ಸಂಗೀತ ಶಿಕ್ಷಕ ಹುದ್ದೆಗೆ ಅಖಿಲೇಶ್ ಗುಂಡೇಚ ರಾಜೀನಾಮೆ

Update: 2020-09-05 14:19 GMT

ಭೋಪಾಲ, ಸೆ.5: ಸಂಗೀತ ಶಿಕ್ಷಕರಾದ ಅಖಿಲೇಶ್ ಗುಂಡೇಚ ಮತ್ತು ರಮಾಕಾಂತ್ ಗುಂಡೇಚ ಸಹೋದರರ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಭೋಪಾಲದ ಪ್ರಸಿದ್ಧ ಸಂಗೀತ ಪಾಠಶಾಲೆ ಧ್ರುಪದ ಸಂಸ್ಥಾನ ಹೇಳಿದೆ.

ಈ ಮಧ್ಯೆ, ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಖಿಲೇಶ್ ಗುಂಡೇಚ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ರಮಾಕಾಂತ್ ಮತ್ತು ಉಮಾಕಾಂತ್ ಗುಂಡೇಚ ಸಹೋದರರೆಂದೇ ಖ್ಯಾತರಾಗಿದ್ದು, ರಮಾಕಾಂತ್ ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗಿದ್ದರು. ಅಖಿಲೇಶ್ ಗುಂಡೇಚ ಪಕ್ಕವಾದ್ಯ ಕಲಾವಿದ. ಧ್ರುಪದ ಸಂಸ್ಥಾನದ ಸಂಗೀತ ಶಿಕ್ಷಕರ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಪರಿಶೀಲನೆ ಮತ್ತು ತನಿಖೆ ನಡೆಸಲು ಆಂತರಿಕ ಸಮಿತಿಯನ್ನು ರಚಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸಮಿತಿ ಪರಿಶೀಲಿಸಲಿದೆ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಖಿಲೇಶ್ ಗುಂಡೇಚ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

ಗುಂಡೇಚಾರ ವಿರುದ್ಧ ಮೊದಲು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಹಾಲಂಡ್ ಮೂಲದ ಯೋಗ ಶಿಕ್ಷಕಿ. ಫೇಸ್‌ಬುಕ್‌ನಲ್ಲಿ ತನ್ನ ಸ್ನೇಹಿತೆಯ ಪರವಾಗಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ಯೋಗಶಿಕ್ಷಕಿ, ರಮಾಕಾಂತ್ ಮತ್ತು ಉಮಾಕಾಂತ್ ಗುಂಡೇಚಾರ ಬೆದರಿಕೆಗೆ ಹೆದರಿ ನಾವೆಲ್ಲಾ ವೌನವಾಗಿದ್ದೇವೆ. ತಾವು ಹೇಳಿದ್ದಕ್ಕೆಲ್ಲಾ ಸಮ್ಮತಿಸಬೇಕು, ಇಲ್ಲ ಎಂಬ ಶಬ್ಧವನ್ನು ಉಸುರಬಾರದು ಎಂದು ಇವರಿಬ್ಬರು ನಿರಂತರ ಬೆದರಿಸುತ್ತಿದ್ದರು ಎಂದು ಆರೋಪಿಸಿದ್ದರು. ಸಂಗೀತದಲ್ಲಿ ವೃತ್ತಿಜೀವನ ಮುಂದುವರಿಸಲು ಆಸಕ್ತಿಯಿದ್ದರೆ ಗುರುಗಳು ಹೇಳಿದ್ದಕ್ಕೆಲ್ಲಾ ಸಮ್ಮತಿಸಬೇಕು ಎಂದು ಇಲ್ಲಿನ ವಿದ್ಯಾರ್ಥಿಗಳು ತನ್ನಲ್ಲಿ ಹೇಳಿದ್ದರು ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಈ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳೂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಆದರೆ ಪ್ರತೀಕಾರದ ಬೆದರಿಕೆಗೆ ಅಂಜಿ ಸುಮ್ಮನಿದ್ದಾರೆ ಎಂದು ಅಖಿಲೇಶ್ ಗುಂಡೇಚಾರ ಶಿಷ್ಯನೊಬ್ಬ ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News