ಬಿಜೆಪಿಯ ‘ದ್ವೇಷ ರಾಜಕಾರಣ’ದ ವಿರುದ್ಧವೂ ಅಣ್ಣಾಮಲೈ ಧ್ವನಿಯೆತ್ತಲಿ

Update: 2020-09-07 08:45 GMT

►ಐಎಎಸ್ ಬಿಟ್ಟು 1 ವರ್ಷ

ವಾಭಾ ಸಂದರ್ಶನ

1. ಐಎಎಸ್ ಬಿಟ್ಟ ಬಳಿಕದ ತಮ್ಮ ಒಂದು ವರ್ಷದ ಅನುಭವ ಹೇಗಿತ್ತು?

-ಐಎಎಸ್ ಬಿಟ್ಟ ನಂತರ ಮೊದಲ ದಿನದಿಂದ ನಾನು ಯಾವ ಕಾರಣಕ್ಕಾಗಿ ಐಎಎಸ್ ಬಿಟ್ಟಿದ್ದೇನೋ ಅದಕ್ಕಾಗಿ ಜನರೊಂದಿಗೆ ಸೇರಿಕೊಂಡು ಇಡೀ ದೇಶ ಸುತ್ತಾಡಿದ್ದೇನೆ. ಜನಾಂದೋಲನಗಳಲ್ಲಿ ಭಾಗಿಯಾಗಿದ್ದೇನೆ. ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಬಂದಿದ್ದೇನೆ.

2. ಈಗಲೂ ಸಸಿಕಾಂತ್ ಸೆಂಥಿಲ್ ಅಂಥ ಅಧಿಕಾರಿ ಐಎಎಸ್ ಬಿಡಬಾರದಿತ್ತು ಎಂದು ಹೇಳುವ ದೊಡ್ಡ ಸಂಖ್ಯೆಯ ಜನರಿದ್ದಾರೆ. ನಿಮಗೆ ಈ ಒಂದು ವರ್ಷದಲ್ಲಿ ಯಾವತ್ತಾದರೂ ಹಾಗೆ ಅನಿಸಿದೆಯೇ?

-ಹೌದು, ಈ ಕೊರೋನ ಬಂದಾಗ ನನಗೆ ಹಾಗೆ ಅನಿಸಿತ್ತು. ನಾನು ದ.ಕ.ಜಿಲ್ಲೆಯಿಂದ ರಾಜೀನಾಮೆ ಕೊಡುವಾಗ ಪತ್ರದಲ್ಲೂ ಕೂಡಾ ಜನರಲ್ಲಿ ಕ್ಷಮೆ ಕೋರಿದ್ದೇನೆ. ಏಕೆಂದರೆ ನನಗೆ ಅರ್ಧದಾರಿಯಲ್ಲಿ ಬಿಟ್ಟು ಹೋದ ಹಾಗೆ ಅನಿಸಿತ್ತು. ಈ ಕೊರೋನ ಸಂದರ್ಭದಲ್ಲಿ ಮಂಗಳೂರಿನಲ್ಲಿ ಇರಬೇಕಾಗಿತ್ತು ಅಥವಾ ಬೇರೊಂದು ಜಿಲ್ಲೆಯಲ್ಲಿ ಸೇವೆಯಲ್ಲಿರಬೇಕಿತ್ತು ಎಂದು ಅನಿಸಿತ್ತು.

3. ಐಎಎಸ್ ಅಧಿಕಾರಿಗಳು ತಮ್ಮ ಹುದ್ದೆಯಲ್ಲೇ ಇದ್ದು ಬಹಳ ಬದಲಾವಣೆ ತರಬಹುದು ಎನ್ನುತ್ತಾರೆ. ನೀವೇನು ಹೇಳುತ್ತೀರಿ?

-ಖಂಡಿತ ತರಬಹುದು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಈಗಿನ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ನಾನು ಕೆಲಸದಲ್ಲಿ ಇದ್ದುಕೊಂಡು ಕೆಲವು ಬದಲಾವಣೆ ತರಬೇಕು ಎಂದು ಕಾದು ಕುಳಿತರೆ ಸರಿಪಡಿಸಲಾಗದಂತಹ ಹಾನಿಯಾಗಿ ಬಿಡುತ್ತದೆ. ಹಾಗಾಗಿ ನನ್ನ ಉದ್ದೇಶ ಎಲ್ಲರೂ ನೆಮ್ಮದಿಯಲ್ಲಿರಬೇಕು ಎಂಬುದು ಬಿಟ್ಟರೆ ಬೇರೇನೂ ಇಲ್ಲ. ಆ ನೆಮ್ಮದಿಗೆ ಹಾನಿಯಾದಾಗ ನಾನು ನನ್ನ ಸೇವೆಗೆ ರಾಜೀನಾಮೆ ಕೊಡಬೇಕಾಯಿತು. ಈ ಕೊರೋನ ಕಾಲದಲ್ಲಿ, ತುಂಬಾ ಜನರು ನಾಗರಿಕ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

