ಬಿಳಿಯ ಪೊಲೀಸರ ಗುಂಡಿಗೆ ಇನ್ನೋರ್ವ ಕರಿಯ ಯುವಕ ಬಲಿ

Update: 2020-09-04 16:49 GMT

ವಾಶಿಂಗ್ಟನ್, ಸೆ. 4: ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಕರಿಯ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಕೊಂದಿರುವ ಹೊಸ ಪ್ರಕರಣವೊಂದು ವಾಶಿಂಗ್ಟನ್ ಡಿಸಿಯಲ್ಲಿ ಬುಧವಾರ ನಡೆದಿದೆ. ಘಟನೆಗೆ ಸಂಬಂಧಿಸಿ, ಪೊಲೀಸರ ದೇಹದಲ್ಲಿರುವ ಕ್ಯಾಮರದಲ್ಲಿ ದಾಖಲಾಗಿರುವ ವಿವರಗಳನ್ನು ಒಂದು ದಿನದ ಬಳಿಕ, ಅಂದರೆ ಗುರುವಾರ ಬಿಡುಗಡೆ ಮಾಡಲಾಗಿದೆ.

ಪೊಲೀಸರ ಬಾಡಿ ಕ್ಯಾಮರಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಹಾಗೂ ಇತರ ಸುಧಾರಣೆಗಳು ವಾಶಿಂಗ್ಟನ್ ಡಿಸಿಯಲ್ಲಿ ಜಾರಿಗೆ ಬಂದ ಬಳಿಕ ದಾಖಲಾದ ಮೊದಲ ವೀಡಿಯೊ ಇದಾಗಿದೆ.

ಈ ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು 18 ವರ್ಷದ ಡಿಯೋನ್ ಕೇಗೆ ಗುಂಡು ಹಾರಿಸಿ ಕೊಲ್ಲುತ್ತಾರೆ ಹಾಗೂ ಬಳಿಕ ಬಂದೂಕಿಗಾಗಿ ಹುಡುಕಾಡುತ್ತಾರೆ. ಶಂಕಿತನು ತನ್ನ ಬಂದೂಕನ್ನು ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಮೃತ ವ್ಯಕ್ತಿಯು ಕುಖ್ಯಾತ ಬೀದಿ ಗ್ಯಾಂಗ್ ಸದಸ್ಯನೆಂದು ಪೊಲೀಸರು ಹೆಳುತ್ತಾರೆ.

ಈ ಹತ್ಯೆಯ ಬೆನ್ನಿಗೇ, ಪ್ರತಿಭಟನೆಗಳು ನಡೆದಿವೆ. ಡಿಯೋನ್ ಕೇ ನಿರಾಯುಧನಾಗಿದ್ದರು ಹಾಗೂ ಓಡುತ್ತಿದ್ದಾಗ ಅವರಿಗೆ ಗುಂಡು ಹಾರಿಸಲಾಗಿದೆ ಎಂಬ ಸುದ್ದಿ ವಾಶಿಂಗ್ಟನ್ ಡಿಸಿಯಾದ್ಯಂತ ಹರಡಿದೆ.

ಬಂದೂಕು ಹಿಡಿದುಕೊಂಡು ಓಡಾಡುತ್ತಿದ್ದ ವ್ಯಕ್ತಿಯೊಬ್ಬನಿಗಾಗಿ ಗಸ್ತು ಪೊಲೀಸರು ಹುಡುಕಾಡುತ್ತಿದ್ದರು ಹಾಗೂ ಹಿಂದಿನ ಎನ್‌ಕೌಂಟರ್‌ಗಳ ಆಧಾರದಲ್ಲಿ ಶಂಕಿತನನ್ನು ಕೇ ಎಂಬುದಾಗಿ ಗುರುತಿಸಿದ್ದರು ಎಂದು ಬಾಡಿ ಕ್ಯಾಮರ ವೀಡಿಯೊವನ್ನು ಗುರುವಾರ ಬಿಡುಗಡೆ ಮಾಡಿದ ಪೊಲೀಸರು ಹೇಳಿದರು.

ಒಂದು ಸ್ಥಳದಲ್ಲಿ ನಿಂತ ಕಾರೊಂದರಲ್ಲಿ ಕೇ ಇದ್ದುದನ್ನು ಪೊಲೀಸರು ಕಂಡರು. ಪೊಲೀಸರು ಅಲ್ಲಿಗೆ ಹೋದಾಗ ಅದರಲ್ಲಿದ್ದ ಕೇ ಮತ್ತು ಇನ್ನೊಬ್ಬ ಕಾರಿನಿಂದ ಹಾರಿ ಓಡಿದರು ಎಂದು ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಹೇಳಿದರು.

