ನವಾಲ್ನಿ ದೇಹದಲ್ಲಿ ನರ್ವ್ ಏಜಂಟ್ ಪತ್ತೆ: ಜರ್ಮನ್ ಸರಕಾರದ ಹೇಳಿಕೆ

Update: 2020-09-03 16:41 GMT

ಬರ್ಲಿನ್ (ಜರ್ಮನಿ), ಸೆ. 3: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ನೊವಿಚೊಕ್ ನರ್ವ್ ಏಜಂಟ್ ಎಂಬ ರಾಸಾಯನಿಕದ ಮೂಲಕ ವಿಷಪ್ರಾಶನ ಮಾಡಲಾಗಿದೆ ಎನ್ನುವುದು ವೈದ್ಯಕೀಯ ಪರೀಕ್ಷೆಗಳಿಂದ ಸಾಬೀತಾಗಿದೆ ಎಂದು ಜರ್ಮನ್ ಸರಕಾರ ಬುಧವಾರ ಹೇಳಿದೆ ಹಾಗೂ ರಶ್ಯ ಇದಕ್ಕೆ ವಿವರಣೆಗಳನ್ನು ನೀಡಬೇಕು ಎಂದಿದೆ.

ಈ ಅಪಾಯಕಾರಿ ರಾಸಾಯನಿಕವು ನರವ್ಯೂಹದ ಮೇಲೆ ಆಕ್ರಮಣ ಮಾಡಿ ಅವುಗಳನ್ನು ನಿಶ್ಚೇಷ್ಟಿತರನ್ನಾಗಿಸುತ್ತವೆ.

‘‘ಅಲೆಕ್ಸೀ ನವಾಲ್ನಿಯ ಮೇಲೆ ರಶ್ಯದಲ್ಲಿ ರಾಸಾಯನಿಕ ನರ್ವ್ ಏಜಂಟ್‌ವೊಂದರಿಂದ ದಾಳಿಯಾಗಿರುವುದು ಆಘಾತಕಾರಿ ಘಟನೆಯಾಗಿದೆ’’ ಎಂದು ಸರಕಾರದ ವಕ್ತಾರ ಸ್ಟೀಫನ್ ಸೈಬರ್ಟ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಈ ದಾಳಿಯನ್ನು ಸರಕಾರವು ಅತ್ಯಂತ ಕಠಿಣ ಪದಗಳಿಂದ ಖಂಡಿಸುತ್ತದೆ. ರಶ್ಯ ಸರಕಾರವು ಈ ಘಟನೆ ಬಗ್ಗೆ ತಕ್ಷಣ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಲಾಗಿದೆ’’ ಎಂದರು.

‘‘ಬರ್ಲಿನ್‌ನಲ್ಲಿ ನವಾಲ್ನಿ ಚಿಕಿತ್ಸೆ ಪಡೆಯುತ್ತಿರುವ ಚಾರಿಟಿ ಹಾಸ್ಪಿಟಲ್‌ನೊಂದಿಗೆ ಸಮಾಲೋಚಿಸಿ ಜರ್ಮನ್ ಸೇನೆಯು ನಡೆಸಿದ ಪರೀಕ್ಷೆಗಳಲ್ಲಿ, ನೊವ್‌ಚೊಕ್ ಗುಂಪಿಗೆ ಸೇರಿದ ರಾಸಾಯನಿಕ ನರ್ವ್ ಏಜಂಟ್‌ನ ಅಂಶ ಗಮನಾರ್ಹ ಪ್ರಮಾಣದಲ್ಲಿ ಪತ್ತೆಯಾಗಿದೆ’’ ಎಂದು ಸೈಬರ್ಟ್ ತಿಳಿಸಿದರು.

ಕಳೆದ ತಿಂಗಳು ರಶ್ಯದ ಸೈಬೀರಿಯ ವಲಯದಿಂದ ಮಾಸ್ಕೋಗೆ ವಿಮಾನವೊಂದರಲ್ಲಿ ತೆರಳುತ್ತಿದ್ದ 44 ವರ್ಷದ ನವಾಲ್ನಿ ವಿಮಾನದಲ್ಲಿ ಒಮ್ಮೆಲೆ ಗಂಭೀರವಾಗಿ ಅಸ್ವಸ್ಥರಾದರು. ಅವರನ್ನು ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಸೈಬೀರಿಯದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅವರನ್ನು ಎರಡು ದಿನಗಳ ಬಳಿಕ ಜರ್ಮನಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಅವರು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ತೀವ್ರ ಟೀಕಾಕಾರರಾಗಿದ್ದರು.

ರಶ್ಯ ಉತ್ತರಿಸಬೇಕು: ಮರ್ಕೆಲ್

  ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಮೇಲೆ ರಾಸಾಯನಿಕ ದಾಳಿಯಾಗಿದೆ ಎನ್ನುವುದು ಪರೀಕ್ಷೆಗಳಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ, ರಶ್ಯ ಇದಕ್ಕೆ ವಿವರಣೆ ನೀಡಬೇಕು ಎಂದು ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಬುಧವಾರ ಒತ್ತಾಯಿಸಿದ್ದಾರೆ.

‘‘ಇದು ಕೆಲವು ಗಂಭೀರ ಪ್ರಶ್ನೆಗಳಿಗೆ ಹುಟ್ಟುಹಾಕಿದೆ. ಇದಕ್ಕೆ ರಶ್ಯ ಮಾತ್ರ ಉತ್ತರಿಸಬಹುದಾಗಿದೆ ಹಾಗೂ ಅದು ಉತ್ತರಿಸಬೇಕು’’ ಎಂದು ಮರ್ಕೆಲ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News