4.  ಯುವಜನತೆಗೆ ಎಲ್ಲರೂ ಐಎಎಸ್ ಸೇರಿ ಎಂದು ಸಲಹೆ ಕೊಡುತ್ತಾರೆ. ನಿಮ್ಮಂತಹ ಒಳ್ಳೆಯ ಅಧಿಕಾರಿಗಳು ಆ ಹುದ್ದೆಗೆ ರಾಜೀನಾಮೆ ಕೊಟ್ಟು ಯುವಜನರಿಗೆ ಯಾವ ರೀತಿಯ ಸಂದೇಶ ಕೊಡುತ್ತಿದ್ದೀರಿ?

 -ಇಲ್ಲ. ಇದರಿಂದ ಯುವಜನತೆಗೆ ಯಾವುದೇ ಸಂದೇಶ ಆಗಬಾರದು. ಇವತ್ತಿಗೂ ನಾನು ಎಲ್ಲಾ ಕಡೆಯೂ ಇದನ್ನೇ ಹೇಳುತ್ತಾ ಬಂದಿದ್ದೇನೆ. ಈ ದೇಶದಲ್ಲಿ ನಿಮಗೆ ಸಿಗಬಹುದಾದ ಉತ್ತಮ ಕೆಲಸ ಅಂದರೆ ಐಎಎಸ್. ಡಿಸಿ ಅಥವಾ ಕಲೆಕ್ಟರ್ ಹುದ್ದೆ. ಇದರಲ್ಲಿ ಎರಡು ಮಾತಿಲ್ಲ. ನನ್ನ ತುರ್ತು ನಿರ್ಧಾರ ಅದು ನಿರ್ದಿಷ್ಟ ಪರಿಸ್ಥಿತಿಗೆ ವಿರುದ್ಧವಾಗಿದೆ. ಆದ್ದರಿಂದ ನಾನು ಕೊಡುವ ಸಂದೇಶ ಏನೆಂದರೆ, ಯಾವುದಾದರೂ ಸಮಸ್ಯೆ ಬಂದರೆ, ಆ ಸಮಸ್ಯೆಗೆ ಇಳಿಯದೆ ಅದನ್ನು ಬಗೆಹರಿಸಲು ಆಗುವುದಿಲ್ಲ. ಹಾಗಾಗಿ ನಾನು ಐಎಎಸ್ ತೊರೆದಿದ್ದೇನೆ. ಐಎಎಸ್ ಒಂದು ಉತ್ತಮ ವೃತ್ತಿ. ಎಲ್ಲಾ ಯುವಜನರೂ ಈ ಹುದ್ದೆಗೆ ಸೇರಿಕೊಂಡು ಸೇವೆ ಸಲ್ಲಿಸಬೇಕು. ಅವರಿಗೆ ನನ್ನಿಂದಾಗುವ ಎಲ್ಲಾ ರೀತಿಯ ಬೆಂಬಲ ಖಂಡಿತ ಇದೆ.

5. ನೀವು ಐಎಎಸ್ ಬಿಟ್ಟ ಮೇಲೆ ಸಿಎಎ, ಎನ್‌ಆರ್‌ಸಿ ವಿಷಯದಲ್ಲಿ ಬಹಳ ದೊಡ್ಡ ಚಳವಳಿ ನಡೆಯಿತು. ನೀವು ಅದನ್ನು ನಿರೀಕ್ಷಿಸಿದ್ದೀರಾ?

