ಪ್ರಭುತ್ವದ ಕ್ರೌರ್ಯವನ್ನು ತೆರೆದಿಟ್ಟ ಕಫೀಲ್ ಖಾನ್ ಬಂಧನ-ಬಿಡುಗಡೆ

Update: 2020-09-04 05:40 GMT

ಡಾ. ಕಫೀಲ್‌ಖಾನ್ ಪ್ರಕರಣ ಈ ದೇಶದ ಆಳುವವರ ಕ್ರೌರ್ಯದ ಪರಮಾವಧಿಯನ್ನು ಎತ್ತಿ ಹಿಡಿದಿದೆ. 2017ರಲ್ಲಿ ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಸರಕಾರದ ಬೇಜವಾಬ್ದಾರಿಯಿಂದ ನೂರಾರು ಕಂದಮ್ಮಗಳು ಆಮ್ಲಜನಕ ಸಿಲಿಂಡರ್ ವ್ಯವಸ್ಥೆಯಿಲ್ಲದೆ ಮೃತಪಟ್ಟಾಗ, ಮಕ್ಕಳನ್ನು ಉಳಿಸಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಿದವರು ಡಾ. ಕಫೀಲ್ ಖಾನ್. ಖಾಸಗಿ ಗುತ್ತಿಗೆದಾರರು ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿದಾಗ ಕಫೀಲ್ ಖಾನ್ ಅವರು ತನ್ನ ಸ್ವಂತ ಹಣದಿಂದ ಆಸ್ಪತ್ರೆಗಾಗಿ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸಿ ಹಲವು ಮಕ್ಕಳ ಪ್ರಾಣವನ್ನು ಉಳಿಸಿದ್ದರು. ಅಷ್ಟೇ ಅಲ್ಲ, ಆಸ್ಪತ್ರೆಯ ಅವ್ಯವಸ್ಥೆ ಮತ್ತು ವ್ಯವಸ್ಥೆಯ ಬೇಜವಾಬ್ದಾರಿಯನ್ನು ಸಾರ್ವಜನಿಕವಾಗಿ ಬಯಲಿಗೆ ಎಳೆದಿದ್ದರು. ಆದರೆ ಉತ್ತರಪ್ರದೇಶ ಸರಕಾರ ಈ ಅವ್ಯವಸ್ಥೆಗೆ ಕಾರಣರಾದವರನ್ನು ಶಿಕ್ಷಿಸುವುದು ಪಕ್ಕಕ್ಕಿರಲಿ, ಮಕ್ಕಳ ಪ್ರಾಣ ಉಳಿಸಿದ ವೈದ್ಯ ಕಫೀಲ್ ಖಾನ್‌ರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು. ತನ್ನ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಮಕ್ಕಳ ಸಾವಿಗೆ ಸಿಲಿಂಡರ್ ಪೂರೈಕೆ ಸ್ಥಗಿತವಾದುದು ಕಾರಣವಲ್ಲ ಎಂದಿತು. ಆ ದುರಂತವನ್ನು ಕಫೀಲ್ ಖಾನ್‌ರ ತಲೆಗೇ ಕಟ್ಟಿ, ಸೇಡು ತೀರಿಸಿಕೊಳ್ಳಲು ಮುಂದಾಯಿತು. ಅವರಿಗೂ ಅವರ ಕುಟುಂಬಕ್ಕೆ ಇನ್ನಿಲ್ಲದ ಚಿತ್ರಹಿಂಸೆಯನ್ನು ನೀಡಿತು. ಎಲ್ಲಕ್ಕಿಂತ ದುರಂತವೆಂದರೆ, ಮಕ್ಕಳ ಸಾವಿನ ಪ್ರಕರಣದಲ್ಲಿ ಕಫೀಲ್ ಬಿಡುಗಡೆಗೊಂಡಾಗ, ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ದುರುಪಯೋಗಗೊಳಿಸಿ, ಇನ್ನೊಂದು ಪ್ರಕರಣವನ್ನು ದಾಖಲಿಸಿ ಶಾಶ್ವತವಾಗಿ ಜೈಲಿನಲ್ಲಿರಿಸುವ ಪ್ರಯತ್ನ ನಡೆಸಿತು.

