ರಕ್ತ ಆಕರ ಕೋಶ ದಾನದ ಸುತ್ತಲಿನ ಮಿಥ್ಯೆಗಳು ಮತ್ತು ಸತ್ಯಗಳು

Update: 2020-09-04 18:08 GMT

ಹೆಚ್ಚುತ್ತಿರುವ ರಕ್ತ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸಿದರೆ ಬ್ಲಡ್ ಸ್ಟೆಮ್ ಸೆಲ್ ಅಥವಾ ರಕ್ತ ಆಕರ ಕೋಶ ದಾನವು ಹೆಚ್ಚು ಪ್ರಚಲಿತವಾಗಿಲ್ಲ. ಹೆಚ್ಚಿನ ಜನರಿಗೆ ಇದು ರಕ್ತ ಕ್ಯಾನ್ಸರ್ ರೋಗಿಗಳಿಗೆ ಎಷ್ಟು ಮಹತ್ವದ್ದು ಎನ್ನುವುದು ಹೋಗಲಿ,ರಕ್ತ ಆಕರ ಕೋಶ ದಾನ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ರಕ್ತ ಆಕರ ಕೋಶ ರಕ್ತ ಕ್ಯಾನ್ಸರ್ ರೋಗಿಗಳಿಗೆ ಬದುಕುಳಿಯುವ ಕೊನೆಯ ಆಶಾಕಿರಣವಾಗಿದೆ. ರಕ್ತ ಆಕರ ಕೋಶ ದಾನವು ರಕ್ತದಾನಕ್ಕಿಂತ ಸಂಪೂರ್ಣ ವಿಭಿನ್ನವಾಗಿರುವ ಪ್ರಕ್ರಿಯೆಯಾಗಿದೆ. ಇಂತಹ ರಕ್ತ ಆಕರ ಕೋಶ ದಾನದ ಸುತ್ತ ಹಬ್ಬಿಕೊಂಡಿರುವ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ.....

* ದಾನ ಮಾಡಿದ ರಕ್ತ ಆಕರ ಕೋಶಗಳು ಮರುಭರ್ತಿಯಾಗುವುದಿಲ್ಲ

-ರಕ್ತ ಆಕರ ಕೋಶ ದಾನದ ಬಳಿಕ ಶರೀರವು ಅವುಗಳನ್ನು ಪುನರುತ್ಪಾದಿಸುತ್ತದೆ ಮತ್ತು ಪ್ರಕ್ರಿಯೆಯು ರಕ್ತ ಆಕರ ಕೋಶಗಳ ಶಾಶ್ವತ ನಷ್ಟವನ್ನುಂಟು ಮಾಡುವುದಿಲ್ಲ ಮತ್ತು ದಾನಿಯ ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುವುದಿಲ್ಲ.

* ರಕ್ತ ಆಕರ ಕೋಶ ದಾನವು ಪ್ರಯಾಸಕರ ಪ್ರಕ್ರಿಯೆ

-ರಕ್ತ ಆಕರ ಕೋಶಗಳನ್ನು ಸಂಗ್ರಹಿಸಲು ಪೆರಿಫೆರಲ್ ಬ್ಲಡ್ ಸ್ಟೆಮ್ ಸೆಲ್ ಕಲೆಕ್ಷನ್ (ಪಿಬಿಎಸ್‌ಸಿ) ವಿಧಾನವನ್ನು ಅನುಸರಿಸಲಾಗುತ್ತದೆ. ರಕ್ತದಲ್ಲಿಯ ಪ್ಲೇಟ್‌ಲೆಟ್‌ಗಳನ್ನು ಸಂಗ್ರಹಿಸುವ ವಿಧಾನವನ್ನೇ ಇದು ಹೋಲುತ್ತದೆ ಮತ್ತು ಯಾವುದೇ ಪ್ರಯಾಸದ ಪ್ರಶ್ನೆಯೇ ಇಲ್ಲ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 4ರಿಂದ 6 ಗಂಟೆಗಳ ಅವಧಿ ಬೇಕಾಗುತ್ತದೆ. ಅಲ್ಲದೆ ದಾನಿಯು ಒಂದು ದಿನ ಆಸ್ಪತ್ರೆಯಲ್ಲಿರಬೇಕು ಎಂಬ ಭಾವನೆ ಹೆಚ್ಚಿನವರಲ್ಲಿದೆ. ರಕ್ತದಾನಿಯಂತೆ ರಕ್ತ ಆಕರ ಕೋಶ ದಾನಿಯೂ ಅದೇ ದಿನ ಆಸ್ಪತ್ರೆಯಿಂದ ಮನೆಗೆ ತೆರಳಬಹುದು.