-ನಾನು ಐಎಎಸ್ ಬಿಡುವ ಸಂದರ್ಭದಲ್ಲೇ ನಮ್ಮ ದೇಶದ ಪ್ರಜಾಪ್ರಭುತ್ವದ ಬಹಳ ಮುಖ್ಯವಾದ ಅಡಿಪಾಯಗಳು ಅಲುಗಾಡುತ್ತಿವೆ ಎಂದು ನನ್ನ ಪತ್ರದಲ್ಲೇ ಬರೆದಿದ್ದೆ. ಅದು ಯಾವುದೆಂದು ಬಹಳ ಜನ ನನ್ನಲ್ಲಿ ಕೇಳಿದ್ದರು. ಮುಂಬರುವ ದಿನಗಳಲ್ಲಿ ಸಮಸ್ಯೆಗಳು ಮತ್ತಷ್ಟು ಜಾಸ್ತಿಯಾಗುತ್ತವೆ ಎಂದು ಆಗಲೇ ಹೇಳಿದ್ದೆ. ನನ್ನ ನಿರೀಕ್ಷೆ ಹೇಗಿತ್ತೋ ಅದೇ ತರಹ ತುಂಬಾ ಘಟನೆಗಳು ನಡೆದವು. ಕಾಶ್ಮೀರದ 370ನೇ ವಿಧಿ ರದ್ದು ವಿಚಾರಗಳಿಂದ ನಾವು ಹೊರಬರುವಷ್ಟರಲ್ಲಿ ಎನ್‌ಆರ್‌ಸಿ ಎಂಬ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಆ ಸಂದರ್ಭದಲ್ಲಿ ಜನರೊಂದಿಗೆ ಒಂದು ವರ್ಷ ಬೆರೆತರೆ ಮಾತ್ರ ಜನ ಚಳವಳಿ ಸಾಧ್ಯ ಎಂದು ನನಗನಿಸಿತ್ತು. ಆದರೆ, ಮೂರೇ ತಿಂಗಳೊಳಗೆ ಅದು ಚಳುವಳಿ ರೂಪ ತಾಳಿದಾಗ, ನನಗೆ ಯಾವ ವಿಷಯದಲ್ಲಿ ಸಂಶಯವಿತ್ತೋ ಅದು ನಿಜವಾಯಿತು. ಏಕೆಂದರೆ, ಜನರು ಬೇಸತ್ತು ಹೋಗಿದ್ದರು. ಜೊತೆಗೆ ಎನ್‌ಆರ್‌ಸಿ ಯನ್ನು ಪ್ರತಿಭಟಿಸಿ ಮುಂದೆ ಬಂದಿದ್ದು ವಿದ್ಯಾರ್ಥಿಗಳು. ಹಾಗಾಗಿ ಅವರೆಲ್ಲರೂ ಬೇಸರದಲ್ಲಿದ್ದಾರೆ ಎಂದು ಎಲ್ಲರಿಗೂ ಗೊತ್ತಾಯಿತು. ಅದೊಂದು ಒಳ್ಳೆಯ ಆಂದೋಲನವಾಗಿತ್ತು.

6.  ನೀವು ಭಾರತದ ಬುನಾದಿ ಕಲ್ಲುಗಳನ್ನೇ ಅಲುಗಾಡಿಸಲಾಗುತ್ತಿದೆ ಎಂದು ಹೇಳಿ ರಾಜೀನಾಮೆ ಕೊಟ್ಟವರು. ಮುಂದಿನ 5 - 10 ವರ್ಷಗಳಲ್ಲಿ ಭಾರತ ಹೇಗೆ ಬದಲಾಗಬಹುದು?

