ಭಂಗಿ ಸೊಪ್ಪಿಗಿಂತ ಕೊತ್ತಂಬರಿ ಸೊಪ್ಪು ಅಪಾಯಕಾರಿಯೇ?

Update: 2020-09-05 05:22 GMT

ಸಿನೆಮಾ ಒಂದು ಶಕ್ತಿಶಾಲಿ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ವಾತಂತ್ರೋತ್ತರ ಭಾರತವನ್ನು ರೂಪಿಸುವಲ್ಲಿ ಸಿನೆಮಾ ಮಾಧ್ಯಮದ ಕೊಡುಗೆ ಅಪಾರ. ಇಲ್ಲಿಯ ಜನಜೀವನದ ಮೇಲೆ, ಅವರ ಧಾರ್ಮಿಕ, ಸಾಮಾಜಿಕ, ರಾಜಕೀಯ ಬದುಕಿನ ಮೇಲೆ ಸಿನೆಮಾಗಳು ಸಾಕಷ್ಟು ಪರಿಣಾಮಗಳನ್ನು ಬೀರಿವೆೆ. ಕಲೆಗಾಗಿ ಕಲೆ ಎನ್ನುವ ಮಾತಿನಾಚೆಗೆ ಸಿನೆಮಾ ಇಂದು ನಮ್ಮನ್ನು ಆವರಿಸಿಕೊಂಡಿದೆ. ಭಾರತ ಆಧುನಿಕ ಬದುಕಿಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ಬಾಲಿವುಡ್ ಕೂಡ ಪ್ರಭಾವ ಬೀರಿದೆ. ಆಧುನಿಕ ಜೀವನ ಶೈಲಿ ಭಾರತದ ಪಾಲಿಗೆ ತೆರೆದುಕೊಂಡದ್ದೇ ಸಿನೆಮಾಗಳ ಮೂಲಕ. ಸಿನೆಮಾಗಳು ಜನರ ಬದುಕಿಗೆ ಕನ್ನಡಿ ಹಿಡಿದಂತೆಯೇ, ಸಿನೆಮಾಗಳ ಮೂಲಕ ತಮ್ಮ ಬದುಕನ್ನು ಜನರು ಬದಲಿಸಿಕೊಂಡಿದ್ದಾರೆ. ಭಾರತದಲ್ಲಿ ಜನ ಸಾಮಾನ್ಯರ ಬದುಕಿನಲ್ಲಿ ಹಲವು ಆಚರಣೆಗಳು ಜನಪ್ರಿಯಗೊಂಡದ್ದು ಸಿನೆಮಾಗಳ ಮೂಲಕ. ಈ ದೇಶದ ಜಾತ್ಯತೀತ ವೌಲ್ಯಗಳಿಗೆ ಬಾಲಿವುಡ್ ನೀಡಿದ ಕೊಡುಗೆಗಳು ಸಣ್ಣದೇನೂ ಅಲ್ಲ. ಕರ್ನಾಟಕದಲ್ಲಿ ಜನಸಾಮಾನ್ಯರ ಬದುಕಿನಲ್ಲಿ ಡಾ.ರಾಜ್‌ಕುಮಾರ್ ಸಿನೆಮಾಗಳು ಸಾಕಷ್ಟು ಪ್ರಭಾವ ಬೀರಿವೆ. ಅವುಗಳು ಒಂದು ತಲೆಮಾರನ್ನು ರೂಪಿಸಿವೆ. ಅವರ ಸಿನೆಮಾಗಳು ಮಾತ್ರವಲ್ಲ, ಅವರೇ ತಮ್ಮ ವ್ಯಕ್ತಿತ್ವದ ಮೂಲಕ ಜನರ ಪಾಲಿಗೆ ಹಲವು ವಿಷಯಗಳಲ್ಲಿ ಮಾದರಿಯಾಗಿದ್ದಾರೆ.