ಡಾ. ಕಫೀಲ್ ಖಾನ್ ಅವರನ್ನು ಉತ್ತರಪ್ರದೇಶ ಸರಕಾರವು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವುದನ್ನು ಇದೀಗ ಅಲಹಾಬಾದ್ ಹೈಕೋರ್ಟ್ ಸೆಪ್ಟಂಬರ್ 1ರಂದು ರದ್ದುಪಡಿಸಿದೆ. ಈ ಬಗ್ಗೆ ಕಠಿಣವಾದ ಆದೇಶವನ್ನು ನೀಡಿರುವ ಹೈಕೋರ್ಟ್, ಫೆಬ್ರವರಿಯಲ್ಲಿ ಕಫೀಲ್ ಅವರನ್ನು ಬಂಧನಕ್ಕೆ ಉ.ಪ್ರ. ಸರಕಾರ ಹೊರಡಿಸಿದ್ದ ಆದೇಶ ಹಾಗೂ ತರುವಾಯ ಅವರ ಬಂಧನವನ್ನು ಎರಡು ಸಲ ವಿಸ್ತರಿಸಿರುವುದು ಇವೆರಡೂ ಕಾನೂನು ಪ್ರಕಾರ ಅಸಿಂಧುವಾಗಿದೆ ಎಂದು ಹೇಳಿದೆ. ಗೋರಖಪುರ ಆಸ್ಪತ್ರೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿ 9 ತಿಂಗಳುಗಳನ್ನು ಕಳೆದ ಬಳಿಕ ಕಫೀಲ್‌ಖಾನ್ 2018ರ ಎಪ್ರಿಲ್‌ನಲ್ಲಿ ಬಿಡುಗಡೆಗೊಂಡಿದ್ದರು. ಆದರೆ ಯಾವಾಗ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಸರಕಾರದ ವಿರುದ್ಧ ಕಫೀಲ್ ಖಾನ್ ಮಾತನಾಡತೊಡಗಿದರೋ, ಪೊಲೀಸರು ಮಗದೊಮ್ಮೆ ಎಫ್‌ಐಆರ್ ದಾಖಲಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಾಡಿದ ಭಾಷಣವನ್ನೇ ನೆಪವಾಗಿಟ್ಟು, ಜನವರಿ 29ರಂದು ಉತ್ತರಪ್ರದೇಶ ಪೊಲೀಸರು ಅವರನ್ನು ಮುಂಬೈನಲ್ಲಿ ಬಂಧಿಸಿದ್ದರು.

ಉತ್ತರಪ್ರದೇಶ ಸರಕಾರದ ಪ್ರಬಲ ವಿರೋಧದ ಹೊರತಾಗಿಯೂ ಫೆಬ್ರವರಿ 10ರಂದು ನ್ಯಾಯಾಲಯವು ಕಫೀಲ್ ಅವರ ಜಾಮೀನು ಬಿಡುಗಡೆಗೆ ಆದೇಶಿಸಿತ್ತು. ಆದರೆ, ಉತ್ತರಪ್ರದೇಶ ಸರಕಾರವು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಫೆಬ್ರವರಿ 13ರಂದು ಮತ್ತೆ ಬಂಧಿಸಿತು. ಸುಮಾರು 9 ತಿಂಗಳುಗಳನ್ನು ಜೈಲಿನಲ್ಲಿ ಕಫೀಲ್ ಕಳೆಯಬೇಕಾಯಿತು. ಇದೀಗ ಅಲಹಾಬಾದ್ ಹೈಕೋರ್ಟ್ ಸೆಪ್ಟ್ಟಂಬರ್ 1ರಂದು ನೀಡಿದ ಐತಿಹಾಸಿಕ ಆದೇಶದಲ್ಲಿ ಕಫೀಲ್ ಬಂಧನವನ್ನು ಹಾಗೂ ಆನಂತರ ಅವರ ಜೈಲುವಾಸದ ಅವಧಿಯ ವಿಸ್ತರಣೆಯನ್ನು ರದ್ದುಪಡಿಸಿದೆ. ಖಾನ್ ಅವರು ಡಿಸೆಂಬರ್‌ನಲ್ಲಿ ಮಾಡಿದ್ದ ಭಾಷಣದ ಪೂರ್ಣ ಪಾಠವನ್ನು ನ್ಯಾಯಾಲಯವು ತನ್ನ ಆದೇಶದೊಂದಿಗೆ ಹಾಜರುಪಡಿಸಿತ್ತು ಹಾಗೂ ಆ ಭಾಷಣದಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಅಂಶಗಳು ಇಲ್ಲವೆಂದು ಘೋಷಿಸಿತ್ತು. ಕಫೀಲ್ ಸಮಾಜದ ಶಾಂತಿ ಕದಡುವಂತಹ ಭಾಷಣ ಮಾಡಿದ್ದರೆಂಬ ಆರೋಪ ಹೊರಿಸಿ ಉತ್ತರಪ್ರದೇಶ ಸರಕಾರವು ಅವರನ್ನು ಜೈಲಿನಲ್ಲಿರಿಸಿತ್ತೆಂಬುದು ಇಲ್ಲಿ ಗಮನಾರ್ಹ.

