×
Ad

ಚೇತರಿಕೆಯ 4 ತಿಂಗಳ ಬಳಿಕವೂ ದೇಹದಲ್ಲಿ ಕೊರೋನ ಪ್ರತಿಕಾಯ: ಅಧ್ಯಯನ ವರದಿ

Update: 2020-09-02 21:46 IST

ರೇಕ್ಯವೀಕ್ (ಐಸ್‌ಲ್ಯಾಂಡ್), ಸೆ. 2: ಐಸ್‌ಲ್ಯಾಂಡ್ ದೇಶದಲ್ಲಿ ಗುಣ ಹೊಂದಿದ ಕೋವಿಡ್-19 ರೋಗಿಗಳ ಪೈಕಿ 90 ಶೇಕಡಕ್ಕೂ ಅಧಿಕ ಮಂದಿಯ ದೇಹಗಳಲ್ಲಿ ಕೊರೋನ ವೈರಸ್ ವಿರುದ್ಧದ ಪ್ರತಿಕಾಯಗಳ ಮಟ್ಟ ಹೆಚ್ಚಾಗಿದೆ ಹಾಗೂ ನಾಲ್ಕು ತಿಂಗಳವರೆಗೆ ಅದೇ ಮಟ್ಟದಲ್ಲಿ ಮುಂದುವರಿದಿದೆ ಎಂದು ಮಂಗಳವಾರ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.

 ಹಿಂದಿನ ಅಧ್ಯಯನಗಳಲ್ಲಿ, ರೋಗ ಕಾಣಿಸಿಕೊಂಡ ಬಳಿಕ, ಕೆಲವೇ ತಿಂಗಳುಗಳಲ್ಲಿ ಪ್ರತಿಕಾಯಗಳ ಮಟ್ಟವು ತೀವ್ರವಾಗಿ ಕುಸಿದಿರುವುದು ಗಮನಕ್ಕೆ ಬಂದಿತ್ತು. ಹಾಗಾಗಿ, ಸೋಂಕಿನಿಂದಾಗಿ ಲಭಿಸುವ ರೋಗನಿರೋಧಕ ಶಕ್ತಿಯ ಅವಧಿಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದವು.

 ಹೊಸ ಸಂಶೋಧನೆಯು ಮರುಸೋಂಕಿನ ಅಪಾಯಗಳು ಮತ್ತು ಲಸಿಕೆಯ ರಕ್ಷಿತಾವಧಿಯ ವಿಷಯದಲ್ಲಿ ಪರಿಣಾಮಗಳನ್ನು ಹೊಂದಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ನಡೆಸಿದ ‘ಡೀಕೋಡ್ ಜನೆಟಿಕ್ಸ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರಿ ಸ್ಟೀಫನ್‌ಸನ್ ಹೇಳಿದ್ದಾರೆ.

ಈ ಅಧ್ಯಯನವನ್ನು ಒಂದೇ ದೇಶದ ಒಂದೇ ಸಮುದಾಯದ ಜನರ ಮೇಲೆ ನಡೆಸಲಾಗಿದೆ. ಹಾಗಾಗಿ, ಜಗತ್ತಿನ ಇತರ ಭಾಗದಲ್ಲಿರುವ ಭಿನ್ನ ಸಮುದಾಯಗಳ ಜನರ ಮೇಲಿನ ಅಧ್ಯಯನದ ಫಲಿತಾಂಶವು ಒಂದೇ ಆಗಿರಬೇಕೇಂದೇನೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News