-ನಾನು ಅವತ್ತು ಹೇಳಿದ ಹಾಗೆ ಈ ದೇಶದಲ್ಲಿ ಎರಡೇ ಎರಡು ಶೋಷಿತ ವಿಷಯಗಳು ಇವೆ. ಒಂದು ಜಾತಿ, ಇನ್ನೊಂದು ವರ್ಗ. ಈ ಎರಡು ವಿಷಯಕ್ಕಾಗಿ ಹೋರಾಡಿ ಒಂದು ಮಟ್ಟಕ್ಕೆ ಸಮಾನತೆಯನ್ನು ತಂದಿದ್ದೇವೆ. ಈ ಜಾತಿ ಮತ್ತು ವರ್ಗವನ್ನು ಹಿಂದಕ್ಕೆ ತಳ್ಳಿ ಧರ್ಮವನ್ನು ಮುಂದೆ ತರಲು ಈಗ ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಧರ್ಮದಲ್ಲೂ ಕೆಲವು ಮತಾಂಧರು ಇದ್ದಾರೆ. ಆದರೆ 90 ಶೇಕಡದಷ್ಟು ಜನರು ಶಾಂತಿ ಪ್ರಿಯರು. ಆದರೆ ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚಲೆಂದೇ ಕೆಲವು ಶಕ್ತಿಗಳು ಎಲ್ಲಾ ಧರ್ಮದಲ್ಲೂ ಇರುತ್ತಾರೆ. ಅವರು ಈಗ ಅಧಿಕಾರದಲ್ಲಿದ್ದಾರೆ. ಅದುವೇ ದೊಡ್ಡ ಸಮಸ್ಯೆ. ಅವರು ಇಡೀ ಭಾರತ ದೇಶವನ್ನೇ ಒಂದು ರೀತಿಯಲ್ಲಿ ಪ್ರತ್ಯೇಕ ಮಾಡಬೇಕು, ಒಂದೇ ರೀತಿಯ ಆಲೋಚನೆ ಮಾಡುವವರು ಮಾತ್ರ ಇಲ್ಲಿರಬೇಕು, ಉಳಿದವರು ದೇಶಬಿಟ್ಟು ಹೊರಗೆ ಹೋಗಬೇಕು ಎಂಬ ದೃಷ್ಟಿಯಿಂದ ಕೆಲಸ ಮಾಡುವವರು. ವಾಸ್ತವದಲ್ಲಿ ಇದು ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದಲ್ಲೇ ನಡೆಯುತ್ತಿದೆ. ಇದನ್ನು ನಾವು ಪ್ರಶ್ನೆ ಮಾಡದೆ ಹೋದರೆ ಜನ ಸಾಮಾನ್ಯರಿಗೆ ಇದರಿಂದಾಗಿ ತುಂಬಾ ತೊಂದರೆಯಾಗುತ್ತದೆ ಎಂಬುದು ನನ್ನ ಅನಿಸಿಕೆ. ಈಗ ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣಕ್ಕೂ ಕೈ ಹಾಕಿದ್ದಾರೆ. ಇವರ ಅಂತಿಮ ಗುರಿ ಸಂವಿಧಾನವನ್ನೇ ಬದಲಾಯಿಸುವುದು. ಇವರೆಲ್ಲರೂ ಮುಸ್ಲಿಂ ವಿರೋಧಿ ಅಥವಾ ಕ್ರಿಶ್ಚಿಯನ್ ವಿರೋಧಿ ಅಂತ ಬಹಳ ಜನ ಅಂದುಕೊಂಡಿದ್ದಾರೆ. ಆದರೆ ಇವರು ಸೆಕ್ಯುಲರ್ ವಿರೋಧಿಗಳು. ಇಲ್ಲಿನ ಬಹುತ್ವ, ಜಾತ್ಯತೀತತೆಯನ್ನು ಒಡೆಯುವ ಅವರ ಲಕ್ಷವೇನಿದೆ, ಆ ಗುರಿಯನ್ನು ತಲುಪಲು ಅವರು ಎಲ್ಲಾ ತರಹದ ಪ್ರಯತ್ನಗಳನ್ನೂ ಮಾಡುತ್ತಾರೆ. ರಾಜಕೀಯ ಪಕ್ಷಗಳಿಗೆ ಇವರನ್ನು ಪ್ರಶ್ನಿಸಲು ಆಗಲ್ಲ. ಜನರಿಗೆ ಮಾತ್ರ ಇವರನ್ನು ಪ್ರಶ್ನಿಸಲು ಸಾಧ್ಯ. ಈ ದೇಶ ಹಾಗೂ ಸಂವಿಧಾನವನ್ನು ಉಳಿಸಬೇಕಾದರೆ ಜನರೇ ಧ್ವ್ವನಿ ಎತ್ತಬೇಕಾಗುತ್ತದೆ.

7. ನಿಮ್ಮ ಮಾತು, ಸಾಮಾಜಿಕ ಚಟುವಟಿಕೆಗಳಿಗೆ ಜನರ ಪ್ರತಿಕ್ರಿಯೆ ಹೇಗಿದೆ?

-ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಇದುವರೆಗೂ ಅವರ ಆಲೋಚನೆಗಳು ಹಿಂದೂ-ಮುಸ್ಲಿಂ ಎನ್ನುವುದಾಗಿತ್ತು. ನಾನು ಅವರ ಜೊತೆ ಮಾತನಾಡಿದಾಗ ನಮ್ಮ ಸಮಸ್ಯೆ ಮೂಲಕ್ಕೇ ಬಂದಿದೆ ಎಂಬುದು ಅವರಿಗೆ ಅರ್ಥವಾಯಿತು. ನಮ್ಮ ದೇಶದ ಬಹುತ್ವದ ಮೇಲಿನ ದಾಳಿಯಿಂದ ನಾವು ದೇಶವನ್ನು ರಕ್ಷಿಸಬೇಕು. ಈ ದಾಳಿ ಮಾಡುವವರು ಕೆಲವೇ ಜನರು ಎಂಬುದೂ ಗೊತ್ತಾಗಿದೆ. ಅಂದರೆ ಹಿಂದೂಯಿಸಂ ಮತ್ತು ಹಿಂದುತ್ವ ಇವು ಎರಡೂ ಬೇರೆ ಬೇರೆ ವಿಷಯ. ಹಿಂದೂಯಿಸಂ ಅಂದರೆ ಇತರ ಧರ್ಮಗಳು ಇರುವ ಹಾಗೇ ಒಂದು ಧರ್ಮ. ಆದರೆ ಹಿಂದುತ್ವ ಅನ್ನುವುದು ಒಂದು ರಾಜಕೀಯ ಯೋಜನೆ . ಸಾವರ್ಕರ್ ಬರೆದಿರುವ ಪೊಲಿಟಿಕಲ್ ಪ್ರೊಜೆಕ್ಟ್ ಅದು. ಇದರ ಅರ್ಥ ಬಹಳ ಜನರಿಗೆ ಗೊತ್ತಾಗದೆ ಹಿಂದೂ ವಿರೋಧಿ ತರಹ ಮಾತನಾಡಿದ್ದರು. ಯಾವಾಗ ಒಂದು ಸರಕಾರ ತಮ್ಮದೇ ಸಂಸ್ಥೆಗಳು, ಜನಪ್ರಿಯ ವ್ಯಕ್ತಿಗಳು, ವಿಶ್ವವಿದ್ಯಾನಿಲಯಗಳ ಮೇಲೆ ದಾಳಿ ಮಾಡುತ್ತದೆಯೋ ಆಗ ಜನರಿಗೆ ಗೊತ್ತಾಗಬೇಕು. ಅದು ಗೊತ್ತಾಗಿದೆ ಎಂಬುದು ನನ್ನ ಭಾವನೆ. ಈ ದೇಶದಲ್ಲಿ ಶಾಂತಿ ಬಯಸುವ ಎಲ್ಲರೂ ಕೂಡಾ ಇನ್ನಾದರೂ ಧ್ವನಿಯೆತ್ತಬೇಕು.

