ಜೊಕೊವಿಕ್, ಒಸಾಕಾ ನಾಲ್ಕನೇ ಸುತ್ತಿಗೆ ಪ್ರವೇಶ

Update: 2020-09-05 18:22 GMT

ನ್ಯೂಯಾರ್ಕ್: ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಹಾಗೂ ಮಾಜಿ ಚಾಂಪಿಯನ್ ನವೊಮಿ ಒಸಾಕಾ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ ವಿಶ್ವದ ನಂ.1 ಆಟಗಾರ ಜೊಕೊವಿಕ್ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಜಾನ್ ಲೆನಾರ್ಡ್ ಸ್ಟ್ರಫ್‌ರನ್ನು 6-3, 6-3, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.

 ಮೂರು ಬಾರಿಯ ಚಾಂಪಿಯನ್ ಜೊಕೊವಿಕ್‌ಗೆ ಜರ್ಮನಿಯ ಆಟಗಾರ ಸ್ಟ್ರಫ್ ಯಾವ ಹಂತದಲ್ಲೂ ಸವಾಲಾಗಲಿಲ್ಲ. ವೃತ್ತಿಜೀವನದಲ್ಲಿ ಐದು ಬಾರಿ ಜೊಕೊವಿಕ್‌ರನ್ನು ಎದುರಿಸಿರುವ ಸ್ಟ್ರಫ್ ಕೇವಲ ಒಂದು ಸೆಟ್‌ನ್ನು ಜಯಿಸಲು ಯಶಸ್ವಿಯಾಗಿದ್ದಾರೆ.

‘‘ಇದು ನನ್ನಿಂದ ದಾಖಲಾಗಿರುವ ಅತ್ಯಂತ ಉತ್ತಮ ಪ್ರದರ್ಶನವಾಗಿದೆ. ನಾನು ಎದುರಾಳಿಯ ಸರ್ವ್‌ನ್ನು ಗಮನಿಸಲು ಶಕ್ತನಾದೆ’’ ಎಂದು ಹಾರ್ಡ್‌ಕೋರ್ಟ್ ಅಂಗಣದಲ್ಲಿ 600ನೇ ಜಯ ಸಾಧಿಸಿರುವ ಜೊಕೊವಿಕ್ ಹೇಳಿದ್ದಾರೆ.

18ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ ರವಿವಾರ ನಡೆಯಲಿರುವ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ 20ನೇ ಶ್ರೇಯಾಂಕದ ಪಾಬ್ಲೊ ಕರೆನೊ ಬುಸ್ಟಾರನ್ನು ಎದುರಿಸಲಿದ್ದಾರೆ.

ಶಪೊವಾಲೊವ್ ಅಂತಿಮ-16ರ ಸುತ್ತಿಗೆ: ಉತ್ತರ ಅಮೆರಿಕದ ಯುವ ಆಟಗಾರ ಟೇಲರ್ ಫ್ರಿಝ್ ವಿರುದ್ಧ 3-6, 6-3, 4-6, 7-6(5), 6-2 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ಡೆನಿಸ್ ಶಪೊವಾಲೊವ್ ಯುಎಸ್ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.

 ಟೆನಿಸ್‌ನ ಉದಯೋನ್ಮುಖ ಪ್ರತಿಭೆಗಳಾದ 12ನೇ ಶ್ರೇಯಾಂಕದ ಕೆನಡಾದ ಶಪೊವಾಲೊವ್ ಹಾಗೂ 19ನೇ ಶ್ರೇಯಾಂಕದ ಅಮೆರಿಕದ ಪ್ರೀಝ್ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿದ್ದ ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಗೆಲುವಿಗಾಗಿ ಮೂರೂವರೆ ಗಂಟೆಗಳ ಹೋರಾಟ ನಡೆಸಿದರು.

