ಹಿಂದುತ್ವ ರಾಜಕೀಯಕ್ಕೆ ತಿರುಗೇಟು ನೀಡಬಲ್ಲ ನಾಯಕ ಲೋತನ್ ರಾಮ್ ನಿಶಾದ್

Update: 2020-09-02 12:13 GMT
ಪೋಟೊ ಕೃಪೆ: twitter.com

ಉತ್ತರ ಪ್ರದೇಶದ ಸಾಮಾಜಿಕ ನ್ಯಾಯ ರಾಜಕೀಯದಲ್ಲಿಂದು ಲೋತನ್ ರಾಮ್ ನಿಶಾದ್ ಅವರ ಅನುಪಸ್ಥಿತಿ ಸೃಷ್ಟಿಯಾಗಿದೆ. ಕೇವಲ ಒಂದೇ ವಾರದಲ್ಲಿ ಬಿಜೆಪಿಯ ಹಿಂದುತ್ವಕ್ಕೆ ಉತ್ತರವಾಗಬಲ್ಲ ನಿಶಾದ್ ರ ರಾಜಕೀಯ ಮತ್ತು ವೈಚಾರಿಕತೆಯ ಭರವಸೆಗೆ ಅವರದೇ ಸಮಾಜವಾದಿ ಪಕ್ಷ ಮತ್ತು ಅದರ ನಾಯಕ ಅಖಿಲೇಶ್ ಬಲವಾದ ಆಘಾತವನ್ನು ನೀಡಿದ್ದಾರೆ. ಈ ಪ್ರಮುಖ ಹಿಂದಿ ಭಾಷಿಕ ರಾಜ್ಯದಲ್ಲಿ ಪೆರಿಯಾರ್ ಶೈಲಿಯ ನಾಸ್ತಿಕತೆಗೆ ರಾಜಕೀಯ ಅವಕಾಶವಿಲ್ಲ ಎನ್ನುವುದನ್ನೂ ಇದು ತೋರಿಸಿದೆ.

ನಿಶಾದ್ ಕಳೆದ ವಾರದವರೆಗೂ ಎಸ್‌ಪಿಯ ಇತರ ಹಿಂದುಳಿದ ವರ್ಗಗಳ (ಒಬಿಸಿ) ಘಟಕದ ರಾಜ್ಯ ಮುಖ್ಯಸ್ಥರಾಗಿದ್ದರು. ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಶ್ರೀರಾಮ ಮತ್ತು ರಾಮಮಂದಿರದ ಬಗ್ಗೆ ನಿಶಾದ್ ರ ಅಭಿಪ್ರಾಯವನ್ನು ಕೋರಲಾಗಿತ್ತು. ಸಮಾಜವಾದಿಯಾಗಿ ಲೋಹಿಯಾ ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ನಿಶಾದ್ ನಾಸ್ತಿಕರಾಗಿದ್ದು,ಧರ್ಮ ಮತ್ತು ರಾಜಕೀಯ ಪ್ರತ್ಯೇಕವಾಗಿರಬೇಕು ಎಂಬ ವಾದದ ಬೆಂಬಲಿಗರಾಗಿದ್ದಾರೆ. ಹೀಗಾಗಿ ಅವರು ‘ರಾಮ ಅಥವಾ ಇನ್ಯಾವುದೇ ದೇವರನ್ನು ನಾನು ನಂಬುವುದಿಲ್ಲ. ರಾಮ ಕಲ್ಪಿತ ಪಾತ್ರವಾಗಿದ್ದಾನೆ. ಭಾರತದಲ್ಲಿ ಕೆಳಜಾತಿಗಳ ಜನರ ಜೀವನಾವಕಾಶಗಳು ಹೆಚ್ಚಲು ಯಾವುದೇ ಕಲ್ಪನೆಯ ದೇವರು ಅಥವಾ ದೇವಿ ಕಾರಣರಲ್ಲ,ಬದಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜ್ಯೋತಿಬಾ ಫುಲೆ ಅವರಂತಹ ನಾಯಕರಿಂದಾಗಿ ಒಬಿಸಿಗಳು ಮತ್ತು ಎಸ್‌ಸಿ-ಎಸ್‌ಟಿಗಳು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆದಿದ್ದಾರೆ ’ಎಂದು ಉತ್ತರಿಸಿದ್ದರು.