8. ಕಳೆದೊಂದು ವರ್ಷದ ನಿಮ್ಮ ಅತ್ಯಂತ ಮರೆಯಲಾಗದ ಒಂದು ಅನುಭವ ಯಾವುದು ?

-ನನಗೆ ಬಹಳ ನೋವು ತಂದ ಅನುಭವ ಅಂದರೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್. ಅಂತಹ ಒಂದು ಘಟನೆ ಆಗುತ್ತದೆ ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ. ಎರಡನೇಯದು ದಿಲ್ಲಿಯಲ್ಲಿ ಆಗಿರುವ ಗಲಭೆಗಳು. ನಮ್ಮ ದೇಶದಲ್ಲಿ ಬಡವರನ್ನು ಬಳಸಿಕೊಂಡು, ಈ ಶಕ್ತಿಗಳು ಬಹಳ ದಿನಗಳಿಂದಲೂ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಾ ಬಂದಿವೆ. ದಿಲ್ಲಿಯಲ್ಲಿ ಆಗಿರುವುದೂ ಅದೇ. ಅಲ್ಲಿ ಗಲಭೆಯಲ್ಲಿ ಸತ್ತವರು ಯಾರೂ ಕೂಡಾ ಶ್ರೀಮಂತರಲ್ಲ. ಎಲ್ಲಾ ಧರ್ಮಗಳ ಬಡ ಜನರು. ಇದು ಕೂಡಾ ನೋವು ತಂದಿರುವ ವಿಷಯ.

9. ನೀವು ಸಮಾಜದಲ್ಲಿ ತರಲು ಬಯಸಿರುವ ಬದಲಾವಣೆ ಏನು ? ಅದಕ್ಕೆ ದಾರಿ ಏನು?

-ಮೊದಲು ಈ ದೇಶದಿಂದ ದ್ವೇಷದ ರಾಜಕೀಯ ಇಲ್ಲವಾಗಬೇಕು. ನನ್ನ ಮೊದಲ ಗುರಿ ಅದು. ಬಡವರ ಬದುಕನ್ನು ಹಾಳು ಮಾಡಬಾರದು. ನಾವು ಕಳೆದ ಎಪ್ಪತ್ತು ವರ್ಷಗಳಿಂದ ಅದನ್ನೇ ಹೇಳಿಕೊಂಡು ಅದಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದೇವೆ. ಈ ಹತ್ತು ವರ್ಷಗಳಲ್ಲಿ ಅದೆಲ್ಲವೂ ತಿರುಗುಮುರುಗುವಾಗುವ ಪರಿಸ್ಥಿತಿ ಬಂದಿದೆ. ಎರಡನೇಯದು, ನಮ್ಮ ಮಕ್ಕಳ ಬದುಕು. ಆ ವಿಷಯದಲ್ಲಿ ನನಗೆ ಯಾವತ್ತೂ ಭಯ ಇರುತ್ತದೆ. ಮಕ್ಕಳ ಬದುಕನ್ನು ನಾವು ಸಂರಕ್ಷಿಸಬೇಕಾದರೆ ಈ ದ್ವೇಷದ ರಾಜಕೀಯ ನಿಲ್ಲಬೇಕು. ಇಲ್ಲಿನ ಬಹುಸಂಖ್ಯಾತರು ಬಯಸುವಂತೆ ಸೌಹಾರ್ದಯುತ ವಾತಾವರಣ ನಿರ್ಮಾಣ ಆಗಬೇಕು. ಅದು ನೆಲೆ ನಿಲ್ಲಬೇಕು. ಈ ನಿಟ್ಟಿನಲ್ಲಿ ದ್ವೇಷದ ರಾಜಕಾರಣವನ್ನು ಒದ್ದೋಡಿಸಲು ನನ್ನಿಂದೇನಾಗಬೇಕೋ ಅದೆಲ್ಲಾ ನಾನು ಮಾಡುತ್ತೇನೆ.

