×
Ad

ಪಾಸ್‌ಪೋರ್ಟ್ ವಿನ್ಯಾಸ ಬದಲಿಸಲು ತೈವಾನ್ ನಿರ್ಧಾರ

Update: 2020-09-02 21:42 IST

 ತೈಪೆ (ತೈವಾನ್), ಸೆ. 2: ತೈವಾನ್ ಹೆಸರಿಗೆ ಹೆಚ್ಚಿನ ಪ್ರಾಮುಖ್ಯ ನೀಡುವುದಕ್ಕಾಗಿ ದೇಶದ ಪಾಸ್‌ಪೋರ್ಟ್‌ನ ವಿನ್ಯಾಸ ಬದಲಿಸಲು ನಿರ್ಧರಿಸುವುದಾಗಿ ತೈವಾನ್ ಬುಧವಾರ ತಿಳಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ತೈವಾನ್‌ನ ಪಾಸ್‌ಪೋರ್ಟನ್ನು ಚೀನಾದ ಪಾಸ್‌ಪೋರ್ಟ್ ಎಂಬುದಾಗಿ ತಪ್ಪಾಗಿ ತಿಳಿಯುವುದು ಹಾಗೂ ತೈವಾನ್ ಮೇಲೆ ಅಧಿಕಾರ ಸ್ಥಾಪಿಸಲು ಚೀನಾದ ಹೆಚ್ಚುತ್ತಿರುವ ಪ್ರಯತ್ನಗಳಿಂದ ರೋಸಿ ಹೋಗಿ ತಾನು ಈ ಕ್ರಮಕ್ಕೆ ಮುಂದಾಗಿರುವುದಾಗಿ ಅದು ಹೇಳಿದೆ.

ತೈವಾನ್‌ನ ಪಾಸ್‌ಪೋರ್ಟ್‌ಗಳಲ್ಲಿ ಅದರ ಅಧಿಕೃತ ಹೆಸರು ‘ರಿಪಬ್ಲಿಕ್ ಆಫ್ ಚೀನಾ’ ಎಂಬುದಾಗಿ ಬರೆಯಲಾಗಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲಿ ಅದರ ಪ್ರಜೆಗಳು ಬೇರೆ ದೇಶಗಳಿಗೆ ಹೋಗುವಾಗ ಸಮಸ್ಯೆಗಳನ್ನು ಎದುರಿಸಿದ್ದರು. ತೈವಾನ್ ಪಾಸ್‌ಪೋರ್ಟ್‌ಗಳ ಮೇಲ್ತುದಿಯಲ್ಲಿ ದೊಡ್ಡ ಇಂಗ್ಲಿಷ್ ಅಕ್ಷರಗಳಲ್ಲಿ ‘ರಿಪಬ್ಲಿಕ್ ಆಫ್ ಚೀನಾ’ ಹಾಗೂ ತಳದಲ್ಲಿ ‘ತೈವಾನ್’ ಎಂಬುದಾಗಿ ಬರೆಯಲಾಗಿದೆ.

ಹೊಸ ಮಾದರಿಯ ಪಾಸ್‌ಪೋರ್ಟ್‌ಗಳಿಂದ ‘ರಿಪಬ್ಲಿಕ್ ಆಫ್ ಚೀನಾ’ ಎಂಬ ದೊಡ್ಡ ಇಂಗ್ಲಿಷ್ ಅಕ್ಷರಗಳನ್ನು ತೆಗೆಯಲಾಗುವುದು. ಆದರೆ ಚೀನೀ ಅಕ್ಷರಗಳಲ್ಲಿರುವ ಈ ಹೆಸರು ಮುಂದುವರಿಯಲಿದೆ. ಜೊತೆಗೆ, ‘ತೈವಾನ್’ ಹೆಸರನ್ನು ದೊಡ್ಡ ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗುವುದು. ಮಾರ್ಪಾಡುಗೊಂಡ ಪಾಸ್‌ಪೋರ್ಟ್ ಜನವರಿಯಲ್ಲಿ ಚಲಾವಣೆಗೆ ಬರುವುದೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News