ಹಾಗೆಂದು ಸಿನೆಮಾದಿಂದಾಗಿ ಒಳಿತಷ್ಟೇ ಆಗಿದೆ ಎಂದರ್ಥವಲ್ಲ. ಸಿನೆಮಾ ಒಳಿತಿಗಿಂತ ಹೆಚ್ಚು ಕೆಡುಕುಗಳನ್ನು ಮಾಡಿದೆ. ಸಿನೆಮಾ ಎಂದರೆ ಬೆಳ್ಳಿ ಪರದೆಯ ಮೇಲೆ ಏನು ನಡೆಯುತ್ತದೆಯೋ ಅದಷ್ಟೇ ಅಲ್ಲ. ರಾಜಕಾರಣಿಗಳು, ಕ್ರಿಮಿನಲ್‌ಗಳು, ಕಾರ್ಪೊರೇಟ್ ವಲಯಗಳನ್ನು ಬೆಸೆದುಕೊಂಡಿರುವ ಅದೊಂದು ಬೃಹತ್ ಉದ್ಯಮ. ತೆರೆಯ ಮೇಲೆ ನಾವು ನೋಡುವುದಷ್ಟೇ ಸತ್ಯವಲ್ಲ. ತೆರೆಯ ಹಿಂದಿನ ಸತ್ಯಗಳು ಅದಕ್ಕಿಂತಲೂ ಭೀಕರವಾಗಿವೆ. ಕಪ್ಪು ಹಣವನ್ನು ಮುಚ್ಚಿಹಾಕುವುದಕ್ಕಾಗಿಯೇ ಸಿನೆಮೋದ್ಯಮವನ್ನು ಬಳಸಿಕೊಳ್ಳುವವರು ನೂರಾರು ಸಂಖ್ಯೆಯಲ್ಲಿದ್ದಾರೆ. ಒಂದು ಅಪ್ಪಟ ಭಕ್ತಿ ಚಿತ್ರಕ್ಕೆ ಪಕ್ಕಾ ಕ್ರಿಮಿನಲ್ ಒಬ್ಬ ಹಣ ಹೂಡಿರುವ ಸಾಧ್ಯತೆಗಳಿವೆ. ದುಷ್ಟ ರಾಜಕಾರಣಿಗಳ ವಿರುದ್ಧ ಸಮರ ಸಾರುವ ಚಿತ್ರಗಳ ನಿರ್ಮಾಣದ ಹಿಂದೆ ದುಷ್ಟ ರಾಜಕಾರಣಿಗಳೇ ಭಾಗಿಯಾಗಿರಬಹುದು. ಸಿನೆಮಾ ಎನ್ನುವುದು ಒಂದು ಮಾಯಾ ಬಝಾರ್. ಯಾವುದು ನಿಜ-ಯಾವುದು ಸುಳ್ಳು ಎನ್ನುವುದನ್ನು ವಿಂಗಡಿಸುವುದು ಅಷ್ಟು ಸುಲಭವಿಲ್ಲ. ಹಿಂದಿನ ಬಹಳಷ್ಟು ವೃತ್ತಿಪರ ನಟರಿಗೆ, ಕಲಾವಿದರಿಗೆ ಕೆಲವು ಬದ್ಧತೆಗಳಿದ್ದವು. ಶಿಸ್ತು, ಸಂಯಮ, ವಿನಯಗಳಿದ್ದವು. ವಾಸ್ತವದ ಪರಿಚಯವಿತ್ತು. ಅಂತಹ ಗುಣಗಳಿದ್ದುದರಿಂದಲೇ ಕನ್ನಡದ ನಟ ಸಾರ್ವಭೌಮ ರಾಜ್‌ಕುಮಾರ್‌ರಂಥವರು ಏಳುಬೀಳುಗಳನ್ನು ಸಮನಾಗಿ ಸ್ವೀಕರಿಸುತ್ತಾ ಬೆಳೆದರು. ಜನಮನದಲ್ಲೂ ಗಟ್ಟಿಯಾಗಿ ಬೇರೂರಿದರು. ಒಬ್ಬ ನಟನಾಗಿ ಮಾತ್ರವಲ್ಲ, ಸಹೃದಯಿ ಮನುಷ್ಯನಾಗಿಯೂ ನಾವಿಂದು ರಾಜ್‌ಕುಮಾರ್ ಅವರನ್ನು ನೆನೆಯುತ್ತೇವೆ. ಆದರೆ ಇಂದಿನ ನಟನಟಿಯರಲ್ಲಿ ಆ ಪ್ರಬುದ್ಧತೆ ಕಾಣುತ್ತಿಲ್ಲ. ಅವರು ಸಿನೆಮಾ ಎನ್ನುವ ಮಾಯಾ ಸುಳಿಗೆ ಸುಲಭವಾಗಿ ಸಿಕ್ಕಿ ಹಾಕಿಕೊಂಡು ಮುಳುಗಿ ಹೋಗುತ್ತಾರೆ. ಹಾಗೆ ಮುಳುಗಿ ಹೋದ ಸಾವಿರಾರು ನಟ ನಟಿಯರು ನಮ್ಮ ಮುಂದಿದ್ದಾರೆ.

