ಹಾಂಕಾಂಗ್: ಚುನಾವಣೆ ಮುಂದೂಡಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ

Update: 2020-09-06 17:30 GMT

ಹಾಂಕಾಂಗ್,ಸೆ.5: ಹಾಂಕಾಂಗ್‌ನಲ್ಲಿ ಶಾಸಕಾಂಗ ಚುನಾವಣೆಗಳ ಮುಂದೂಡಿಕೆ ಹಾಗೂ ಚೀನಾ ಹೇರಿರುವ ನೂತನ ಭದ್ರತಾ ಕಾನೂನನ್ನು ವಿರೋಧಿಸಿ ರವಿವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ನೂರಾರು ಜನರ ಮೇಲೆ ಪೊಲೀಸರು ಪೆಪ್ಪರ್‌ಬಾಲ್ ಗುಂಡುಗಳನ್ನು ಎಸೆದಿದ್ದಾರೆ.

ಏಶ್ಯದ ವಾಣಿಜ್ಯಕೇಂದ್ರವಾಗಿರುವ ಹಾಂಕಾಂಗ್‌ನ ಶಾಸಕಾಂಗ ಮಂಡಳಿಗೆ ಸೆಪ್ಟೆಂಬರ್ 6ರಂದು ನಡೆಯಲಿದ್ದ ಚುನಾವಣೆಯನ್ನು ಹಾಂಕಾಂಗ್ ನಾಯಕಿ ಕ್ಯಾರಿ ಲ್ಯಾಮ್ ಅವರು ಕಳೆದ ಜುಲೈನಲ್ಲಿ ಒಂದು ವರ್ಷದ ಮಟ್ಟಿಗೆ ಮುಂದೂಡಿದ್ದರು. ಕೊರೋನ ವೈರಸ್ ಸಾಂಕ್ರಾಮಿಕದ ಕಾರಣದಿಂದಾಗಿ ಚುನಾವಣೆಯನ್ನು ಮುಂದೂಡಿರುವುದಾಗಿ ಅವರು ತಿಳಿಸಿದ್ದರು.

ಹಾಂಕಾಂಗ್‌ನಗರದ ವಾಣಿಜ್ಯ ಚಟುವಟಿಕೆಯ ಕೇಂದ್ರವಾದ ಕೊವ್ಲೆನ್‌ನ ಪೆನಿನ್ಸುಲಾದಲ್ಲಿ ಭಿತ್ತಿಪತ್ರಗಳನ್ನು ಹಿಡಿದ ಸಾವಿರಾರು ಮಂದಿ ಪ್ರತಿಭಟನಕಾರರು , ‘ಹಾಂಕಾಂಗ್ ವಿಮೋಚನೆಗೊಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು. ನೂತನ ಭದ್ರತಾ ಕಾಯ್ದೆಯಡಿ ಇಂತಹ ಘೋಷಣೆಗಳನ್ನು ಕೂಗುವುದನ್ನು ನಿಷೇಧಿಸಲಾಗಿದೆ.ಕಾನೂನು ಬಾಹಿರವಾಗಿ ಗುಂಪುಗೂಡಿದ ಆರೋಪದಲ್ಲಿ ಕನಿಷ್ಠ 30 ಮಂದಿಯನ್ನು ಬಂಧಿಸಲಾಗಿದೆ ಎಂದು ಹಾಂಕಾಂಗ್ ಪೊಲೀಸರು ತಿಳಿಸಿದ್ದಾರೆ.

  ಕ್ಯಾರಿ ಲ್ಯಾಮ್ ಅವರ ಈ ಕ್ರಮದಿಂದಾಗಿ, ಚುನಾವಣೆಯಲ್ಲಿ ಭಾರೀ ಗೆಲುವಿನ ಭರವಸೆ ಹೊಂದಿದ್ದ ಪ್ರಜಾಪ್ರಭುತ್ವವಾದಿ ಪ್ರತಿಪಕ್ಷ ಒಕ್ಕೂಟಕ್ಕೆ ನಿರಾಶೆಯುಂಟು ಮಾಡಿದೆ. ಹಾಂಕಾಂಗ್ ಶಾಸಕಾಂಗ ಸಭೆಯ ಒಟ್ಟು ಸ್ಥಾನಗಳ ಪೈಕಿ ಅರ್ಧದಷ್ಟು ಸ್ಥಾನಗಳಿಗೆ ಮಾತ್ರವೇ ನೇರ ಚುನಾವಣೆ ನಡೆಯುತ್ತದೆ. ಉಳಿದರ್ಧ ಸ್ಥಾನಗಳಿಗೆ ಚೀನಾ ಬೆಂಬಲಿತ ಸದಸ್ಯರ ನೇಮಕವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News