* ಒಂದೇ ರಕ್ತಗುಂಪಿನ ವ್ಯಕ್ತಿಗಳು ಮಾತ್ರ ಆಕರ ಕೋಶಗಳನ್ನು ದಾನ ಮಾಡಬಹುದು

-ರಕ್ತ ಆಕರ ಕೋಶಗಳ ಕಸಿಯಲ್ಲಿ ರಕ್ತದ ಗುಂಪು ಯಾವುದೇ ಪಾತ್ರವನ್ನು ಹೊಂದಿಲ್ಲ. ಇಲ್ಲಿ ರಕ್ತ ಗುಂಪು ಅಥವಾ ರಕ್ತದ ಮಾದರಿ ಮುಖ್ಯವೇ ಅಲ್ಲ. ವೈದ್ಯರು ಎಚ್‌ಎಲ್‌ಎ ಅಥವಾ ಅಂಗಾಂಶಗಳ ಗುಣಲಕ್ಷಣಗಳನ್ನು ಆಧರಿಸಿ ದಾನಿ ಮತ್ತು ರೋಗಿಯ ತಾಳೆ ಹಾಕುತ್ತಾರೆ. ಆದರೆ ಶೇ.100ರಷ್ಟು ತಾಳೆಯಾಗುವ ರಕ್ತ ಆಕರ ಕೋಶವನ್ನು ಹುಡುಕುವುದು ಹೆಚ್ಚುಕಡಿಮೆ ಅಸಾಧ್ಯ ಎನ್ನಬಹುದು.

ಕುತೂಹಲಕರ ಅಂಶವೆಂದರೆ,ರಕ್ತ ಆಕರ ಕೋಶಗಳನ್ನು ಸ್ವೀಕರಿಸಿದ ನಂತರ ರೋಗಿಯು ದಾನಿಯ ರಕ್ತಗುಂಪನ್ನೂ ಸ್ವೀಕರಿಸುತ್ತಾನೆ. ಉದಾಹರಣೆಗೆ ರೋಗಿಯ ರಕ್ತಗುಂಪು ಎ ಪಾಸಿಟಿವ್ ಮತ್ತು ದಾನಿಯ ರಕ್ತಗುಂಪು ಬಿ ಪಾಸಿಟಿವ್ ಎಂದಿಟ್ಟುಕೊಳ್ಳಿ. ಈಗ ದಾನಿಯಿಂದ ಆಕರ ಕೋಶಗಳನ್ನು ಸ್ವೀಕರಿಸಿದ ಬಳಿಕ ರೋಗಿಯ ರಕ್ತಗುಂಪು ಕೂಡ ಬಿ ಪಾಸಿಟಿವ್ ಆಗುತ್ತದೆ.

* ವಯಸ್ಸಾದವರು ಆಕರ ಕೋಶಗಳನ್ನು ದಾನ ಮಾಡಬಾರದು

-ಇದೊಂದು ತಪ್ಪು ಕಲ್ಪನೆ. 18ರಿಂದ 50 ವರ್ಷದೊಳಗಿನ ಯಾವುದೇ ಆರೋಗ್ಯವಂತ ವ್ಯಕ್ತಿ ತನ್ನ ಆಕರ ಕೋಶಗಳನ್ನು ದಾನ ಮಾಡಬಹುದು. ಆಸ್ಪತ್ರೆಗಳು ಅಂತಹವರ ಹೆಸರನ್ನು ನೋಂದಣಿ ಮಾಡಿಕೊಳ್ಳುತ್ತವೆ ಮತ್ತು ಆಕರ ಕೋಶ ದಾನ ಅಗತ್ಯವಿದ್ದಾಗ ಅವರಿಗೆ ಕರೆ ಮಾಡುತ್ತವೆ. ಅವರಿಗೆ 61 ವರ್ಷ ವಯಸ್ಸಾಗುವವರೆಗೂ ಹೆಸರು ನೋಂದಣಿ ಪುಸ್ತಕದಲ್ಲಿರುತ್ತದೆ.

* ಈಗಾಗಲೇ ಕಾಯಿಲೆಗಳನ್ನು ಹೊಂದಿರುವವರು ರಕ್ತ ಆಕರ ಕೋಶಗಳನ್ನು ದಾನ ಮಾಡುವಂತಿಲ್ಲ

-ರಕ್ತ ಆಕರ ಕೋಶ ದಾನಕ್ಕೆ ಮುನ್ನ ದಾನಿಯು ಸಂಪೂರ್ಣ ಅರ್ಹನಾಗಿದ್ದಾನೆ ಮತ್ತು ರೋಗಿಯ ಪಾಲಿಗೆ ಸುರಕ್ಷಿತ ದಾನಿಯಾಗಿದ್ದಾನೆ ಹಾಗೂ ಆತನಿಂದ ರೋಗಿಗೆ ಯಾವುದೇ ರೋಗ ಹರಡುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

* ಮೈಮೇಲೆ ಹಚ್ಚೆ ಹಾಕಿಸಿಕೊಂಡಿರುವ ವ್ಯಕ್ತಿ ಆಕರ ಕೋಶ ದಾನಕ್ಕೆ ಸೂಕ್ತನಲ್ಲ

-ಹಚ್ಚೆ ಇರಲಿ,ಮೈಯಲ್ಲಿ ಚುಚ್ಚಿಸಿಕೊಂಡಿದ್ದರೂ ಅದು ಆಕರ ಕೋಶ ದಾನಕ್ಕೆ ಅಡ್ಡಿಯಾಗುವುದಿಲ್ಲ. ಆದರೆ ಹಚ್ಚೆಯ ಮಸಿ ಉಂಟು ಮಾಡಬಹುದಾದ ಯಾವುದೇ ಚರ್ಮದ ಸೋಂಕು ಇದೆಯೇ ಎನ್ನುವುದನ್ನು ವೈದ್ಯರು ಪರೀಕ್ಷಿಸಬಹುದು.

                                     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News