  ಇತ್ತೀಚಿನ ಎರಡು ತಿಂಗಳ ಲಾಕ್‌ಡೌನ್ ಸಿನೆಮಾ ರಂಗದ ಇನ್ನಷ್ಟು ಟೊಳ್ಳುತನಗಳನ್ನು ಪರಿಚಯಿಸಿದೆ. ಹಾಗೆಯೇ ಸಿನೆಮಾದೊಳಗಿರುವ ಹಲವು ಕಳಂಕಗಳನ್ನು ಹೊರಗೆ ತಂದಿದೆ. ಲಾಕ್‌ಡೌನ್ ಸಮಾಜದ ವಿವಿಧ ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರಿದಂತೆಯೇ, ಈ ಮಾಯಾನಗರಿಗೂ ಭೀಕರ ಹೊಡೆತವನ್ನು ನೀಡಿದೆ. ತೆರೆಯ ಹಿಂದೆ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರವಲ್ಲ, ತೆರೆಯಲ್ಲಿ ‘ನಾಯಕ’ರಾಗಿ ಮಿಂಚುತ್ತಿದ್ದವರು ಆತ್ಮಹತ್ಯೆಯ ದಾರಿಯನ್ನು ಹಿಡಿದಿರುವ ವರದಿಗಳು ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿವೆ. ಆರಂಭದಲ್ಲಿ ವಿವಿಧ ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟರ ಆತ್ಮಹತ್ಯೆಗಳು ವರದಿಯಾಗತೊಡಗಿದವು. ಆದರೆ, ಯಾವಾಗ ಬಾಲಿವುಡ್‌ನ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡರೋ ಆಗ ಬಾಲಿವುಡ್ ಚರಂಡಿಯ ಕೊಳಕು ಮಾಧ್ಯಮಗಳ ಮೂಲಕ ಹೊರಬೀಳತೊಡಗಿದವು. ಅದರಲ್ಲೂ ಮುಖ್ಯವಾಗಿ ಸಿನೆಮಾರಂಗವನ್ನು ಆವರಿಸಿಕೊಂಡಿರುವ ‘ಡ್ರಗ್ಸ್ ದಂಧೆ’ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆರಂಭದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಯ ಹಿಂದೆ ರಾಜಕೀಯ ಶಕ್ತಿಗಳು ಇವೆ ಎಂದು ಆರೋಪಿಸಲಾಯಿತಾದರೂ, ಇದೀಗ ಸುಶಾಂತ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದುದು, ಮಾನಸಿಕವಾಗಿ ಖಿನ್ನತೆಯನ್ನು ಎದುರಿಸುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಾತ್ರವಲ್ಲ, ಸಿನೆಮಾ ಜಗತ್ತಿನ ಜನರು ಮತ್ತು ಡ್ರಗ್ಸ್ ಜಾಲದ ನಡುವೆ ಕೊಂಡಿಯಾಗಿ ನಿಂತಿರುವ ರಾಜಕೀಯ ಪಕ್ಷಗಳ ಮುಖಂಡರ ಹೆಸರುಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಆಧಾರಿತ ಸಿನಿಮಾ ತೆಗೆದ ನಿರ್ಮಾಪಕನೂ ಆರೋಪಿ ಸಾಲಲ್ಲಿ ನಿಂತಿದ್ದಾನೆ.