ಹಿಂದುತ್ವಕ್ಕೆ ಉತ್ತರ

 ಹಿಂದುತ್ವ ರಾಜಕೀಯಕ್ಕೆ ಉತ್ತರ ಅಥವಾ ಪ್ರತಿ ವ್ಯಾಖ್ಯಾನ ನಿಶಾದ್ ಬಳಿಯಲ್ಲಿದೆ, ಆದರೆ ಅಖಿಲೇಶ್, ಕಾಂಗ್ರೆಸ್‌ನ ರಾಹುಲ್‌ಗಾಂಧಿ ಮತ್ತು ಬಿಎಸ್‌ಪಿಯ ಮಾಯಾವತಿಯಂತಹ ನಾಯಕರು ಅದನ್ನು ಆಲಿಸುತ್ತಾರೆಯೇ ಎನ್ನುವುದು ಮುಖ್ಯಪ್ರಶ್ನೆಯಾಗಿದೆ. ನಿಶಾದ್ ರ ಪರಿಕಲ್ಪನೆ ಅರ್ಥಹೀನ ಎಂದು ಹೇಳಲಾಗದಷ್ಟು ದಿಟ್ಟವಾಗಿದೆ ಅಥವಾ ಬಿಜೆಪಿ-ಆರ್‌ಎಸ್‌ಎಸ್ ಕೂಟದ ಸೈದ್ಧಾಂತಿಕ ವಿಜಯವು ಪರ್ಯಾಯ ರಾಜಕೀಯ-ಸೈದ್ಧಾಂತಿಕ ಸಾಧ್ಯತೆಗಳನ್ನು ಕಲ್ಪಿಸಲೂ ಆಗದಷ್ಟು ಪ್ರಭಾವವನ್ನು ಈ ರಾಜಕಾರಣಿಗಳ ಮೇಲೆ ಬೀರಿದೆ ಎನ್ನುವುದನ್ನು ಕಳೆದ ವಾರದ ರಾಜಕೀಯ ಬೆಳವಣಿಗೆಗಳು ಸಾಬೀತುಗೊಳಿಸಿವೆ. ನಿಶಾದ್ ರ ಹೇಳಿಕೆಯ ನಂತರದ ಘಟನಾವಳಿಗಳು ಚುನಾವಣಾ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಸಾಮಾಜಿಕ ನ್ಯಾಯದ ರಾಜಕೀಯದ ಪುನಃಶ್ಚೇತನಕ್ಕೆ , ಕನಿಷ್ಠ ಸದ್ಯೋಭವಿಷ್ಯದಲ್ಲಂತೂ ಯಾವುದೇ ಅವಕಾಶವಿಲ್ಲ ಎನ್ನುವುದನ್ನು ತೋರಿಸಿವೆ. ಸುಮಾರು ಮೂರು ದಶಕಗಳ ಹಿಂದೆ ‘ಮಿಲೆ ಮುಲಾಯಂ ಕಾನ್ಶಿರಾಮ, ಹವಾ ಮೆ ಉಡ್‌ಗಯೆ ಜೈಶ್ರೀರಾಮ ’ ಎಂಬ ಘೋಷಣೆಯನ್ನು ಮೊಳಗಿಸುವ ಮೂಲಕ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟವು ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ವಿಜಯವನ್ನು ಸಾಧಿಸಿದ್ದ ಉತ್ತರ ಪ್ರದೇಶದಲ್ಲಿ ನಿಶಾದ್ ರ ಅಭಿಪ್ರಾಯಗಳಿಗೆ ವ್ಯಕ್ತವಾಗಿರುವ ಪ್ರತಿಕ್ರಿಯೆ ಅಸಂಬದ್ಧ ಮತ್ತು ತೀವ್ರವಾಗಿದೆ. ಬಾಬ್ರಿ ಮಸೀದಿ ನೆಲಸಮದ ಬಳಿಕ ರಾಜ್ಯದಲ್ಲಿ ತೀವ್ರ ಕೋಮು ಭಾವನೆ ಸೃಷ್ಟಿಯಾಗಿದ್ದರೂ 1993ರ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದ ಈ ಘೋಷಣೆಯು ತಡೆದಿತ್ತು.

