ನನ್ನ ವಿರುದ್ಧ ಸುಳ್ಳು ಸಾಕ್ಷ್ಯ ಮಂಡನೆ: ನ್ಯಾಯಾಲಯದಲ್ಲಿ ಆರೋಪಿಯ ಹೇಳಿಕೆ

Update: 2020-09-03 17:05 GMT
ಫೈಲ್ ಚಿತ್ರ

ಹೊಸದಿಲ್ಲಿ,ಸೆ.3: ಇಲ್ಲಿಯ ಜಾಮಿಯಾ ನಗರದ ಬಾಟ್ಲಾ ಹೌಸ್‌ನಲ್ಲಿ 2008,ಸೆ.19ರಂದು ನಡೆದಿದ್ದ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿತ ಆರೋಪಿ,ಶಂಕಿತ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಆರಿಝ್ ಖಾನ್,ತನ್ನ ವಿರುದ್ಧ ಸುಳ್ಳು ಸಾಕ್ಷ್ಯ ವನ್ನು ಮಂಡಿಸಲಾಗಿದೆ ಎಂದು ಗುರುವಾರ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಹೇಳಿದ್ದಾನೆ. ಒಂದು ದಶಕ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು 2018,ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.

 ಆರೋಪಿಯ ಪರ ಅಂತಿಮ ವಾದವನ್ನು ಮಂಡಿಸಿದ ನ್ಯಾಯವಾದಿ ಎಂ.ಎಸ್.ಖಾನ್ ಅವರು,ಎನ್‌ಕೌಂಟರ್ ಬಳಿಕ ಸ್ಥಳದಿಂದ ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿರುವ ಆರಿಝ್‌ನ ಪರ್ಸ್ ಮತ್ತು ಶೈಕ್ಷಣಿಕ ಪ್ರಮಾಣಪತ್ರದಲ್ಲಿದ್ದ ಆತನ ಎರಡು ಫೋಟೊಗಳನ್ನು ಪ್ರಾಸಿಕ್ಯೂಷನ್ ಬಲವಾಗಿ ನೆಚ್ಚಿಕೊಂಡಿದೆ. ಆದರೆ ಪ್ರಕರಣದ ಇಬ್ಬರು ತನಿಖಾಧಿಕಾರಿಗಳು ತಮ್ಮ ವರದಿಯಲ್ಲಿ ಎಲ್ಲಿಯೂ ಈ ಸಾಕ್ಷ್ಯಾ ಧಾರಗಳ ಬಗ್ಗೆ ಹೇಳಿರಲಿಲ್ಲ. ಅಲ್ಲದೆ ಆರಿಝ್‌ನನ್ನು ಎಫ್‌ಐಆರ್‌ನಲ್ಲಿಯೂ ಹೆಸರಿಸಲಾಗಿರಲಿಲ್ಲ. ತಮ್ಮ ತನಿಖೆಯ ಸಂದರ್ಭದಲ್ಲಿ ಈ ಸಾಕ್ಷ್ಯಾಧಾರಗಳನ್ನು ತಾವು ನೋಡಿರಲಿಲ್ಲ ಎಂದೂ ಇಬ್ಬರೂ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂದು ಹೇಳಿದರು.

ಆರಿಝ್ ಬಾಟ್ಲಾ ಹೌಸ್ ಫ್ಲಾಟ್‌ನಲ್ಲಿದ್ದ ಅಥವಾ ಎನ್‌ಕೌಂಟರ್ ನಡೆದ ದಿನ ಆತ ಅಲ್ಲಿದ್ದ ಎನ್ನುವುದನ್ನು ಸಾಬೀತುಗೊಳಿಸುವ ಯಾವುದೇ ಸಾಕ್ಷಾಧಾರಗಳಿಲ್ಲ ಎಂದ ಖಾನ್,ನ್ಯಾಯಾಲಯದಲ್ಲಿ ಮಂಡಿಸಲಾಗಿರುವ ಸಾಕ್ಷ್ಯಾಧಾರಗಳು ಸಂಶಯಾತೀತವಲ್ಲ ಮತ್ತು ಆರಿಝ್ ನನ್ನು ಪ್ರಕರಣದಲ್ಲಿ ಸುಳ್ಳಾಗಿ ಸಿಲುಕಿಸಲು ಸೇರಿಸಲ್ಪಟ್ಟಿವೆ ಎಂದು ವಾದಿಸಿದರು.

  ಆರಿಝ್ ಇತರ ನಾಲ್ವರೊಂದಿಗೆ ಬಾಟ್ಲಾ ಹೌಸ್‌ನಲ್ಲಿದ್ದ ಮತ್ತು ಎನ್‌ಕೌಂಟರ್ ಸಂದರ್ಭದಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಇಂಡಿಯನ್ ಮುಜಾಹಿದೀನ್‌ನ ಇಬ್ಬರು ಭಯೋತ್ಪಾದಕರು ಹಾಗೂ ಎನ್‌ಕೌಂಟರ್ ಸ್ಪೆಷಲಿಸ್ಟ್,ಇನ್‌ಸ್ಪೆಕ್ಟರ್ ಮೋಹನಚಂದ ಶರ್ಮಾ ಅವರು ಕೊಲ್ಲಲ್ಪಟ್ಟಿದ್ದರು. ಗಾಯಗೊಂಡಿದ್ದ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿತ್ತು.

ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು 2013,ಜುಲೈನಲ್ಲಿ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಶಹಝಾದ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News