ಆನ್‍ಲೈನ್ ಮದ್ಯ ಮಾರಾಟ: ಅಬಕಾರಿ ಆಯುಕ್ತರ ನೇತೃತ್ವದಲ್ಲಿ ಅಧ್ಯಯನಕ್ಕೆ ಸಮಿತಿ ರಚನೆ- ಸಚಿವ ನಾಗೇಶ್

Update: 2020-09-01 13:20 GMT

ಬೆಂಗಳೂರು, ಸೆ. 1: ‘ಆನ್‍ಲೈನ್’ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಅಧ್ಯಯನ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ನಗರದ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಆನ್‍ಲೈನ್ ಮದ್ಯ ಮಾರಾಟಕ್ಕೆ ಗಂಭೀರ ಚಿಂತನೆ ನಡೆಸಿದೆ. ಆದರೆ, ಈ ಬಗ್ಗೆ ಸಾಧಕ-ಬಾಧಕಗಳ ಅಧ್ಯಯನ ಅಗತ್ಯವಿದೆ ಎಂದು ಹೇಳಿದರು.

ಆನ್‍ಲೈನ್ ಮೂಲಕ ಮದ್ಯ ಮಾರಾಟ ವಿಚಾರವಾಗಿ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದು, ಅಧಿಕಾರಿಗಳು ವರದಿ ನೀಡಿದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.

ಈಗಾಗಲೇ ಅಧಿಕಾರಿಗಳಿಗೆ ಶೀಘ್ರವೇ ವರದಿ ನೀಡಲು ಸೂಚನೆ ನೀಡಿದ್ದು, ವರದಿ ಬಂದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು, ಆನ್‍ಲೈನ್‍ನಲ್ಲಿ ಮದ್ಯ ಆರ್ಡರ್ ಮಾಡಿದವರ ವಯಸ್ಸು ಎಷ್ಟು? ಯಾರು ಆರ್ಡರ್ ಮಾಡುತ್ತಿದ್ದಾರೆಂಬ ಮಾಹಿತಿಯೂ ಸೇರಿದಂತೆ ಎಲ್ಲವನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ ಎಂದರು.

ಸಾರ್ವಜನಿಕವಾಗಿ ಮದ್ಯ ಖರೀದಿಸಲು ಕೆಲವರು ಹಿಂಜರಿಯುತ್ತಾರೆ. ಮದ್ಯದಂಗಡಿಗೆ ಹೋಗಲು ಮುಜುಗರ ಪಡುತ್ತಿದ್ದಾರೆ. ಅಂತಹವರಿಗೆ ಆನ್‍ಲೈನ್ ಮದ್ಯ ಮಾರಾಟದಿಂದ ಅನುಕೂಲವಾಗಲಿದೆ ಎಂದ ಅವರು, ತಜ್ಞರು, ಬುದ್ಧಿಜೀವಿಗಳು ಸೇರಿದಂತೆ ಎಲ್ಲರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದರು.

ಆದಾಯ ಹೆಚ್ಚಳ ನಿರೀಕ್ಷೆ: ಕ್ಲಬ್, ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಆರಂಭದಿಂದ ರಾಜ್ಯದ ಅಬಕಾರಿ ಆದಾಯ ದ್ವಿಗುಣಗೊಳ್ಳುವ ವಿಶ್ವಾಸವಿದೆ ಎಂದ ಅವರು, ನಾಲ್ಕೈದು ತಿಂಗಳಿಂದ ಮುಚ್ಚಿದ್ದ ಪಬ್, ಕ್ಲಬ್ ಇಂದಿನಿಂದ ಆರಂಭವಾಗುತ್ತಿದ್ದು, ಊಟೋಪಚಾರದೊಂದಿಗೆ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಪ್ರತಿನಿತ್ಯ 80 ಕೋಟಿ ರೂ.ಆದಾಯ ಬರುತ್ತಿದ್ದು, ಇದೀಗ ಬಾರ್ ಆಂಡ್ ರೆಸ್ಟೋರೆಂಟ್‍ಗಳಿಗೆ ಅವಕಾಶ ನೀಡಿರುವುದರಿಂದ ಈಗ ಮತ್ತೆ ಅದು ಶೇ.50 ಆದಾಯ ಜಾಸ್ತಿಯಾಗುವ ನಿರೀಕ್ಷೆ ಇದೆ. 2019-20ರಲ್ಲಿ 20,900 ಸಾವಿರ ಕೋಟಿ ರೂ.ಆದಾಯ ಗಳಿಸುವ ಗುರಿ ಇತ್ತು. ಇದೀಗ 22,700 ಕೋಟಿ ರೂ.ಆದಾಯದ ಗುರಿ ಇದೆ. ಆದರೆ, ಸುದೀರ್ಘ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದ ಆದಾಯ ಬರುವ ಬಗ್ಗೆ ಇನ್ನೂ ಸಂಶಯವಿದೆ ಎಂದರು.

ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ಆರಂಭಿಸಲು ಪರವಾನಿಗೆ ನೀಡಬೇಕೆಂಬ ಬೇಡಿಕೆ ಇದೆ. ಎಂಎಸ್‍ಐಎಲ್‍ಗೆ ಹೊಸದಾಗಿ ಪರವಾನಿಗೆ ನೀಡುತ್ತಿದ್ದು, ಉಳಿದಂತೆ ಬೇರೆ ಯಾವುದೇ ಪರವಾನಿಗೆ ನೀಡುತ್ತಿಲ್ಲ ಎಂದು ನಾಗೇಶ್ ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಜಂಟಿ ಕಾರ್ಯಾಚರಣೆ

ಮಾದಕ ದ್ರವ್ಯ (ಡ್ರಗ್ಸ್) ದಂಧೆ ವಿಚಾರ ಅಬಕಾರಿ ಇಲಾಖೆ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯ ಗಮನ ತರುವ ಕೆಲಸ ಮಾಡುತ್ತೇವೆ. ಪೊಲೀಸ್ ಅಧಿಕಾರಿಗಳ ಜೊತೆ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆಗೆ ಚಿಂತನೆ ನಡೆಯುತ್ತಿದೆ. ಸಿಸಿಬಿ ಮುಖ್ಯಸ್ಥರೊಂದಿಗೆ ಹಾಗೂ ನಗರ ಪೊಲೀಸ್ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಈ ಸಂಬಂಧ ಶೀಘ್ರವೇ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News