ರಾಮ ಮತ್ತು ರಾಮಮಂದಿರ ಕುರಿತು ನಿಶಾದ್ ರ ಹೇಳಿಕೆಯು ಉತ್ತರ ಪ್ರದೇಶದ ರಾಜಕೀಯ ವಲಯಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಬಿಜೆಪಿಯು ಅಖಿಲೇಶ್  ಯಾದವ್  ಅವರಿಂದ ಸ್ಪಷ್ಟನೆಯನ್ನು ಕೇಳಿದ್ದರೆ ಹಲವಾರು ಮಾಧ್ಯಮ ವೇದಿಕೆಗಳು ನಾಸ್ತಿಕನಾಗಿರುವುದು ಧರ್ಮನಿಂದೆ ಎನ್ನುವಂತೆ ಈ ಬೆಳವಣಿಗೆಯನ್ನು ವರದಿ ಮಾಡಿವೆ. ಇವೆಲ್ಲದರಿಂದ ಕಂಗಾಲಾಗಿದ್ದ ಎಸ್‌ಪಿ ನಿಷಾದ್ ರನ್ನು ಹುದ್ದೆಯಿಂದ ತೆಗೆದುಹಾಕಿದೆ. ಅವರನ್ನು ಹುದ್ದೆಯಿಂದ ವಜಾಗೊಳಿಸಲು ಯಾವುದೇ ಕಾರಣವನ್ನು ಪಕ್ಷವು ನೀಡಿಲ್ಲವಾದರೂ ಅವರ ಹೇಳಿಕೆ ಪಕ್ಷದ ಉನ್ನತ ನಾಯಕತ್ವಕ್ಕೆ ಅಸಮಾಧಾನವನ್ನುಂಟು ಮಾಡಿದೆ ಎನ್ನುವುದು ಯಾರೂ ಊಹಿಸಲಾಗದ ವಿಷಯವೇನಲ್ಲ.

ಬಿಜೆಪಿಯ ಅನುಕರಣೆ

ಇತ್ತೀಚಿಗೆ ಎಸ್‌ಪಿಯು ಹೆಚ್ಚಿನ ಸೈದ್ಧಾಂತಿಕವಾಗಿ ನಿರ್ಣಾಯಕವಾಗಿರುವ ವಿಷಯಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಮಾದರಿಯನ್ನೇ ಅನುಸರಿಸುತ್ತಿದೆ. 370ನೇ ವಿಧಿಯ ರದ್ದತಿ, ತ್ರಿವಳಿ ತಲಾಖ್ ಮಸೂದೆ, ಮೇಲ್ಜಾತಿಗಳಿಗೆ ಮೀಸಲಾತಿ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಷಯಗಳಲ್ಲಿ ಅದು ಬಿಜೆಪಿಯನ್ನು ಬೆಂಬಲಿಸಿತ್ತು.

ಕಾಂಗ್ರೆಸ್ ಮತ್ತು ಬಿಎಸ್‌ಪಿಗಳೂ ವಿಭಿನ್ನವಾಗಿಲ್ಲ. ಈ ವಿಷಯಗಳ ಕುರಿತು ಈ ಪಕ್ಷಗಳೂ ಸಮಾನ ಅಭಿಪ್ರಾಯಗಳನ್ನು ಹೊಂದಿವೆ. ಆದರೆ ಇವೆರಡು ಪಕ್ಷಗಳ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮಸುಕಾಗಿರುವಂತಿದೆ ಅಥವಾ ಮಾಯವಾಗಿರುವಂತಿದೆ ಅಥವಾ ಬಿಜೆಪಿ-ಆರೆಸ್ಸೆಸ್ ಕೂಟವು ಉತ್ತರ ಪ್ರದೇಶ ರಾಜಕೀಯದಲ್ಲಿ ಮೂಡಿಸಿರುವ ಛಾಪು ಇತರ ಪಕ್ಷಗಳನ್ನು ಅವು ಹಿಂದುತ್ವ ಬ್ರಿಗೇಡ್‌ನ ಸೈದ್ಧಾಂತಿಕ ನಿಲುವುಗಳ ವಿರುದ್ಧ ಒಂದೇ ಒಂದು ಶಬ್ಧವನ್ನು ಉಸುರಲಾಗದಷ್ಟು ದುರ್ಬಲಗೊಳಿಸಿದೆ.