2017ರಲ್ಲಿ ಚೊಚ್ಚಲ ಅಮೆರಿಕನ್ ಓಪನ್‌ನಲ್ಲಿ ಆಡಿದ್ದ ಶಪೊವಾಲೊವ್ ಮೊದಲ ಬಾರಿ ಯುಎಸ್ ಓಪನ್‌ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದು, ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ 7ನೇ ಶ್ರೇಯಾಂಕದ ಡೇವಿಡ್ ಗಫಿನ್‌ರನ್ನು ಎದುರಿಸಲಿದ್ದಾರೆ. ಗಫಿನ್ ಮತ್ತೊಂದು ಪಂದ್ಯದಲ್ಲಿ ಸರ್ಬಿಯದ ಫಿಲಿಪ್ ಕ್ರಾಜಿನೊವಿಕ್‌ರನ್ನು 6-1, 7-6(5), 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಝ್ವೆರೆವ್‌ಗೆ ಜಯ: ಜರ್ಮನಿ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಕೋವಿಡ್-19 ಶಿಷ್ಟಾಚಾರದ ಕಾರಣಕ್ಕೆ 3 ಗಂಟೆ ವಿಳಂಬವಾಗಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಡ್ರಿಯನ್ ಮನ್ನಾರಿನೊರನ್ನು 6-7(4), 6-4,6-2, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಅಂತಿಮ-16ರ ಸುತ್ತು ತಲುಪಿದ ಒಸಾಕಾ: ಸೋಲಿನ ಭೀತಿಯಿಂದ ಪಾರಾದ ಜಪಾನ್ ಆಟಗಾರ್ತಿ ನವೊಮಿ ಒಸಾಕಾ ಉಕ್ರೇನ್‌ನ ಯುವ ಆಟಗಾರ್ತಿ ಮಾರ್ಟಾ ಕೊಸ್ಟ್ ಯುಕ್‌ರನ್ನು 6-3, 6-7(4), 6-2 ಸೆಟ್‌ಗಳ ಅಂತರದಿಂದ ಸೋಲಿಸಿ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಂತಿಮ-16ರ ಸುತ್ತನ್ನು ತಲುಪಿದ್ದಾರೆ.

ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಒಸಾಕಾ ಮೊದಲ ಬಾರಿ ಯುಎಸ್ ಓಪನ್‌ನ ಪ್ರಧಾನ ಸುತ್ತಿನಲ್ಲಿ ಆಡುತ್ತಿರುವ 18ರ ಹರೆಯದ ಮಾರ್ಟಾ ವಿರುದ್ಧ ಎರಡು ಗಂಟೆ ಹಾಗೂ 33 ನಿಮಿಷಗಳ ಹೋರಾಟದಲ್ಲಿ ಗೆಲುವಿನ ನಗೆ ಬೀರಿದರು.

ಕ್ವಿಟೋವಾ ಪ್ರಿ-ಕ್ವಾರ್ಟರ್‌ಫೈನಲ್‌ಗೆ: ಝೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಅಮೆರಿಕದ ಜೆಸ್ಸಿಕಾ ಪೆಗುಲಾರನ್ನು 6-4, 6-3 ನೇರ ಸೆಟ್‌ಗಳಿಂದ ಸೋಲಿಸಿ ಅಮೆರಿಕನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದರು. 2 ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ 28 ಅನಗತ್ಯ ತಪ್ಪುಗಳು ಹಾಗೂ ಐದು ಡಬಲ್ ಫಾಲ್ಟ್‌ಗಳನ್ನು ಎಸಗಿದರೂ ಜೆಸ್ಸಿಕಾ ವಿರುದ್ಧ ಮೊದಲ ಬಾರಿ ಜಯ ಸಾಧಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದರು.

ಆರನೇ ಶ್ರೇಯಾಂಕದ ಕ್ವಿಟೋವಾ ಅಮೆರಿಕದ ಇನ್ನೋರ್ವ ಆಟಗಾರ್ತಿ ಶೆಲ್ಬಿ ರೋಜರ್ಸ್‌ರನ್ನು ಎದುರಿಸಲಿದ್ದಾರೆ. ರೋಜರ್ಸ್ ಅವರು ಮ್ಯಾಡಿಸನ್ ಬ್ರೆಂಗ್ಲೆ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದರು.

ಕ್ವಿಟೋವಾ ಈ ತನಕ ಯುಎಸ್ ಓಪನ್ ಗ್ರಾನ್‌ಸ್ಲಾಮ್ ಸ್ಪರ್ಧೆಯಲ್ಲಿ ಮಾತ್ರ ಸೆಮಿ ಫೈನಲ್ ತಲುಪಲು ವಿಫಲರಾಗಿದ್ದಾರೆ.

  ಕೆರ್ಬರ್ 4ನೇ ರೌಂಡ್‌ಗೆ: ಮಾಜಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಶುಕ್ರವಾರ 20ರ ಹರೆಯದ ಅಮೆರಿಕದ ಆಟಗಾರ್ತಿ ಅನ್ನ್ ಲಿ ಅವರನ್ನು 6-3, 6-4 ಸೆಟ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಯುಎಸ್ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದರು. ಕೆರ್ಬರ್ ಮುಂದಿನ ಸುತ್ತಿನಲ್ಲಿ ಇನ್ನೋರ್ವ ಅಮೆರಿಕದ ಆಟಗಾರ್ತಿ ಜೆನ್ನಿಫರ್ ಬ್ರಾಡಿ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News