ಪಿಸ್ತೂಲನ್ನು ಝಳಪಿಸುತ್ತಾ ಕೇ ನನ್ನೆಡೆಗೆ ಬರುತ್ತಿರುವುದನ್ನು ಕಂಡೆ ಹಾಗೂ ಅವನತ್ತ ಒಂದು ಗುಂಡು ಹಾರಿಸಿದೆ ಎಂದು ಎಂಬುದಾಗಿ ಸಂಬಂಧಿತ ಪೊಲೀಸ್ ಅಧಿಕಾರಿ ವಿಚಾರಣಾ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಪೀಟರ್ ನ್ಯೂಶಾಮ್ ತಿಳಿಸಿದರು.

ಒಂದು ಕೈಯಲ್ಲಿ ಬಂದೂಕಿನಂತೆ ಕಾಣುವ ವಸ್ತುವನ್ನು ಹಿಡಿದುಕೊಂಡು ಕೇ ಪೊಲೀಸ್ ಅಧಿಕಾರಿಯತ್ತ ಓಡುತ್ತಿರುವುದನ್ನು ವೀಡಿಯೊ ತೋರಿಸಿದೆ. ಕೇ ನೆಲಕ್ಕೆ ಉರುಳಿದ ಸ್ಥಳದಿಂದ 30 ಮೀಟರ್ ದೂರದಲ್ಲಿ ಬಂದೂಕು ಪತ್ತೆಯಾಗಿದೆ ಎಂದು ನ್ಯೂಶಾಮ್ ಹೇಳಿದರು.

ರೋಚೆಸ್ಟರ್ ಹತ್ಯೆ: 7 ಪೊಲೀಸರ ಅಮಾನತು

ನ್ಯೂಯಾರ್ಕ್‌ನ ರೋಚೆಸ್ಟರ್ ‌ನಲ್ಲಿ ಪೊಲೀಸರ ಕಸ್ಟಡಿಯಲ್ಲಿರುವ ಕರಿಯ ವ್ಯಕ್ತಿಯೊಬ್ಬನ ಮುಖಕ್ಕೆ ತಲೆಗವಚವನ್ನು ಹಾಕಿ ಬಳಿಕ ಮುಖವನ್ನು ರಸ್ತೆಗೆ ಒತ್ತಿ ಹಿಡಿದು ಆತನ ಸಾವಿಗೆ ಕಾರಣರಾದ ಆರೋಪದಲ್ಲಿ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಈ ಸಾವು ಮಾರ್ಚ್‌ನಲ್ಲಿ ನಡೆದಿದೆಯಾದರೂ, ಸುಮಾರು 5 ತಿಂಗಳ ಬಳಿಕ, ಗುರುವಾರ ಘಟನೆಯ ವೀಡಿಯೊವನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಡೇನಿಯಲ್ ಪ್ರೂಡ್ ಸಾವಿಗೆ ಸಂಬಂಧಿಸಿ ರೋಚೆಸ್ಟರ್ ಮೇಯರ್ ಡೆಮಾಕ್ರಟಿಕ್ ಪಕ್ಷದ ಲವ್ಲಿ ವಾರನ್ ಗುರುವಾರ ಕ್ಷಮೆ ಕೋರಿದ್ದಾರೆ ಹಾಗೂ ನಗರದ ಪೊಲೀಸ್ ಮುಖ್ಯಸ್ಥರಿಗೆ ಛೀಮಾರಿ ಹಾಕಿದ್ದಾರೆ.

‘‘ಪ್ರೂಡ್ ಸಾವು ಮಾದಕ ದ್ರವ್ಯದ ಅತಿ ಸೇವನೆಯಿಂದಾಗಿ ಸಂಭವಿಸಿದೆ ಎಂಬುದಾಗಿ ಪೊಲೀಸ್ ಮುಖ್ಯಸ್ಥರು ನನಗೆ ಹೇಳಿದ್ದರು. ಆತನ ಮುಖವನ್ನು ರಸ್ತೆಗೆ ಒತ್ತಿ ಹಿಡಿಯಲಾಗಿತ್ತು ಎನ್ನುವುದನ್ನು ಅವರು ನನಗೆ ಹೇಳಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.

ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಪ್ರೂಡ್ ಮಾರ್ಚ್ ತಿಂಗಳಲ್ಲಿ ರಸ್ತೆಯೊಂದರಲ್ಲಿ ನಗ್ನರಾಗಿ ಓಡುತ್ತಿದ್ದಾಗ ಪೊಲೀಸರು ಅವರಿಗೆ ತಲೆಯ ಮೇಲೆ ‘ಸ್ಪಿಟ್ ಹುಡ್’ ತೊಡಿಸಿದರು. ಬಂಧಿತರು ಪೊಲೀಸರಿಗೆ ಉಗಿಯುವುದನ್ನು ಅಥವಾ ಕಚ್ಚುವುದನ್ನು ತಡೆಯಲು ಅವರಿಗೆ ಸ್ಪಿಟ್‌ಹುಡ್ ತೊಡಿಸಲಾಗುತ್ತದೆ. ಅವರು ಬಳಿಕ ಉಸಿರುಗಟ್ಟಿ ಮೃತಪಟ್ಟ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News