 ಎಸ್‌ಪಿ ಮತ್ತು ಬಿಎಸ್‌ಪಿ ಯಾವ ಮಟ್ಟಕ್ಕೆ ಹೋಗಿವೆಯೆಂದರೆ ಬ್ರಾಹ್ಮಣರ ಮತಗಳನ್ನು ಗಳಿಸುವ ಪ್ರಯತ್ನವಾಗಿ ಮಹರ್ಷಿ ಪರಶುರಾಮರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸುವುದಾಗಿ ಭರವಸೆಗಳನ್ನು ನೀಡುತ್ತಿವೆ. ಮೂರು ದಶಕಗಳಿಗೂ ಕಡಿಮೆ ಅವಧಿಯಲ್ಲಿ ಬಿಜೆಪಿಯು ತನ್ನ ವಿರೋಧಿ ಸಿದ್ಧಾಂತಗಳನ್ನು ಯಶಸ್ವಿಯಾಗಿ ಮಣ್ಣುಮುಕ್ಕಿಸಿದೆ ಮತ್ತು ‘ಹವಾ ಮೆ ಉಡ್‌ಗಯೆ ಜೈಶ್ರೀರಾಮ’ ಎಂಬಂತಹ ಘೋಷಣೆಯನ್ನು ಯಾವುದೇ ಎಸ್‌ಪಿ ಮತ್ತು ಬಿಎಸ್‌ಪಿ ನಾಯಕ ಮನಸ್ಸಿನಲ್ಲಿಯೂ ಹೇಳಿಕೊಳ್ಳುವ ಧೈರ್ಯ ಮಾಡುತ್ತಿಲ್ಲ. ನಾಸ್ತಿಕನಾಗಿರುವ ಬಗ್ಗೆ ಅವರ ವೈಯಕ್ತಿಕ ನಂಬಿಕೆಗಳು ಸಹ ಪಕ್ಷದಿಂದ ಅವರ ಉಚ್ಚಾಟನೆ/ವಜಾಕ್ಕೆ ಕಾರಣವಾಗಬಹುದು. ನಾಸ್ತಿಕವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರ ಆದರ್ಶಗಳನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ಎಸ್‌ಪಿಯಲ್ಲಿಯೇ ನಿಶಾದ್ ರ ಪದಚ್ಯುತಿ ಸಂಭವಿಸಿದೆ.

ನಿಶಾದ್ : ಸಮಾಜವಾದದ ಉತ್ಪನ್ನ

ನಿಶಾದ್ ಈ ಲೇಖಕನೊಂದಿಗೆ ಮಾತುಕತೆ ಸಂದರ್ಭದಲ್ಲಿ ತಾನು ಧರ್ಮವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬರಿಗೂ ತಮ್ಮದೇ ಆದ ಧಾರ್ಮಿಕ ಅಭಿಪ್ರಾಯಗಳನ್ನು ಹೊಂದಿರುವ ಹಕ್ಕು ಇದೆ ಮತ್ತು ಅದರಲ್ಲಿ ನಾಸ್ತಿಕನಾಗಿರುವ ಹಕ್ಕು ಸೇರಿದೆ ಎಂದ ಅವರು,ಸಂವಿಧಾನದ ವಿಧಿ 25ನ್ನು ಬೆಟ್ಟು ಮಾಡಿದರು.

ಬಿಜೆಪಿ-ಆರೆಸ್ಸೆಸ್ ಕೂಟದ ಮೇಲ್ಜಾತಿಗಳ ಆಧಿಪತ್ಯದ ಹಿಂದುತ್ವ ಸಿದ್ಧಾಂತಕ್ಕೆ ವೈಚಾರಿಕ ತಿರುಗೇಟು ನೀಡುತ್ತಿದ್ದರು ಎನ್ನುವುದು ನಿಶಾದ್ ರ ‘ಅಪರಾಧ ’ವಾಗಿತ್ತು. 