10. ನೀವು ರಾಜಕೀಯಕ್ಕೆ ಬರುತ್ತೀರಿ ಎಂಬ ವದಂತಿ ಇತ್ತು...

-ರಾಜಕೀಯಕ್ಕೆ ಬರುವಷ್ಟರ ಮಟ್ಟಿಗೆ ನಾನು ಬೆಳೆದಿಲ್ಲ. ಈಗಿರುವ ಯಾವ ರಾಜಕೀಯ ಪಕ್ಷಗಳ ಮೇಲೂ ನನಗೆ ನಂಬಿಕೆಯಿಲ್ಲ. ಏಕೆಂದರೆ ಅವುಗಳು ಜನರ ಧ್ವನಿಯಾಗಿ ನಿಂತಿಲ್ಲ. ನಾನು ರಾಜಕೀಯಕ್ಕೆ ಬರಬೇಕಾದರೆ ತುಂಬಾನೆ ಕೆಲಸ ಮಾಡಬೇಕಾಗುತ್ತದೆ. ಜನರ ಜೊತೆಗಿದ್ದು ಓಡಾಡಬೇಕಾಗುತ್ತದೆ. ಅವರ ಪ್ರೀತಿಯನ್ನು ಗಳಿಸಬೇಕಾಗುತ್ತದೆ. ಅವರ ಮನಗೆಲ್ಲಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಅದರ ಬಗ್ಗೆ ನೋಡೋಣ. ರಾಜಕೀಯ ಪ್ರವೇಶ ಪ್ರಾಮಾಣಿಕವಾಗಿ ಆಗಬೇಕು. ಅಡ್ಡಹಾದಿಯಲ್ಲಿ ಆಗುವುದು ನನಗೆ ಇಷ್ಟವಿಲ್ಲ. ಹಾಗೆ ಮಾಡುವುದೂ ಇಲ್ಲ.

11. ರಾಜಕೀಯಕ್ಕೆ ಇಳಿಯದೆ ರಾಜಕೀಯ ಬದಲಿಸಲು ಸಾಧ್ಯವೇ?

-ಖಂಡಿತ ಪ್ರತಿಯೊಬ್ಬರಿಗೂ ಆ ಶಕ್ತಿ ಇದೆ. ಇವತ್ತು ಪ್ರಶಾಂತ್ ಭೂಷಣ್ ಅವರಂತಹ ಒಬ್ಬ ನ್ಯಾಯಾಧೀಶರು ತಮ್ಮ ಮಾತು ಸರಿ ಇದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಹೋರಾಡುವಾಗ, ಗಾಂಧಿಯಂತಹ ಮಹಾತ್ಮರು ನಮ್ಮ ನಡುವೆ ಇದ್ದುಕೊಂಡು ಇಡೀ ಬ್ರಿಟಿಷರನ್ನೇ ಎದುರಿಸಿರುವಾಗ ಅವರೆಲ್ಲಾ ಯಾರೂ ಕೂಡಾ ರಾಜಕೀಯ ಮಾಡಿಲ್ಲ. ಜನರ ವಿಷಯಗಳನ್ನು ಮಾತನಾಡಬೇಕು, ಜನರ ಜೊತೆ ನಿಲ್ಲಬೇಕು. ಅದಕ್ಕೆ ರಾಜಕೀಯ ಎಂದು ಹೆಸರಿದ್ದರೆ ಖಂಡಿತ ಅದು ಮಾಡಬೇಕು. ಆದರೆ, ಚುನಾವಣಾ ರಾಜಕೀಯ ಎಂಬುದು ವಿಭಿನ್ನ ಚೆಂಡಿನ ಆಟ. ನಾನೀಗ ಜನಾಂದೋಲನದಲ್ಲಿ ತಳಮಟ್ಟದ ಜನರೊಂದಿಗೆ ಬೆರೆತು ಬಹಳಷ್ಟು ಕೆಲಸ ಮಾಡಿದ್ದೇನೆ. ನನ್ನ ಅಭಿಪ್ರಾಯದಲ್ಲಿ ರಾಜಕೀಯವನ್ನು ಬದಲಿಸಲು ರಾಜಕೀಯಕ್ಕೆ ಇಳಿಯಬೇಕಾಗಿಲ್ಲ. ಈ ದೇಶದಲ್ಲಿ ನಾವು ನಮ್ಮ ಅಧಿಕಾರವನ್ನೇ ಮರೆತು ಬಿಟ್ಟಿದ್ದೇವೆ. ಈ ಸಚಿವರುಗಳು, ಸರಕಾರ ಎಲ್ಲವೂ ಕೂಡಾ ನಾವು ನಿಯೋಜಿಸಿರುವ ವ್ಯವಸ್ಥೆಗಳು. ನಾವು ಯಾವತ್ತೂ ನಮ್ಮ ಅಧಿಕಾರವನ್ನು ಮರೆತು ಬಿಡಬಾರದು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮುಖ್ಯ. ಎಲ್ಲರೂ ಪ್ರಶ್ನಿಸಬೇಕು, ಧ್ವನಿ ಎತ್ತಬೇಕು. ಅಕ್ಕಪಕ್ಕದಲ್ಲಿ ಅನ್ಯಾಯ ನಡೆಯುವಾಗ ಬಾಯಿ ಮುಚ್ಚಿ ಕುಳಿತುಕೊಳ್ಳಬಾರದು. ಬಾಯಿ ಮುಚ್ಚಿ ಕುಳಿತುಕೊಳ್ಳುವುದೇ ದೇಶದ್ರೋಹ.