ಖಾನ್ ಅವರನ್ನು ಜೈಲಿನಲ್ಲಿಯೇ ಉಳಿಸಿಕೊಳ್ಳಲು ಉತ್ತರಪ್ರದೇಶ ಪೊಲೀಸರು ಎಲ್ಲಾ ರೀತಿಯ ತಂತ್ರಗಾರಿಕೆಗಳನ್ನು ಬಳಸಿದ್ದರು. ತನ್ನ ಬಂಧನವನ್ನು ಪ್ರಶ್ನಿಸಲು ಪರಿಣಾಮಕಾರಿಯಾದ ವಾದವನ್ನು ಮಂಡಿಸಲು ಕಫೀಲ್‌ಗೆ ಅವಕಾಶ ದೊರೆಯದಂತೆ ಮಾಡಲು ಅವರ ಬಂಧನದ ಕುರಿತಾದ ದಾಖಲೆ, ಕಡತಗಳನ್ನು ನೀಡಲು ನಿರಾಕರಿಸಿತ್ತು. ಇದೀಗ ಕಫೀಲ್ ಬಂಧನ ಮತ್ತು ಬಿಡುಗಡೆಯಿಂದಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇಗೆ ಸರಕಾರದಿಂದ ದುರುಪಯೋಗವಾಗುತ್ತಿದೆ ಎನ್ನುವುದು ಚರ್ಚೆಯಾಗ ತೊಡಗಿದೆ. ಖಾನ್ ಅವರಂತೆಯೇ ಇನ್ನೂ ಹಲವಾರು ಮಂದಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅನ್ಯಾಯವಾಗಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಯಾರೆಲ್ಲ ಸರಕಾರದ ಜನವಿರೋಧಿ ನೀತಿಗಳನ್ನು ದೊಡ್ಡ ಧ್ವನಿಯಲ್ಲಿ ಪ್ರತಿಭಟಿಸುತ್ತಾರೆಯೋ ಅವರನ್ನೆಲ್ಲ ಈ ಕಾಯ್ದೆಯಡಿ ಬಂಧಿಸಿ ಶಾಶ್ವತವಾಗಿ ಬಾಯಿ ಮುಚ್ಚಿಸುವುದಕ್ಕೆ ಸರಕಾರ ಯತ್ನಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗೋಹತ್ಯೆಯ ಪ್ರಕರಣಗಳಲ್ಲಿಯೂ ಶಂಕಿತ ಆರೋಪಿಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗುತ್ತಿದೆ. ಭೀಮ್ ಆರ್ಮಿ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರನ್ನು ವಿಚಾರಣೆಗೊಳಪಡಿಸದೆ ಜೂನ್ 2017 ಹಾಗೂ ಸೆಪ್ಟಂಬರ್ 2018ರ ನಡುವೆ ಜೈಲಿನಲ್ಲಿರಿಸಿತ್ತು.

 ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಹೆಚ್ಚುತ್ತಿದೆ. ಯಾಕೆಂದರೆ ಈ ಕಾಯ್ದೆಯನ್ನು ಬಳಸಿಕೊಂಡರೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸದೆ ದೀರ್ಘಾವಧಿಯವರೆಗೆ ಬಂಧನದಲ್ಲಿರಿಸಲು ಅವರಿಗೆ ಸಾಧ್ಯವಾಗುತ್ತ್ತದೆ. ಈ ಕಾಯ್ದೆಯು ಬಂಧಿತ ಆರೋಪಿಗಳ ಎಲ್ಲಾ ರೀತಿಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ, ತನ್ನ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳುವ ಹಕ್ಕನ್ನು ಹಾಗೂ ತನ್ನ ಬಂಧನದ ಕಾರಣದ ಬಗ್ಗೆ ಮಾಹಿತಿಯನ್ನು ಬಂಧಿತನು ತಿಳಿದುಕೊಳ್ಳುವುದಕ್ಕೂ ಅವಕಾಶವನ್ನು ನೀಡುವುದಿಲ್ಲ. ಎನ್‌ಎಸ್‌ಎ ಅಡಿ ನಡೆಸಲಾಗುತ್ತಿರುವ ಬಂಧನಗಳನ್ನು ರದ್ದುಪಡಿಸುವಲ್ಲಿ ನ್ಯಾಯಾಲಯಗಳು ಕೂಡಾ ವಿಳಂಬನೀತಿಯನ್ನು ಅನುಸರಿಸುತ್ತಿವೆಯೆಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಕಫೀಲ್ ಖಾನ್ ಪ್ರಕರಣವನ್ನೇ ತೆಗೆದುಕೊಳ್ಳುವುದಾದರೆ, ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿ ನಡೆದಿದ್ದ ಅವರ ಬಂಧನವನ್ನು ರದ್ದುಪಡಿಸಲು ನ್ಯಾಯಾಲಯಕ್ಕೆ ಒಂಭತ್ತು ತಿಂಗಳುಗಳೇ ಬೇಕಾದವು. ಈ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ನಡೆಯುತ್ತಿರುವ ಅನ್ಯಾಯಯುತವಾದ ಬಂಧನಗಳನ್ನು ನಿಲ್ಲಿಸಲು ಎರಡು ದಾರಿಗಳಿವೆ. ಒಂದೋ ಆ ಕಾಯ್ದೆಯನ್ನು ರದ್ದುಪಡಿಸಬೇಕು ಇಲ್ಲವಾದರೆ, ಆ ಕಾನೂನಿನ ದುರ್ಬಳಕೆಯ ವಿರುದ್ಧ ರಾಜಕೀಯ ಪಕ್ಷಗಳು ಕೇಂದ್ರ ಸರಕಾರದ ಮೇಲೆ ಒತ್ತಡಹೇರಬೇಕು. ಎರಡನೆಯದಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ನಡೆದಿರುವ ಬಂಧನಗಳನ್ನು ಉನ್ನತ ನ್ಯಾಯಾಂಗ ವ್ಯವಸ್ಥೆಯು ಅತ್ಯಂತ ತುರ್ತು ಪ್ರಕರಣಗಳೆಂದು ಪರಿಗಣಿಸಬೇಕು ಹಾಗೂ ವ್ಯಕ್ತಿಯ ಬಂಧನದ ಅವಧಿಯನ್ನು ವಿಸ್ತರಿಸಲು ರಾಜ್ಯಗಳು ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಲು ಅವಕಾಶ ನೀಡಕೂಡದು. ಇದಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಗಳನ್ನು ಬಂಧಿಸಲು ಏಕಪಕ್ಷೀಯವಾಗಿ ಎನ್‌ಎಸ್‌ಎ ಕಾಯ್ದೆಯನ್ನು ಬಳಸಿಕೊಳ್ಳುತ್ತಿರುವ ಅಧಿಕಾರಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು. ಈ ಅಧಿಕಾರಿಗಳಿಗೆ ಇಂತಹ ವಿಶೇಷಾಧಿಕಾರಗಳನ್ನು ನೀಡಿರುವ ಕಾನೂನುಗಳನ್ನು ರದ್ದುಪಡಿಸಿದಲ್ಲಿ ಮಾತ್ರವೇ ಈ ಅನ್ಯಾಯದ ಬಂಧನಗಳು ಕೊನೆಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News