 1971, ಮಾ.8ರಂದು ಘಾಜಿಪುರ ಜಿಲ್ಲೆಯ ಬಡಕುಟುಂಬದಲ್ಲಿ ಜನಿಸಿದ್ದ ನಿಶಾದ್ ಎಸ್‌ಪಿ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿ ರಾಜ್ಯ ಪದಾಧಿಕಾರಿಯಾಗುವ ಮಟ್ಟಕ್ಕೆ ಬೆಳೆದಿದ್ದರು. 90ರ ದಶಕದಲ್ಲಿ ಬನಾರಸ್ ಹಿಂದು ವಿವಿಯ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ಸಮಾಜವಾದಿ ಮತ್ತು ಸಾಮಾಜಿಕ ನ್ಯಾಯದ ರಾಜಕೀಯವು ಅವರನ್ನು ಆಕರ್ಷಿಸಿತ್ತು. ಮಂಡಲ್ ವರದಿಯನ್ನು ಮತ್ತೆ ಮುನ್ನೆಲೆಗೆ ತಂದಿದ್ದ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ರಾಜಕೀಯ ವೈಚಾರಿಕತೆಯಿಂದ ನಿಶಾದ್ ಪ್ರಭಾವಿತರಾಗಿದ್ದರು. ಸಿಂಗ್ ಅನಾರೋಗ್ಯಕ್ಕೆ ಗುರಿಯಾಗಿ ಅವರ ಜೀವರಕ್ಷಣೆಗ ಮೂತ್ರಪಿಂಡ ಕಸಿ ಅಗತ್ಯವಾಗಿದ್ದಾಗ ತನ್ನದೇ ಮೂತ್ರ್ರಪಿಂಡವನ್ನು ನೀಡಲು ನಿಶಾದ್ ಮುಂದಾಗಿದ್ದರು. ಆದರೆ ಸಿಂಗ್ ಅವರಿಗೆ ಮೂತ್ರಪಿಂಡ ಕಸಿ ನಡೆಯಲೇ ಇಲ್ಲ. ನಿಷಾದ್ ಸುಮಾರು 16 ವರ್ಷಗಳ ಕಾಲ ‘ನಿಷಾದ ಜ್ಯೋತಿ ’ ಮ್ಯಾಗಝಿನ್‌ನ ಸಂಪಾದಕರಾಗಿದ್ದು,ಇದು ಅವರಿಗೆ ಉತ್ತರ ಪ್ರದೇಶದ ಮೀನುಗಾರ ಸಮುದಾಯದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಹಲವಾರು ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಅವರು ಒಬಿಸಿಗಳ ಏಳ್ಗೆಗಾಗಿ ದುಡಿದಿದ್ದಾರೆ.

ನಿಶಾದ್ ರ ಜನಪ್ರಿಯತೆಯನ್ನು ಗಮನಿಸಿದ್ದ ಅಖಿಲೇಶ್ ಭಾರೀ ಸಂಖ್ಯೆಯಲ್ಲಿ ಬಿಜೆಪಿಗೆ ಸೇರಿರುವ ಒಬಿಸಿಗಳನ್ನು ಪಕ್ಷಕ್ಕೆ ಮರಳಿ ಸೆಳೆದುಕೊಳ್ಳುವ ಹೊಣೆಗಾರಿಕೆಯನ್ನು ಅವರಿಗೆ ಒಪ್ಪಿಸಿದ್ದರು. ಈ ವರ್ಷದ ಮಾರ್ಚ್ 16ರಂದು ಎಸ್‌ಪಿಯ ಒಬಿಸಿ ರಾಜ್ಯಘಟಕದ ಮುಖ್ಯಸ್ಥರಾಗಿ ನಿಶಾದ್ ನೇಮಕಗೊಂಡಿದ್ದರು. ಆದರೆ ಕೇವಲ ಐದೇ ತಿಂಗಳಲ್ಲಿ ನಿಷಾದರನ್ನು ಒಬಿಸಿಗಳ ಮಧ್ಯೆ ಅವರನ್ನು ಜನಪ್ರಿಯರನ್ನಾಗಿಸಿದ್ದ ಅವೇ ಶಬ್ಧಗಳನ್ನು ಹೇಳಿದ್ದಕ್ಕಾಗಿ ಹುದ್ದೆಯಿಂದ ವಜಾಗೊಳಿಸಲಾಗಿದೆ.

ತಾನು ಎಸ್‌ಪಿಯಲ್ಲಿಯೇ ಮುಂದುವರಿಯುತ್ತೇನೆ ಮತ್ತು ಅಖಿಲೇಶ್ ರನ್ನು ಮತ್ತೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿಸಲು ಶ್ರಮಿಸುತ್ತೇನೆ ಎಂದು ನಿಷಾದ ಹೇಳಿದ್ದಾರೆ. ಆದರೆ ಇಂತಹ ಸೈದ್ಧಾಂತಿಕ ಗೊಂದಲಲ್ಲಿರುವ ಅಖಿಲೇಶ್ ಬಿಜೆಪಿಯ ಸಿದ್ಧಾಂತಕ್ಕೆ ಸವಾಲು ಒಡ್ಡಬಲ್ಲರೇ? ಹೌದು ಎನ್ನಲು ಕಷ್ಟವಾಗುತ್ತದೆ.

(ಲೇಖಕರು ‘ಇಂಡಿಯಾ ಟುಡೇ’ ಹಿಂದಿ ಮ್ಯಾಗಝಿನ್‌ನ ಮಾಜಿ ವ್ಯವಸ್ಥಾಪಕ ಸಂಪಾದಕರು)

Writer - ದಿಲೀಪ್ ಮಂಡಲ್ , theprint.in

contributor

Editor - ದಿಲೀಪ್ ಮಂಡಲ್ , theprint.in

contributor

Similar News