12. ಕಣ್ಣನ್ ಗೋಪಿನಾಥನ್ ಅವರಂತಹ ಮಾಜಿ ಐಎಎಸ್ ಅಧಿಕಾರಿಗಳ ಜೊತೆ ಸೇರಿಕೊಂಡು ಏನಾದರೂ ಯೋಜನೆ ಹಾಕಿಕೊಂಡಿದ್ದೀರಾ ?

-ಕಣ್ಣನ್ ಗೋಪಿನಾಥನ್ ಮತ್ತು ನಾನು, ನಮ್ಮಂತಹ ಬಹಳ ಜನ ಇದ್ದಾರೆ. ನಾವು ಇಬ್ಬರು ಐಎಎಸ್‌ಗೆ ರಾಜೀನಾಮೆ ನೀಡಿದವರು. ಹಾಗಾಗಿ ನಮ್ಮ ಹೆಸರು ನಿಮಗೆ ಗೊತ್ತಿರುತ್ತದೆ. ಬಹಳಷ್ಟು ಜನರು ದ್ವೇಷ ರಾಜಕೀಯವನ್ನು ಹೋಗಲಾಡಿಸಲು ನಮ್ಮಿಂದಿಗೆ ಕೈಜೋಡಿಸಿದ್ದಾರೆ. ನಾವೆಲ್ಲರೂ ಅವರ ಜೊತೆಗೆ ಇದ್ದೇವೆ. ಮುಂದಿನ ದಿನಗಳಲ್ಲಿ ಈ ಜನಶಕ್ತಿ ಹೆಚ್ಚುತ್ತಾ ಹೋಗುತ್ತದೆ.

13. ಅಣ್ಣಾಮಲೈ ಬಿಜೆಪಿ ಸೇರಿದ್ದಾರೆ. ಅದರ ಬಗ್ಗೆ ಏನು ಹೇಳುತ್ತೀರಿ...

-ಅಣ್ಣಾಮಲೈ ಒಬ್ಬ ನನ್ನ ಒಳ್ಳೆಯ ಸ್ನೇಹಿತ. ನನ್ನ ಜೊತೆಗೆ ಕೆಲಸ ಮಾಡಿದ್ದಾರೆ. ಯುವಜನರು ರಾಜಕೀಯಕ್ಕೆ ಬರುವುದು ಒಳ್ಳೆಯ ವಿಷಯ. ಅದು ಪ್ರಜಾಪ್ರಭುತ್ವದಲ್ಲಿ ಬೇಕೇಬೇಕು. ಅವರಲ್ಲಿ ನನ್ನ ಮನವಿ ಏನೆಂದರೆ,ಅವರು ಬಿಜೆಪಿಗೆ ಸೇರಲಿ ಯಾವುದೇ ಪಕ್ಷಕ್ಕೆ ಸೇರಲಿ ಯಾವುದೇ ಸಮಸ್ಯೆ ಇಲ್ಲ. ನನಗೆ ಸಮಸ್ಯೆ ಇರುವುದು ದ್ವೇಷದ ರಾಜಕೀ ಯ. ಅದು ಯಾರು ಮಾಡಿದರೂ ಅದಕ್ಕೆ ವಿರೋಧ ಇದೆ. ಅಣ್ಣಾಮಲೈ ಅವರಿಗೂ ಸಂವಿಧಾನದ ಬಗ್ಗೆ ಗೊತ್ತಿದೆ. ಈ ಹಿಂದೆ ಆ ರೀತಿಯಲ್ಲಿ ಅವರು ಕೆಲಸ ಮಾಡಿದ್ದಾರೆ. ಬಿಜೆಪಿ ದ್ವೇಷ ರಾಜಕಾರಣ ನಡೆಸಿದರೂ ಅದರ ವಿರುದ್ಧ ಅಣ್ಣಾಮಲೈ ಧ್ವನಿಯೆತ್ತುತ್ತಾರೆ ಎಂಬ ನಿರೀಕ್ಷೆ ನನಗಿದೆ. ಮುಂದೆ ಕಾದು ನೋಡೋಣ.

