ಆಸ್ಟ್ರೇಲಿಯ ಪತ್ರಕರ್ತೆಯನ್ನು ಆರೋಪವಿಲ್ಲದೆ ಬಂಧನದಲ್ಲಿಟ್ಟ ಚೀನಾ: ವಿವರ ಒದಗಿಸಲು ನಕಾರ

Update: 2020-09-01 16:08 GMT

ಬೀಜಿಂಗ್, ಸೆ. 1: ಚೀನಾದ ಸರಕಾರಿ ಟಿವಿಯೊಂದರಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಆಸ್ಟ್ರೇಲಿಯದ ಪತ್ರಕರ್ತೆಯೊಬ್ಬರನ್ನು ಬಂಧಿಸಿದೆ. ಅವರನ್ನು ಎರಡು ವಾರಗಳ ಹಿಂದೆಯೇ ಯಾವುದೇ ಆರೋಪವನ್ನು ಹೊರಿಸದೆ ಬಂಧಿಸಲಾಗಿದೆಯಾದರೂ, ವಿವರಗಳನ್ನು ನೀಡಲು ಚೀನಾ ಮಂಗಳವಾರ ನಿರಾಕರಿಸಿದೆ.

ಆಸ್ಟ್ರೇಲಿಯದ ಪತ್ರಕರ್ತೆಯನ್ನು ಚೀನಾದ ಇಂಗ್ಲಿಷ್ ಭಾಷೆಯ ಸರಕಾರಿ ಟಿವಿ ಸಿಜಿಟಿಎನ್‌ನಲ್ಲಿ ಕೆಲಸ ಮಾಡುತ್ತಿರುವ ಚೆಂಗ್ ಲೀ ಎಂದು ಗುರುತಿಸಲಾಗಿದೆ.

ಅವರು ಕನಿಷ್ಠ ಆಗಸ್ಟ್ 14ರಿಂದಲೇ ಬಂಧನದಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಅವರ ಬಂಧನಕ್ಕೆ ಚೀನಾವು ಆಸ್ಟ್ರೇಲಿಯದ ರಾಜತಾಂತ್ರಿಕರಿಗೆ ಯಾವುದೇ ಕಾರಣ ಒದಗಿಸಿಲ್ಲ.

ವ್ಯಾಪಾರ, ಚೀನಾದ ತಂತ್ರಜ್ಞಾನದಿಂದ ಎದುರಾಗಿರುವ ಭದ್ರತಾ ಬೆದರಿಕೆ ಮತ್ತು ಕೊರೋನ ವೈರಸ್ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆಯಾಗಬೇಕೆಂಬ ಆಸ್ಟ್ರೇಲಿಯದ ಒತ್ತಾಯ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧ ಈಗಾಗಲೇ ಉದ್ವಿಗ್ನಗೊಂಡಿದ್ದು, ಪ್ರಸಕ್ತ ಘಟನೆಯು ಬೆಂಕಿಗೆ ತುಪ್ಪ ಎರೆದಂತಾಗಿದೆ.

ಚೀನಾ ಸಂಜಾತ ಪತ್ರಕರ್ತೆಯು ಸಿಜಿಟಿಎನ್‌ನಲ್ಲಿ ಜನಪ್ರಿಯ ವಾಣಿಜ್ಯ ಸುದ್ದಿ ನಿರೂಪಕಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News