ಅಮೆರಿಕ: ಪೊಲೀಸರಿಂದ ಇನ್ನೋರ್ವ ನಿರಾಯುಧ ಕರಿಯ ವ್ಯಕ್ತಿಯ ಕೊಲೆ
ನ್ಯೂಯಾರ್ಕ್, ಸೆ. 3: ನ್ಯೂಯಾರ್ಕ್ ನಲ್ಲಿ ನಿರಾಯುಧ ಕರಿಯ ವ್ಯಕ್ತಿಯೊಬ್ಬರು ಪೊಲೀಸರ ಹಿಡಿತದಲ್ಲಿ ಮೃತಪಟ್ಟಿರುವ ಘಟನೆ ತಡವಾಗಿ ವರದಿಯಾಗಿದೆ. 41 ವರ್ಷದ ಡೇನಿಯಲ್ ಪ್ರೂಡ್‌ರ ಮುಖವನ್ನು ಪೊಲೀಸರು ಎರಡು ನಿಮಿಷಗಳಷ್ಟು ಕಾಲ ರಸ್ತೆಗೆ ಒತ್ತಿಹಿಡಿದ ಬಳಿಕ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದನ್ನು ಪೊಲೀಸರ ಬಾಡಿ ಕ್ಯಾಮರದ ದೃಶ್ಯಗಳು ತೋರಿಸಿವೆ.
ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಪ್ರೂಡ್ ಮಾರ್ಚ್ ತಿಂಗಳಲ್ಲಿ ರಸ್ತೆಯೊಂದರಲ್ಲಿ ನಗ್ನರಾಗಿ ಓಡುತ್ತಿದ್ದಾಗ ಪೊಲೀಸರು ಅವರಿಗೆ ತಲೆಯ ಮೇಲೆ ‘ಸ್ಪಿಟ್ ಹುಡ್’ ತೊಡಿಸಿದರು. ಬಂಧಿತರು ಪೊಲೀಸರಿಗೆ ಉಗಿಯುವುದನ್ನು ಅಥವಾ ಕಚ್ಚುವುದನ್ನು ತಡೆಯಲು ಅವರಿಗೆ ಸ್ಪಿಟ್‌ಹುಡ್ ತೊಡಿಸಲಾಗುತ್ತದೆ.
ಅವರು ಬಳಿಕ ಉಸಿರುಗಟ್ಟಿ ಮೃತಪಟ್ಟರು. ಆದರೆ, ಈ ಘಟನೆಯನ್ನು ಹಲವು ತಿಂಗಳ ಬಳಿಕ ಈಗಷ್ಟೇ ಬಹಿರಂಗಗೊಳಿಸಲಾಗಿದೆ. ಭಾರೀ ಪ್ರತಿಭಟನೆಗಳಿಗೆ ಕಾರಣವಾದ ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸುವ ಎರಡು ತಿಂಗಳ ಮೊದಲೇ ಪ್ರೂಡ್ ಸಾವು ಸಂಭವಿಸಿತ್ತು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೂಡ್ ಸಹೋದರ ಜೋ, ನನ್ನ ಸಹೋದರ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಮಾರ್ಚ್ 23ರಂದು ಪೊಲೀಸರಿಗೆ ಫೋನ್ ಮಾಡಿದೆ ಎಂದು ಹೇಳಿದರು.
‘‘ನಾನು ಪೊಲೀಸರಿಗೆ ಫೋನ್ ಮಾಡಿದ್ದು ಸಹಾಯ ಕೋರಲು, ಹೊಡೆದು ಕೊಲ್ಲಲು ಅಲ್ಲ’’ ಎಂದು ಅವರು ಹೇಳಿದರು. ಈ ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸರು ಅಮಾನತುಗೊಂಡಿಲ್ಲ.
ಪ್ರೂಡ್ ಕೊಲೆಯನ್ನು ಖಂಡಿಸಿ ಜನರು ಬುಧವಾರ ನ್ಯೂಯಾರ್ಕ್‌ನ ರೋಚೆಸ್ಟರ್ ನಗರದಲ್ಲಿ ಪ್ರತಿಭಟನೆ ನಡೆಸಿದರು.