14. ಶಾ ಫೈಸಲ್ ಬಹಳ ಕಟುವಾಗಿ ಸರಕಾರವನ್ನು ಟೀಕಿಸಿ ರಾಜೀನಾಮೆ ಕೊಟ್ಟು ಈಗ ಮತ್ತೆ ಐಎಎಸ್‌ಗೆ ಮರಳುವ ಮಾತಾಡುತ್ತಿದ್ದಾರೆ...

-ಶಾ ಫೈಸಲ್ ಅವರ ಬಗ್ಗೆ ಮಾತನಾಡುವುದಕ್ಕೆ ನಮಗೆ ಅರ್ಹತೆ ಇಲ್ಲ. ಏಕೆಂದರೆ, ಕಾಶ್ಮೀರದಂತಹ ಒಂದು ಸ್ಥಳದಲ್ಲಿ ಅದೆಷ್ಟು ದಿನ ಅವರು ಕಷ್ಟಪಟ್ಟಿದ್ದಾರೆ, ತೊಂದರೆ ಅನುಭವಿಸಿದ್ದಾರೆ. ಅವರನ್ನು ಬಂಧಿಸಿ, ಸ್ವಂತ ರಾಜ್ಯದಲ್ಲಿ ಇಷ್ಟು ದಿನ ಇಟ್ಟಾಗ ಅವರ ಮೇಲೆ ಏನು ಪರಿಣಾಮಗಳಾಯಿತು, ಏನು ಒತ್ತಡಗಳಾದವು ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ. ಆದ್ದರಿಂದ ಅದರ ಬಗ್ಗೆ ಯಾರೂ ಪ್ರತಿಕ್ರಿಯಿಸುವುದು ನನ್ನಭಿಪ್ರಾಯದಲ್ಲಿ ಸರಿಯಲ್ಲ. ಒಂದು ಪ್ರಜಾಪ್ರಭುತ್ವ ದೇಶದಲ್ಲಿ ಒಂದು ಇಡೀ ರಾಜ್ಯವನ್ನೇ ಜೈಲನ್ನಾಗಿ ಮಾಡಿಟ್ಟಿರುವುದು ಎಷ್ಟು ದೊಡ್ಡ ಅನ್ಯಾಯ. ಅಲ್ಲಿನ ಶೋಷಿತ ಜನರಿಗೆ ಏನು ಸಹಾಯ ಮಾಡುವುದಕ್ಕೆ ಆಗುತ್ತದೋ ಅದನ್ನು ಶಾ ಫೈಸಲ್ ಮಾಡಬೇಕು. ನನಗೆ ಆ ಬಗ್ಗೆ ಹೇಳುವಂತದ್ದೇನೂ ಇಲ್ಲ. ಆ ವಿಚಾರದಲ್ಲಿ ನಾನು ಶಾ ಫೈಸಲ್ ಹಾಗೂ ಅವರ ನಿರ್ಧಾರಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.

15. ನಿಮ್ಮ ಮುಂದಿನ ದಾರಿ, ಯೋಜನೆಗಳ ಬಗ್ಗೆ ಸ್ವಲ್ಪವಿವರವಾಗಿ ಹೇಳಿ..

-ನಾನು ಕೆಲಸಕ್ಕೆ ರಾಜೀನಾಮೆ ನೀಡಿರುವುದು ಜನರಿಗೆ ಸಮಸ್ಯೆಗಳು ಬಂದಾಗ ಅವರ ಜೊತೆಗೆ ನಿಲ್ಲಬೇಕೆಂಬ ಉದ್ದೇಶದಿಂದ. ಈಗ ನಮ್ಮ ದೇಶದಲ್ಲಿ ಅಧಿಕಾರ ಇರುವವರು ಮತ್ತು ಹಣವಂತರು ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಆದರೆ ಜನರಿಗೆ ಧ್ವನಿಯಾಗುವವರು ಬಹಳ ಕಡಿಮೆ ಆಗುತ್ತಿದ್ದಾರೆ. ಆದರೂ,ಜನರ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವವರು ಈಗಲೂ ಇದ್ದಾರೆ. ಅಂತವರೊಂದಿಗೆ ಸೇರಿ ಕೆಲಸ ಮಾಡಲು ಆಸಕ್ತಿ ಇದೆ. ನಾನು ಅದೇ ದಾರಿಯಲ್ಲಿ ಹೋಗುತ್ತೇನೆ. ನನ್ನಿಂದ ಆಗುವ ಕೆಲಸ ಮಾಡುತ್ತೇನೆ. ಧನ್ಯವಾದಗಳು...

Writer - ಸಂದರ್ಶನ: ಸತ್ಯಾ.ಕೆ.

contributor

Editor - ಸಂದರ್ಶನ: ಸತ್ಯಾ.ಕೆ.

contributor

Similar News