ಚುನಾವಣೆಗೆ ಮುನ್ನ ಕೊರೋನ ಲಸಿಕೆ: ಟ್ರಂಪ್ ಭರವಸೆಯಲ್ಲಿ ವಿಶ್ವಾಸವಿಲ್ಲ: ಕಮಲಾ ಹ್ಯಾರಿಸ್

Update: 2020-09-06 17:24 GMT

ವಾಶಿಂಗ್ಟನ್,ಸೆ.5: ಒಂದು ವೇಳೆ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಕೊರೋನ ವೈರಸ್ ಸೋಂಕಿಗೆ ಲಸಿಕೆ ಲಭ್ಯವಾದರೂ ಕೂಡಾ ಅದರ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡುವ ಭರವಸೆಯನ್ನು ತಾನು ನಂಬಲಾರೆ ಎಂದು ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಶನಿವಾರ ಹೇಳಿದ್ದಾರೆ.

  ಒಂದು ವೇಳೆ ನೂತನ ಕೊರೋನ ವೈರಸ್ ಲಸಿಕೆಯ ಲಭ್ಯತೆಯ ಕುರಿತು ಟ್ರಂಪ್ ನೀಡುವ ಭರವಸೆಯಲ್ಲಿ ನನಗೆ ವಿಶ್ವಾಸವಿಲ್ಲ. ನೂತನ ಲಸಿಕೆಯ ಪರಿಣಾಮಕಾರಿತ್ವ ಹಾಗೂ ವಿಶ್ವಸನೀಯತೆಯ ಬಗ್ಗೆ ನಂಬಲರ್ಹ ಮೂಲಗಳಿಂದಲೇ ಮಾಹಿತಿ ದೊರೆಯಬೇಕಾಗಿದೆಯೇ ಹೊರತು ಟ್ರಂಪ್ ಅವರ ಮಾತಿನಲ್ಲಿ ನನಗೆ ಭರವಸೆಯಿಲ್ಲವೆಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

  ಅಮೆರಿಕವನ್ನು ತಲ್ಲಣಗೊಳಿಸಿರುವ ಕೊರೋನ ವೈರಸ್ ಹಾಳಿಯನ್ನು ನಿಯಂತ್ರಿಸುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ತೀವ್ರವಾದ ಒತ್ತಡವನ್ನು ಎದುರಿಸುತ್ತಿದ್ದಾರೆ. ಕೊರೋನ ಸೋಂಕನ್ನು ಮಟ್ಟಹಾಕಲು ಸಾಧ್ಯವಾಗದೆ ಇದ್ದಲ್ಲಿ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸರಕಾರವು ಚುನಾವಣೆಗೆ ಮುನ್ನ ತರಾತುರಿಯಲ್ಲಿ ರಾಜಕೀಯ ಲಾಭಕ್ಕಾಗಿ ಕೋವಿಡ್-19 ಲಸಿಕೆಯನ್ನು ಬಿಡುಗಡೆ ಗೊಳಿಸುವ ಸಾಧ್ಯತೆ ಎಂಬ ಆತಂಕವನ್ನು ಡೆಮಾಕ್ರಾಟರು ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಈವರೆಗೆ ಕೊರೋನ ವೈರಸ್ ಸೋಂಕಿನಿಂದಾಗಿ 1.88 ಲಕ್ಷ ಮಂದಿ ಮೃತಪಟ್ಟಿದ್ದಾರೆ ಹಾಗೂ ದೇಶದ ಆರ್ಥಿಕತೆಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News