ ಅತಿಯಾದ ಶಿಸ್ತಿನ ಬದಲು ಪ್ರೀತಿಯ ಜತೆಗೆ ಕಾಳಜಿ, ಅವರಿಗಾಗಿ ಒಂದಿಷು್ಟ ಸಮಯವನ್ನೂ ಮೀಸಲಿಡಬೇಕು.

ಪ್ರೊ.ಹಿಲ್ಡಾ ರಾಯಪ್ಪನ್, ನಿರ್ದೇಶಕರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಮತ್ತು ಮುಖ್ಯಸ್ಥರು, ಡಿ ಎಡಿಕ್ಷನ್ ಸೆಂಟರ್

ನಾನೂ ಹೀಗೆ ಲೈಫ್ ಎಂಜಾಯ್ ಮಾಡಬೇಕೆಂಬ ತವಕದಲ್ಲಿಯೇ ಈ ಗೀಳಿಗೆ ಬಿದ್ದವ. ಅದೃಷ್ಟವಶಾತ್ ನಾನು ಈ ಗೀಳಿನಿಂದ ಮೂರು ವರ್ಷಗಳ ಅವಧಿಯಲ್ಲೇ ಹೊರಬಂದೆ. ಇದರ ಒಳ ಹೊರಗು, ಇದರ ಕಷ್ಟ ನಷ್ಟ ಹಾಗೂ ಅಪಾಯಗಳ ಬಗ್ಗೆ ಸಾಕಷ್ಟು ಅರಿತುಕೊಂಡಿರುವುದರಿಂದಲೇ ಇಂದು ನಾನು ಈ ಬಗ್ಗೆ ನನ್ನಂತಹ ಯುವ ಮನಸ್ಸುಗಳಿಗೆ ಇದರ ಅಪಾಯದ ಬಗ್ಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡುತ್ತಿದ್ದೇನೆ.

ಮುನಾಫ್, ಬೆಳ್ತಂಗಡಿ ನಿವಾಸಿ (ಹೆಸರು ಬದಲಿಸಲಾಗಿದೆ)

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News