ಕನ್ನಡ ಸಿನೆಮಾ ತಾರೆಯರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಇದೀಗ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಒಬ್ಬ ನಟಿಯನ್ನು ಬಂಧಿಸಲಾಗಿದೆ ಮಾತ್ರವಲ್ಲ, ಹಲವರನ್ನು ಪೊಲೀಸರು ವಿಚಾರಣೆಗೆ ತೆಗೆದುಕೊಂಡಿದ್ದಾರೆ. ಒಬ್ಬಾಕೆಯಂತೂ ಗಾಂಜಾವನ್ನು ಬಹಿರಂಗವಾಗಿ ಸಮರ್ಥಿಸುತ್ತಾ, ಅದನ್ನು ‘ತುಳಸಿ ಗಿಡ’ಕ್ಕೆ ಹೋಲಿಸಿದ್ದಾರೆ. ಈ ರಾಜ್ಯದಲ್ಲಿ ನಡುರಾತ್ರಿ ಬಡ ಕೂಲಿಕಾರ್ಮಿಕರು ಮಾರುಕಟ್ಟೆಗೆ ‘ಕೊತ್ತಂಬರಿ ಸೊಪ್ಪು’ ಸಾಗಿಸಿದರೆ ಅಪರಾಧವಾಗುತ್ತದೆ. ಅಷ್ಟೇ ಅಲ್ಲ, ಅದನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತದೆ. ಆದರೆ ಒಬ್ಬ ಸಿನೆಮಾರಂಗಕ್ಕೆ ಸೇರಿದಾಕೆ ಬಹಿರಂಗವಾಗಿ ‘ಭಂಗಿ ಸೊಪ್ಪು ಪವಿತ್ರವಾದದ್ದು’ ಎಂಬ ಹೇಳಿಕೆಯನ್ನು ನೀಡಿದರೆ ಆಕೆಯನ್ನು ಬಂಧಿಸಲು ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ. ಈ ಮೂಲಕ ಗಾಂಜಾ, ಭಂಗಿ ಸೊಪ್ಪಿಗಿಂತ ಕೊತ್ತಂಬರಿ ಸೊಪ್ಪು ಅಪಾಯಕಾರಿಯೇ? ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.

ಸಿನೆಮಾರಂಗದೊಳಗಿರುವ ಸ್ವೇಚ್ಛೆ, ನಟ ನಟಿಯರ ಲಂಗು ಲಗಾಮಿಲ್ಲದ ಬದುಕು ಆ ಕ್ಷೇತ್ರವನ್ನು ಮಾತ್ರವಲ್ಲ ಸಮಾಜವನ್ನೇ ಹೇಗೆ ಗಬ್ಬೆಬ್ಬಿಸಿವೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಲಾಕ್‌ಡೌನ್‌ನಿಂದಾಗಿ ಭವಿಷ್ಯದ ಬಗ್ಗೆ ಆತಂಕಿತರಾಗಿರುವ ಬಹಳಷ್ಟು ನಟರು ಖಿನ್ನತೆಯ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಗಳಿಗೆ ಬೇಕಾದ ಹಣವನ್ನು ಹೊಂದಿಸುವುದಕ್ಕೆ, ಈ ಹಿಂದಿನ ಜೀವನ ಶೈಲಿಯನ್ನು ಮುಂದುವರಿಸುವುದಕ್ಕೆ ಅವರು ಹೆಣಗಾಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಹಲವು ನಟರು, ಕಲಾವಿದರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನೆಮೋದ್ಯಮದ ಆರ್ಥಿಕ ಬಿಕ್ಕಟ್ಟು ಎಲ್ಲೂ ಸಲ್ಲದ ನಟನಟಿಯರನ್ನು ಅನಿವಾರ್ಯವಾಗಿ ವೇಶ್ಯಾವಾಟಿಕೆಯಂತಹ ದಂಧೆಗಳಿಗೆ ಇಳಿಸುತ್ತಿವೆ. ಕೆಲವರು ಅನಿವಾರ್ಯವಾಗಿ ಡ್ರಗ್ಸ್ ಮಾರಾಟದ ಪಿಂಪ್‌ಗಳಾಗಿ ಪರಿವರ್ತನೆಯಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಒಂದು ಕಾಲದಲ್ಲಿ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ಎಂಜಿಆರ್, ರಜನಿಕಾಂತ್, ಡಾ. ರಾಜ್‌ಕುಮಾರ್‌ರಂತಹ ನಟರು ಸಿನೆಮಾದ ಘನತೆಯನ್ನು ಮೇಲೆತ್ತಿ ನಿಲ್ಲಿಸಿದ್ದರೆ, ಇಂದಿನ ನಟನಟಿಯರು, ಸಿನೆಮಾದ ಒಳಸುಳಿಗಳನ್ನು ಅರಿಯದೇ ಅದರೊಳಗೆ ಇಳಿದು ಸ್ವೇಚ್ಛೆಯ ಬದುಕಿಗೆ ಬಲಿಯಾಗಿ, ತಾವೂ ನಾಶವಾದದ್ದಲ್ಲದೆ, ಇಡೀ ಸಿನೆಮಾರಂಗವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News